ADVERTISEMENT

ಮುಂದಿನ ಪೀಳಿಗೆಗೆ ಪರಂಪರೆ ಉಳಿಸೋಣ: ಸಚಿವ ವಿ.ಸೋಮಣ್ಣ

ಎರಡು ದಿನಗಳ ಜಲಪಾತೋತ್ಸವಕ್ಕೆ ವರ್ಣರಂಜಿತ ತೆರೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 9:50 IST
Last Updated 21 ಜನವರಿ 2020, 9:50 IST
ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದರು
ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದರು   

ಮಳವಳ್ಳಿ: ‘ಕಾವೇರಿ ನದಿ ತಪ್ಪಲಿನಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಜಲಪಾತೋತ್ಸವ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ ವತಿಯಿಂದ ತಾಲ್ಲೂಕಿನ ಶಿವನಸಮುದ್ರದಲ್ಲಿ ಎರಡು ದಿನಗಳ ಕಾಲ ನಡೆದ ಗಗನಚುಕ್ಕಿ ಜಲಪಾತೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದು ಬಾರಿ ಈ ಹಬ್ಬ ನಿಂತರೆ, ಕಾವೇರಿ ಹಬ್ಬದ ಪರಂಪರೆಗೆ ಧಕ್ಕೆಯಾಗಲಿದೆ. ಮುಂದಿನ ಬಾರಿ ಈ ಹಬ್ಬವನ್ನು ಮಳೆಗಾಲ ಮುಗಿಯುವುದರೊಳಗೆ ಆಚರಿಸಲು ಸೂಚಿಸುತ್ತೇನೆ. ಮಂಡ್ಯ ಜಿಲ್ಲೆಯ ಜನತೆಯ ಸ್ವಾಭಿಮಾನ ಮತ್ತು ಹೃದಯ ಶ್ರೀಮಂತಿಕೆಗೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಇಷ್ಟೊಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿ ಯಶಸ್ವಿ ಮಾಡಿರುವುದು ಇತರ ಜಿಲ್ಲಾಡಳಿತಗಳಿಗೆ ಮಾದರಿಯಾಗಿದೆ’ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಕೆ.ಅನ್ನದಾನಿ, ‘ಕೊಡಗು ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ನದಿ ಎರಡು ಜಲಪಾತ ಸೃಷ್ಟಿ ಮಾಡಿದ್ದು, ಗಗನಚುಕ್ಕಿ ಜಲಪಾತ ನಮ್ಮ ತಾಲ್ಲೂಕಿನಲ್ಲಿರುವುದು ಹೆಮ್ಮೆಯ ವಿಚಾರ. ರಮಣೀಯ ಜಲಪಾತದ ತಪ್ಪಲಿನಲ್ಲಿ ನಡೆಯುತ್ತಿರುವ ಈ ಉತ್ಸವವನ್ನು ಕಾವೇರಿ ಹಬ್ಬವಾಗಿ ಆಚರಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಶ್ರಮಿಸೋಣ’ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಯಾಲಕ್ಕಿಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಉಪ ವಿಭಾಗಾಧಿಕಾರಿ ಸೂರಜ್, ತಹಶೀಲ್ದಾರ್ ಚಂದ್ರಮೌಳಿ, ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುಮಾಲಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.