
ಮಂಡ್ಯ: ತಾಲ್ಲೂಕಿನ ಕಾರೆಕಟ್ಟೆ ಸಮೀಪದ ರಾಸಾಯನಿಕ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಸಾವನ್ನಪ್ಪಿದ್ದು ಅವರಿಗೆ ಪರಿಹಾರ ನೀಡಬೇಕು. ಕಾರ್ಖಾನೆಗಳಲ್ಲಿ ಮುನ್ನಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಕಾರ್ಮಿಕ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಕಾರ್ಮಿಕ ನಿರೀಕ್ಷಕ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮೃತರ ಕುಟುಂಬಗಳಿಗೆ ಕನಿಷ್ಠ ₹50 ಲಕ್ಷ ಪರಿಹಾರ ನೀಡಬೇಕು. ಮಾಲೀಕರನ್ನು ಹೊಣೆಗಾರಿಕೆ ಮಾಡಬೇಕು. ಗುತ್ತಿಗೆದಾರ ಹಾಗೂ ಕೆಲಸಗಾರರ ಮೇಲೆ ಕ್ರಮ ವಹಿಸುವುದು ಯಾವುದು ನ್ಯಾಯ? ಮೃತ ವ್ಯಕ್ತಿಗಳ ಜೀವತಾವಧಿಯು ಹೆಚ್ಚಿರುವುದರಿಂದ ಅವರಿಗೆ ಕೋಟಿ ಕೋಟಿ ಪರಿಹಾರ ನೀಡಬೇಕು. ಅದನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳು ಕರ್ನಾಟಕದ ಅಸಂಘಟಿತ ಮತ್ತು ಸ್ಕೀಂ ನೌಕರರ ಮೇಲೆ ಮರಣ ಶಾಸನವಾಗುವ ಅಪಾಯವಿದೆ. ರಾಜ್ಯ ಸರ್ಕಾರವು ನೂತನ ಸಂಹಿತೆಯನ್ನು ರಾಜ್ಯಕ್ಕೆ ಪೂರಕವಾಗಿ ವಿಶೇಷ ಅಧಿವೇಶನ ಕರೆದು ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರಿ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ಲಕ್ಷಾಂತರ ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ಕೀಂ ನೌಕರರು ಸೇವೆ ಸಲ್ಲಿಸುತ್ತಿರುತ್ತಾರೆ. ಹೊಸ ಕೈಗಾರಿಕಾ ಸಂಬಂಧಗಳ ಸಂಹಿತೆಯು ಅವರ ಉದ್ಯೋಗ ಭದ್ರತೆಗೆ ಗಂಭೀರ ಬೆದರಿಕೆಯನ್ನು ಹಾಕುತ್ತದೆ ಎಂದು ಆರೋಪಿಸಿದರು.
ವೃತ್ತಿಪರ ಸುರಕ್ಷತಾ, ಆರೋಗ್ಯ ಮತ್ತು ಕಾರ್ಯಕ್ಷೇತ್ರದ ಸಂಹಿತೆ, 2020ರ ಭಾಗ 45ರಲ್ಲಿ, ದಿನಕ್ಕೆ 12 ಗಂಟೆಗಳ (4 ಗಂಟೆ ಓವರ್ ಟೈಮ್ ಸೇರಿ) ಕೆಲಸ ಮಾಡಿಸಲು ಅನುಮತಿ ನೀಡಲಾಗಿದೆ. ಭಾರತದಲ್ಲಿ ಈಗಾಗಲೇ ಶೇ 33 ಕಾರ್ಮಿಕರು ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ. ಈ ನಿಯಮವು ಅವರನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ದೂರಿದರು.
ವೇತನ ಸಂಹಿತೆಯ ‘ಕನಿಷ್ಠ ವೇತನ’ ಪುನರ್ ವ್ಯಾಖ್ಯಾನದಿಂದ ಅವರ ನಿವ್ವಳ ವೇತನ ಶೇ 30ರಿಂದ 50ರಷ್ಟು ಕುಸಿಯಬಹುದು. ಸಾಮಾಜಿಕ ಭದ್ರತಾ ಸಂಹಿತೆಯು ಸಾರ್ವತ್ರಿಕ ಪಿಂಚಣಿಯ ಭರವಸೆ ನೀಡದೇ ಬದಲಾಗಿ ಅವರನ್ನು ತಾತ್ಕಾಲಿಕ ಲಾಭಗಳ ಯೋಜನೆಗಳಿಗೆ ಮಾತ್ರ ಸೀಮಿತಗೊಳಿಸುತ್ತದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಮಹದೇವಮ್ಮ, ಎಂ.ಎಂ.ಶಿವಕುಮಾರ್, ಚಂದ್ರಶೇಖರ್, ಶ್ರೀನಿವಾಸ್, ಆನಂದ್, ಶಶಿಕಲಾ, ನಿಂಗರಾಜು, ಮಹಾಂತೇಶ್, ಬಾಬು, ತಿಮ್ಮೇಗೌಡ, ರಮೇಶ್, ಆನಂದ್‌ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.