ಮಂಡ್ಯ: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿರುವುದು ತಲೆ ತಗ್ಗಿಸುವ ವಿಚಾರವಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಲ್ಯವಿವಾಹ ಹಾಗೂ ಬಾಲಗರ್ಭಿಣಿಯರ ತಡೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಸಮನ್ವಯ ಹಾಗೂ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 14 ಬಾಲ್ಯವಿವಾಹ ಪ್ರಕರಣಗಳು ಜರುಗಿರುವುದು ತಲೆ ತಗ್ಗಿಸುವ ಸಂಗತಿಯಾಗಿದ್ದು, ಈ ಬಗ್ಗೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ತಿಳಿಸಬೇಕು. ಜೊತೆಗೆ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಇಲಾಖೆಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ ಬಾಲ್ಯವಿವಾಹ ಪ್ರಕರಣ ತಡೆಗಟ್ಟಬೇಕು’ ಎಂದರು.
‘ಜಿಲ್ಲೆಯಲ್ಲಿ ಒಟ್ಟು 60 ಬಾಲ್ಯ ವಿವಾಹ ಕುರಿತು ಬಂದ ದೂರುಗಳಲ್ಲಿ 46 ಬಾಲ್ಯ ವಿವಾಹ ತಡೆಯಲಾಗಿದೆ. ಮಂಡ್ಯ ತಾಲ್ಲೂಕು-12, ಮದ್ದೂರು-3, ಮಳವಳ್ಳಿ-1, ಶ್ರೀರಂಗಪಟ್ಟಣ-4, ಕೆ.ಆರ್.ಪೇಟೆ-12, ನಾಗಮಂಗಲ-5, ಪಾಂಡವಪುರ- 9 ಪ್ರಕರಣ ತಡೆಯಲಾಗಿದ್ದು, ಉಳಿದ 14 ಪ್ರಕರಣಗಳನ್ನು ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹೆಣ್ಣುಮಕ್ಕಳ ಸಂಖ್ಯೆಯನ್ನು ಪಟ್ಟಿ ಮಾಡಿ ಹಾಗೂ 15 ದಿನಗಳಿಗಿಂತ ಹೆಚ್ಚು ಸತತವಾಗಿ ಶಾಲೆಗೆ ಗೈರು ಹಾಜರಾಗುವ ಹೆಣ್ಣು ಮಕ್ಕಳ ಮಾಹಿತಿ ಪಡೆಯಬೇಕು. 18 ವರ್ಷದೊಳಗಿನ ಹೆಣ್ಣು ಮಕ್ಕಳು ಆಧಾರ್ ಕಾರ್ಡ್‌ನಲ್ಲಿ ವಯಸ್ಸನ್ನು ಬದಲಾಯಿಸಿಕೊಂಡು ಸುಳ್ಳು ವಯಸ್ಸಿನ ದಾಖಲೆಗಳನ್ನು ಆಸ್ಪತ್ರೆಗೆ ನೀಡುತ್ತಿರುವುದು ಕೇಳಿ ಬರುತ್ತಿದೆ. ಈ ರೀತಿ ಸುಳ್ಳು ವಯಸ್ಸನ್ನು ಬದಲಾವಣೆ ಮಾಡುವುದು ಕಂಡು ಬಂದಲ್ಲಿ ಅಥವಾ ಸಹಕರಿಸುವವರು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ಭ್ರೂಣಹತ್ಯೆ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಿ. ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತೀವ್ರ ನಿಗಾ ಇಟ್ಟು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಪಿಯುಸಿಗೆ ಪ್ರವೇಶ ಪಡೆಯದೆ ಇರುವ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಿ ಮುಖ್ಯವಾಗಿ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್‌ಪಿ ಗಂಗಾಧರಸ್ವಾಮಿ, ಡಿಎಚ್‌ಒ ಡಾ.ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕ ಎಸ್.ರಾಜಮೂರ್ತಿ, ಆರ್‌ಸಿಎಚ್‌ಒ ಅಧಿಕಾರಿ ಡಾ.ಅನಿಲ್ ಕುಮಾರ್, ಡಿಡಿಪಿಐ ಎಚ್.ಶಿವರಾಮೇಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.