ADVERTISEMENT

ಕಾಂಗ್ರೆಸ್‌ ಶಾಸಕರಿಗೆ ಆಫರ್‌: ಬಿಜೆಪಿಯಿಂದ ದೂರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 0:25 IST
Last Updated 27 ಆಗಸ್ಟ್ 2024, 0:25 IST
ಶಾಸಕ ಪಿ.ರವಿಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ ಘಟಕದ ವಕ್ತಾರ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಪಕ್ಷದ ಮುಖಂಡರು ಮಂಡ್ಯದ ಪಶ್ಚಿಮ ಪೊಲೀಸ್‌ ಠಾಣೆಗೆ ಸೋಮವಾರ ದೂರು ಸಲ್ಲಿಸಿದರು
ಶಾಸಕ ಪಿ.ರವಿಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ ಘಟಕದ ವಕ್ತಾರ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಪಕ್ಷದ ಮುಖಂಡರು ಮಂಡ್ಯದ ಪಶ್ಚಿಮ ಪೊಲೀಸ್‌ ಠಾಣೆಗೆ ಸೋಮವಾರ ದೂರು ಸಲ್ಲಿಸಿದರು   

ಮಂಡ್ಯ: ‘ಕಾಂಗ್ರೆಸ್ ಶಾಸಕರಿಗೆ ಪಕ್ಷ ಬಿಟ್ಟು ಬರಲು ಬಿಜೆಪಿಯ ಕೇಂದ್ರ ನಾಯಕರು ₹100 ಕೋಟಿ ಆಫರ್‌ ಮಾಡುತ್ತಿದ್ದಾರೆ’ ಎಂದು ಆಧಾರರಹಿತ ಮತ್ತು ದುರುದ್ದೇಶಪೂರ್ವಕ ಆರೋಪ ಮಾಡಿರುವ ಮಂಡ್ಯ ಶಾಸಕ ಪಿ.ರವಿಕುಮಾರ್‌ (ರವಿ ಗಣಿಗ) ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಅಶ್ವತ್ಥನಾರಾಯಣ ಮತ್ತು ಜಿಲ್ಲಾ ಘಟಕದ ವಕ್ತಾರ ಸಿ.ಟಿ.ಮಂಜುನಾಥ್‌ ನೇತೃತ್ವದಲ್ಲಿ ಪಕ್ಷದ ಮುಖಂಡರು ಇಲ್ಲಿನ ಪಶ್ಚಿಮ ಪೊಲೀಸ್‌ ಠಾಣೆಗೆ ಸೋಮವಾರ ದೂರು ಸಲ್ಲಿಸಿದರು.

‘ಕಾಂಗ್ರೆಸ್‌ ಸರ್ಕಾರ ಪತನಗೊಳಿಸಲು ಆಪರೇಷನ್‌ ಕಮಲ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ಸುಳ್ಳು ಹೇಳಿಕೆ ನೀಡಲಾಗಿದೆ. ಇದರಿಂದ ಬಿಜೆಪಿ ವರ್ಚಿಸ್ಸಿಗೆ ಧಕ್ಕೆಯಾಗುವ ಸಂಭವವಿದೆ. ನಾಯಕರ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಲು ಯತ್ನಿಸಿದ್ದಾರೆ. ಈ ಕಾರಣದಿಂದ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ನನ್ನ ಬಳಿ ದಾಖಲೆಗಳಿವೆ:

ADVERTISEMENT

ಬಿಜೆಪಿಯವರು ನೀಡಿದ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರವಿಕುಮಾರ್, ‘ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ₹2 ಸಾವಿರ ಕೋಟಿ ಆರೋಪ ಮಾಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಬಿಜೆಪಿ ದೂರು ಕೊಡಲಿ. ಶ್ರೀನಿವಾಸಗೌಡ ವಿರುದ್ಧವೂ ದೂರು ಕೊಡಬೇಕು’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್‌ ಶಾಸಕರಿಗೆ ಆಫರ್‌ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅದನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಕೊಡುತ್ತೇನೆ. ಯಾವ ಹೋಟೆಲ್‌ನಲ್ಲಿ ಕುಳಿತು ಮಾತನಾಡಿದ್ದಾರೆ ಎಂಬ ದಾಖಲೆಯನ್ನೂ ಕೊಡುತ್ತೇನೆ’ ಎಂದು ಸವಾಲು ಹಾಕಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.