ADVERTISEMENT

ಅಬ್ಬೆ ದುಬ್ವಾ ಚರ್ಚ್‌ಗೆ 220 ವರ್ಷ!

ಗಣಂಗೂರು ನಂಜೇಗೌಡ
Published 24 ಡಿಸೆಂಬರ್ 2020, 3:30 IST
Last Updated 24 ಡಿಸೆಂಬರ್ 2020, 3:30 IST
ಶ್ರೀರಂಗಪಟ್ಟಣ ಟೌನ್‌ ಗಂಜಾಂನಲ್ಲಿ, 1800ರಲ್ಲಿ ಸ್ಥಾಪನೆಯಾಗಿರುವ ಅಬ್ಬೆದುಬ್ವಾ ಚರ್ಚ್‌
ಶ್ರೀರಂಗಪಟ್ಟಣ ಟೌನ್‌ ಗಂಜಾಂನಲ್ಲಿ, 1800ರಲ್ಲಿ ಸ್ಥಾಪನೆಯಾಗಿರುವ ಅಬ್ಬೆದುಬ್ವಾ ಚರ್ಚ್‌   

ಶ್ರೀರಂಗಪಟ್ಟಣ: ಕ್ರಿಸ್‌ಮಸ್‌ ಆಚರಣೆಗೆ ಎಲ್ಲೆಡೆ ಸಿದ್ದತೆ ನಡೆಯುತ್ತಿದ್ದು, ಇಲ್ಲಿನ ಗಂಜಾಂನಲ್ಲಿರುವ ಐತಿಹಾಸಿಕ ಅಬ್ಬೆ ದುಬ್ವಾ ಚರ್ಚ್‌ನಲ್ಲೂ ತಯಾರಿ ನಡೆಯುತ್ತಿದೆ.

ಗಂಜಾಂನ ಗುಂಬಸ್‌ ರಸ್ತೆಯಲ್ಲಿರುವ ಈ ಚರ್ಚ್‌ (ಅಮಲೋದ್ಭವ ಮಾತೆ ಮಂದಿರ) 1800ರಲ್ಲಿ ಸ್ಥಾಪನೆಯಾಗಿದೆ. ಭಾರತಕ್ಕೆ ಬಂದ, ಪ್ಯಾರಿಸ್‌ನ ವಿದೇಶಿ ಕ್ರೈಸ್ತ ಮಿಷನರಿ ಸಂಸ್ಥೆ (ಎಇಪಿ)ಗೆ ಸೇರಿದ ಫಾ.ದುಬ್ವಾ 1800ರಿಂದ 1821ರ ವರೆಗೆ ಗಂಜಾಂನಲ್ಲಿ ನೆಲೆಸಿದ್ದರು. ಮೈಸೂರು ಸೀಮೆಯಲ್ಲೇ ಪ್ರಥಮ ಎಂಬಂತೆ ಗಂಜಾಂನಲ್ಲಿ ಕ್ಯಾಥೊಲಿಕ್‌ ಚರ್ಚ್‌ ಸ್ಥಾಪಿಸಿದರು. ಚರ್ಚ್‌ ನಿರ್ಮಿಸಿದ ಬಳಿಕ ಶ್ರೀರಂಗಪಟ್ಟಣ ಆಸುಪಾಸಿನಲ್ಲಿ 21 ವರ್ಷಗಳ ಕಾಲ ಇವರು ಯೇಸುಕ್ರಿಸ್ತನ ಸಂದೇಶ ಸಾರಿದ್ದಾರೆ.

ಚರ್ಚ್‌ನ ಆವರಣ ದಲ್ಲಿ ಶಾಲೆ ಆರಂಭಿಸಿದ್ದ ಫಾ.ಅಬ್ಬೆದುಬ್ವಾ ವಿದ್ಯಾ ಪ್ರಚಾರವನ್ನೂ ಕೈಗೊಂಡರು. 19ನೇ ಶತಮಾನದ ಪ್ರಥಮದಲ್ಲಿ ಮಾರಣಾಂತಿಕವಾಗಿದ್ದ ‘ಸಿಡಬು ರೋಗ’ಕ್ಕೆ ಚುಚ್ಚು ಮದ್ದು ನೀಡಿ ಹಲವಾರು ಜನರನ್ನು ಪಾರು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಪ್ಪಟ ಭಾರತೀಯರಂತೆ ದಿರಿಸು ತೊಡುತ್ತಿದ್ದ ಫಾ.ದುಬ್ವಾ ಸ್ಥಳೀಯ ರಿಂದ ‘ದೊಡ್ಡ ಸ್ವಾಮಿಯೋರು’ ಎಂದೇ ಕರೆಸಿಕೊ ಳ್ಳುತ್ತಿದ್ದರು. ಕನ್ನಡ ಭಾಷೆಯನ್ನೂ ಕಲಿತಿದ್ದರು. ಇಲ್ಲಿನ ಆಚಾರ, ವಿಚಾರ ಕುರಿತು ಫ್ರೆಂಚ್‌ ಭಾಷೆಯಲ್ಲಿ ‘ಹಿಂದೂ ಮ್ಯಾನರ್ಸ್‌, ಕಸ್ಟಮ್ಸ್‌ ಅಂಡ್‌ ಸೆರಿಮನೀಸ್‌’ ಎಂಬ ಕೃತಿಯನ್ನೂ ಫಾ.ದುಬ್ವಾ ರಚಿಸಿದ್ದಾರೆ.

ADVERTISEMENT

ಚರ್ಚ್‌ನ ರಚನೆ: ಅಬ್ಬೆದುಬ್ವಾ ಚರ್ಚ್‌ ಗೋಥಿಕ್‌ ಶೈಲಿಯಲ್ಲಿದೆ. ಪ್ರಾರ್ಥನಾ ಸ್ಥಳದಲ್ಲಿ ಮರದಿಂದ ಕಡೆದಿರುವ ಯೇಸುಪ್ರಭುವಿನ ಶಿಲುಬೆ ಇದೆ. ಸಭಾಂಗಣದಲ್ಲಿ 200 ಜನರು ಒಟ್ಟಿಗೇ ಕುಳಿತು ಪ್ರಾರ್ಥನೆ ಸಲ್ಲಿಸುವಷ್ಟು ಸ್ಥಳಾವಕಾಶವಿದೆ. ಒಳ ಗೋಡೆಗಳ ಮೇಲೆ ಯೇಸುಕ್ರಿಸ್ತನ ಬಾಲ್ಯದಿಂದ ಅಂತ್ಯದ ವರೆಗಿನ ವಿವಿಧ ಸನ್ನಿವೇಶಗಳನ್ನು ಬಿಂಬಿಸುವ ಚಿತ್ರಗಳಿವೆ. ಚರ್ಚ್‌ನ ಬಲ ಭಾಗದಲ್ಲಿ ಫ್ರಾನ್ಸ್‌ನಿಂದ ತಂದಿರುವ, ವಿಶೇಷ ರಿಂಗಣ ಹೊಂದಿರುವ ಲೋಹದ ಗಂಟೆ ಗಮನ ಸೆಳೆಯುತ್ತದೆ. ಫಾ.ದುಬ್ವಾ ಅವರು ಧರಿಸುತ್ತಿದ್ದ ಬಟ್ಟೆಗಳು, ಬಳಸುತ್ತಿದ್ದ ಸಲಕರಣೆಗಳನ್ನು ಇಲ್ಲಿ ಜೋಪಾನವಾಗಿಡಲಾಗಿದೆ.

ಸರಳ ಆಚರಣೆ: ಕೊರೊನಾ ಕಾರಣಕ್ಕೆ ಈ ಬಾರಿ ಅಬ್ಬೆದುಬ್ವಾ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಆಚರಣೆ ಸರಳವಾಗಿ ನಡೆಯ ಲಿದೆ ಎಂದು ಚರ್ಚ್‌ನ ಫಾ.ಥಾಮಸ್‌ ಪೌಲಸ್‌ ತಿಳಿಸಿದ್ದಾರೆ. ಗುರುವಾರ ಸಂಜೆ 7 ಗಂಟೆಗೆ ಹಾಗೂ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಪ್ರಾರ್ಥನೆ ಜರುಗಲಿದೆ. ಹೊರಗಿನ ಊರುಗಳಿಂದಯಾರನ್ನೂ ಆಹ್ವಾನಿಸಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.