ಮದ್ದೂರು (ಮಂಡ್ಯ ಜಿಲ್ಲೆ): ಬಿರು ಬೇಸಿಗೆಯ ತಾಪ ಹೆಚ್ಚಾಗುತ್ತಿದ್ದಂತೆಯೇ ದಣಿವು ನೀಗಿಸುವ ಎಳನೀರಿನ ದರ ದಾಖಲೆಯ ಏರಿಕೆ ಕಂಡಿದೆ.
ಏಷ್ಯಾದಲ್ಲಿಯೇ ದೊಡ್ಡ ಎಳನೀರು ಮಾರುಕಟ್ಟೆಯೆಂದೇ ಹೆಸರಾಗಿರುವ ಮದ್ದೂರಿನ ಎಳನೀರು ಎಪಿಎಂಸಿ ಮಾರುಕಟ್ಟೆಯಲ್ಲಿ ಎಳನೀರು ಒಂದಕ್ಕೆ ₹55ರಿಂದ ₹60ಕ್ಕೆ ರೈತರಿಂದ ವರ್ತಕರು ಖರೀದಿಸುತ್ತಿದ್ದಾರೆ.
ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್‌ನಿಂದ ಮೇ ತಿಂಗಳವರೆಗೆ ಇಲ್ಲಿನ ಎಳನೀರಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ, ಕಳೆದೆರಡು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ, ತೆಂಗು ಬೆಳೆಗೆ ಈ ಭಾಗದಲ್ಲಿ ಕಪ್ಪು ತಲೆಹುಳ ರೋಗ ಹಾಗೂ ನುಸಿ ಪೀಡೆ ರೋಗದ ಕಾಟ ಹೆಚ್ಚಾಗಿದೆ. ಇದರಿಂದ ಎಳನೀರಿನ ಉತ್ಪಾದನೆ ಕಡಿಮೆಯಾಗಿ, ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
‘2023ರಲ್ಲಿ (ಮೇ ತಿಂಗಳ ಅಂತ್ಯದವರೆಗೆ) ಮಾರುಕಟ್ಟೆಗೆ 10.95 ಕೋಟಿ ಎಳನೀರು, 2024ರಲ್ಲಿ 9.62 ಕೋಟಿ ಎಳನೀರು, 2025ರಲ್ಲಿ ಇದುವರೆಗೆ 9.94 ಕೋಟಿ ಎಳನೀರು ತೆಂಗು ಬೆಳೆಗಾರರಿಂದ ಪೂರೈಕೆಯಾಗಿವೆ’ ಎಂದು ಎಳನೀರು ಮಾರುಕಟ್ಟೆಯ ಆಡಳಿತಾಧಿಕಾರಿ ಹಾಗೂ ಹೆಚ್ಚುವರಿ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
‘ಕಳೆದ ವರ್ಷ ಸಾಧಾರಣ ಎಳನೀರು ₹20ರಿಂದ ₹25, ಮಧ್ಯಮ ಗುಣಮಟ್ಟ ಹಾಗೂ ದಪ್ಪ ಎಳನೀರು ₹30ರಿಂದ ₹35 ಹಾಗೂ ಉತ್ತಮ ಗುಣಮಟ್ಟದ ಎಳನೀರು ₹40ರಿಂದ ₹45 ದರವಿತ್ತು. ಈ ವರ್ಷ ಸಾಧಾರಣ ಗುಣಮಟ್ಟದ ಎಳನೀರಿಗೆ ₹30 ರಿಂದ ₹35, ಮಧ್ಯಮ ಎಳನೀರು ₹40ರಿಂದ ₹45 ಹಾಗೂ ಉತ್ತಮ ಗುಣಮಟ್ಟದ ಎಳನೀರಿಗೆ ₹55 ರಿಂದ ₹60 ತಲುಪುವುದರೊಂದಿಗೆ ಸಾರ್ವಕಾಲಿಕ ದಾಖಲೆ ಬೆಲೆ ತಲುಪಿದೆ’ ಎಂದು ಇಲ್ಲಿನ ಮಾರುಕಟ್ಟೆಯ ವರ್ತಕರ ಸಂಘದ ಉಪಾಧ್ಯಕ್ಷ ಉಮೇಶ್ ಮಾಹಿತಿ ನೀಡಿದ್ದಾರೆ.
ಇಲ್ಲಿನ ಎಳನೀರು ಪ್ರಮುಖವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಿಗೆ ಪೂರೈಕೆಯಾಗುವುದರ ಜೊತೆಗೆ ಅಲ್ಲಿ ಬೇಡಿಕೆಯನ್ನೂ ಹೊಂದಿದ್ದು ಪ್ರತಿವರ್ಷ ಕೋಟ್ಯಂತರ ವಹಿವಾಟು ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.