ADVERTISEMENT

ನಾಗಮಂಗಲ: ವಿರೋಧದ ನಡುವೆಯೂ ವಾಣಿಜ್ಯ ಮಳಿಗೆ ಉದ್ಘಾಟನೆ

ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಜೆಡಿಎಸ್– ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 3:10 IST
Last Updated 18 ಆಗಸ್ಟ್ 2022, 3:10 IST
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ವಾಣಿಜ್ಯಮಳಿಗೆ ಕಟ್ಟಡವನ್ನು ಜೆಡಿಎಸ್‌ ವಿರೋಧದ ನಡುವೆಯೂ ಕಾಂಗ್ರೆಸ್‌ ಬೆಂಬಲಿತ ಆಡಳಿತ ಮಂಡಳಿಯವರು ಉದ್ಘಾಟಿಸಿದರು
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ವಾಣಿಜ್ಯಮಳಿಗೆ ಕಟ್ಟಡವನ್ನು ಜೆಡಿಎಸ್‌ ವಿರೋಧದ ನಡುವೆಯೂ ಕಾಂಗ್ರೆಸ್‌ ಬೆಂಬಲಿತ ಆಡಳಿತ ಮಂಡಳಿಯವರು ಉದ್ಘಾಟಿಸಿದರು   

ನಾಗಮಂಗಲ: ತಾಲ್ಲೂಕಿನ ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಮಳಿಗೆಗಳನ್ನುಜೆಡಿಎಸ್ ಬೆಂಬಲಿತ ನಿರ್ದೇಶಕರ ವಿರೋಧದ ನಡುವೆಯೂ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಬುಧವಾರ ಉದ್ಘಾಟಿಸಿತು.

ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯಿದ್ದು, ಸಂಘದಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಂದ ಉದ್ಘಾಟಿಸಲು ಸಂಘದ ಸಭೆಯಲ್ಲಿ ತೀರ್ಮಾನಿಸಿ ಬುಧವಾರ ದಿನಾಂಕ ನಿಗದಿಪಡಿಸಲಾಗಿತ್ತು.

ಜೆಡಿಎಸ್ ಬೆಂಬಲಿತ ನಿರ್ದೇಶಕರು ಶಿಷ್ಟಾಚಾರದಂತೆ ಕ್ಷೇತ್ರದ ಶಾಸಕ ಸುರೇಶ್‌ಗೌಡ ಅವರನ್ನು ಆಹ್ವಾನಿಸಿ ವಾಣಿಜ್ಯ ಮಳಿಗೆಗಳ ಕಟ್ಟಡ ಉದ್ಘಾಟಿಸಬೇಕು. ಇಲ್ಲದಿದ್ದರೆ ಕಟ್ಟಡ ಉದ್ಘಾಟಿಸಬಾರದು ಎಂದು ಪಟ್ಟುಹಿಡಿದಿದ್ದರು. ಶಾಸಕ ಸುರೇಶ್‌ಗೌಡ ಪರೋಕ್ಷವಾಗಿ ಅಧಿಕಾರಿಗಳ ಮೇಲೆ ಒತ್ತಡ ತಂದು ಶಿಷ್ಟಾಚಾರ ಉಲ್ಲಂಘಿಸಿರುವ ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತಮಂಡಳಿ ವಿರುದ್ಧ ಕ್ರಮ ಕೈಗೊಂಡು ಉದ್ಘಾಟನಾ ಕಾರ್ಯಕ್ರಮ ರದ್ದುಪಡಿಸುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ADVERTISEMENT

ತಹಶೀಲ್ದಾರ್‌ ನಂದೀಶ್ ಅವರು ಪರಿಶೀಲನೆ ನಡೆಸಿ ಉದ್ಘಾಟನಾ ಕಾರ್ಯಕ್ರಮ ರದ್ದುಪಡಿಸಬೇಕೆಂದು ಸಂಘದ ಆಡಳಿತ ಮಂಡಳಿಗೆ ಸೂಚಿಸಿದರು. ಇದಕ್ಕೆ ಸ್ಪಂದಿಸದ ಆಡಳಿತ ಮಂಡಳಿಯವರು ಸಹಕಾರ ಕ್ಷೇತ್ರಕ್ಕೆ ಯಾವುದೇ ಶಿಷ್ಟಾಚಾರ ಅನ್ವಯವಾಗುವುದಿಲ್ಲ ಎಂದು ಉತ್ತರಿಸಿ, ಸರ್ಕಾರದ ಸಹಾಯ ಅಥವಾ ಅನುದಾನದಿಂದ ಕಟ್ಟಡ ನಿರ್ಮಿಸಿಲ್ಲ. ಸಂಘದ ಸದಸ್ಯರ ಷೇರು ಹಣದ ಜೊತೆಗೆ ನಬಾರ್ಡ್‌ ಬ್ಯಾಂಕ್‌ನಿಂದ ಸಾಲ ಪಡೆದಿರುವ ಹಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಇದರಲ್ಲಿ ಯಾರ ಹಸ್ತಕ್ಷೇಪವೂ ಬೇಕಾಗಿಲ್ಲ. ಕಟ್ಟಡವನ್ನು ಉದ್ಘಾಟಿಸಲಾಗಿದೆ ಎಂದು ಉತ್ತರಿಸಿದರು.

‘ಶಾಸಕರ ಕೈಗೊಂಬೆಯಂತೆ ಕೆಲಸ ಮಾಡಿರುವ ತಹಶೀಲ್ದಾರ್‌ ನಂದೀಶ್ ಅವರು ಸಹಕಾರ ಸಂಘಕ್ಕಿರುವ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿ ಉದ್ಘಾಟನೆ ಕಾರ್ಯಕ್ರಮ ಮುಂದೂಡುವಂತೆ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ನಮ್ಮ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ಮುಂದೂಡಿರುವುದಾಗಿ ಬಲವಂತದಿಂದ ಪತ್ರ ಬರೆಸಿಕೊಂಡಿದ್ದಾರೆ’ ಎಂದು ದೂರಿದರು.

ತಹಶೀಲ್ದಾರ್‌ ಸ್ಥಳಕ್ಕೆ ಬರುವ ಮುನ್ನವೇ ಸಂಘದ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ತಿಮ್ಮೇಗೌಡ ತಿಳಿಸಿದರು. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಸಂಘದ ನಿರ್ದೇಶಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಉದ್ಘಾಟನಾ ಸಮಾರಂಭದ ನಾಮಫಲಕದ ಕಲ್ಲು ಮತ್ತು ವಾಣಿಜ್ಯ ಮಳಿಗೆಗಳನ್ನು ವಶಕ್ಕೆ ಪಡೆಯಬೇಕೆಂದು ಜೆಡಿಎಸ್ ಬೆಂಬಲಿತ ನಿರ್ದೇಶಕರುಒತ್ತಾಯಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಬೆಂಬಲಿತರು ಅವಕಾಶ ಕೊಡುವುದಿಲ್ಲ ಎಂದು ಪಟ್ಟುಹಿಡಿದರು.

ವಿರೋಧದ ನಡುವೆಯೂ ಸಾಲಸೌಲಭ್ಯದ ಚೆಕ್‌ ವಿತರಣೆ:ಎರಡೂ ಬಣಗಳ ವಾದ ವಿವಾದಗಳಿಂದಾಗಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಈ ಮಧ್ಯೆ ತಾಲ್ಲೂಕಿನ 13 ಸ್ತ್ರೀ ಶಕ್ತಿ ಸಂಘಗಳಿಗೆ ಒಟ್ಟು ₹54.5 ಲಕ್ಷ ಸಾಲ ಸೌಲಭ್ಯದ ಚೆಕ್ ವಿತರಿಸಲಾಯಿತು.

ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು.ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷ ನಂಜುಂಡೇಗೌಡ, ಎ.ಕುಮಾರ್, ಕೃಷ್ಣೇಗೌಡ(ಸುಬ್ಬಣ್ಣ), ಸಿ.ಎಚ್.ಮಂಜೇಗೌಡ, ನಿರ್ದೇಶಕರಾದ ಗುರುಮೂರ್ತಿ, ಬಸವರಾಜು, ಜಿ.ಎಸ್.ಅಭಿಷೇಕ್, ಸಿಇಒ ಮೋಹನ್‌ಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.