
ಮದ್ದೂರು: ವರ್ಷದಲ್ಲಿ ಕೇವಲ 36 ಗಂಟೆಗಳ ದರ್ಶನ ನೀಡುವ ತಾಲ್ಲೂಕಿನ ಹೆಮ್ಮನಹಳ್ಳಿಯ ಪುರಾಣ ಪ್ರಸಿದ್ಧ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಆರಂಭಗೊಂಡಿತು.
ದೇವಿಯನ್ನು ನಂಬಿ ಬರುವ ಭಕ್ತರ ಬೇಡಿಕೆಗಳನ್ನು ಈಡೇರುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಅಮೃತ ಮಣ್ಣಿನ ದ್ವಾರದ ಮೂಲಕವೇ ತನ್ನ ಭಕ್ತರಿಗೆ ದರ್ಶನ ನೀಡುತ್ತಾಳೆ. ಭಯ, ರೋಗ, ರುಜಿನಗಳನ್ನು ನಿವಾರಿಸಿ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ.
ತಾಲ್ಲೂಕಿನ ತೈಲೂರಮ್ಮನ ಹಬ್ಬದ ಬಳಿಕ ಬರುವ ಈ ಹೆಮ್ಮನಹಳ್ಳಿ ಚೌಡೇಶ್ವರಿ ಹಬ್ಬಕ್ಕೆ ತನ್ನದೇ ಅದ ಹಿರಿಮೆ ಇದೆ. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಎಲ್ಲಾ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆವರಣಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ 12ಕ್ಕೆ ಅಮೃತ ಮಣ್ಣಿನ ದೇವ ದ್ವಾರವನ್ನು ತೆರೆಯಲಾಯಿತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಜಾತ್ರಾ ಮಹೋತ್ಸವ ನಿಮಿತ್ತ ದೇವಾಲಯವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ದೇವದ್ವಾರ ತೆಗೆದ ನಂತ ಹರಕೆ ಮುಡಿ ತೆಗೆಸುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 2.30ರಿಂದ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಸಡಗರ ಸಂಭ್ರಮದಿಂದ ನಡೆಯಿತು. ಸಂಜೆ ಬಂಡಿ ಉತ್ಸವ, ಅಮ್ಮನವರಿಗೆ ಅಭಿಷೇಕ, ಅಲಂಕಾರ ಮತ್ತು ಪೂಜಾ ವಿಧಾನ ನಡೆಯಿತು. ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯಿತು.
‘ಮಾ.21ರಂದು ಬೆಳಿಗ್ಗೆ 4.30ಕ್ಕೆ ಅಮ್ಮನವರ ಅಗ್ನಿಕುಂಡಪ್ರವೇಶ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಅಮ್ಮನವರ ರಥೋತ್ಸವ, ಬಾಯಿಬೀಗ, ರಾತ್ರಿ 10ಕ್ಕೆ ದೇವ ದ್ವಾರವನ್ನು ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ’ ಎಂದು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ನ ಖಜಾಂಚಿ ಎಚ್.ಕೆ. ರಾಜ್‌ಕುಮಾರ್, ಅಧ್ಯಕ್ಷ ಎಚ್.ಕೆ. ಕೃಷ್ಣ, ಕಾರ್ಯದರ್ಶಿ ಎಚ್.ಎಸ್. ಜಯಶಂಕರ್, ಪದಾಧಿಕಾರಿಗಳು ಹಾಗೂ ಮುಖಂಡರು ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿದ್ದಾರೆ.
ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಲು ಹಲವು ಕಡೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಬರುತ್ತಾರೆ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಎಚ್.ಕೆ.ರಾಜ್ ಕುಮಾರ್ ಖಜಾಂಚಿ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್
ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿಯವರು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯು ಭಕ್ತರಲ್ಲಿದ್ದು ವರ್ಷದಲ್ಲಿ ಕೇವಲ 36 ಘಂಟೆಗಳು ಮಾತ್ರ ದೇವಿಯವರ ದರ್ಶನ ಸಿಗುವುದು ಈ ಕ್ಷೇತ್ರದ ವಿಶೇಷಎಚ್.ಎಸ್. ಜಯಶಂಕರ್ ಕಾರ್ಯದರ್ಶಿ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.