ADVERTISEMENT

ಮೈತ್ರಿಕೂಟಕ್ಕೆ ಒಳಬೇಗುದಿಯ ಆತಂಕ: ಕಾಂಗ್ರೆಸ್‌ ಅತೃಪ್ತಿಯಿಂದ ಬಿಜೆಪಿಗೆ ಲಾಭ?

ಸಾಂಪ್ರದಾಯಿಕ ಎದುರಾಳಿಗಳ ನಡುವೆ ಹೊಂದಾಣಿಕೆ, ಕಾಂಗ್ರೆಸ್‌ ಅತೃಪ್ತಿಯಿಂದ ಬಿಜೆಪಿಗೆ ಲಾಭ?

ಎಂ.ಎನ್.ಯೋಗೇಶ್‌
Published 28 ಅಕ್ಟೋಬರ್ 2018, 20:29 IST
Last Updated 28 ಅಕ್ಟೋಬರ್ 2018, 20:29 IST
   

ಮಂಡ್ಯ: ದಿಗ್ಗಜರ ಹೋರಾಟ, ಗುರು–ಶಿಷ್ಯರ ಸಮರ, ಸ್ಟಾರ್‌ ನಟ– ನಟಿಯರ ಕದನಕ್ಕೆ ವೇದಿಕೆಯಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ವರ್ಣರಂಜಿತ ಸಂಸದರನ್ನು ಕಂಡಿದೆ. ರಮ್ಯಾ, ಅಂಬರೀಷ್‌ ಆಕರ್ಷಣೆ ಈಗಿಲ್ಲದಿದ್ದರೂ ಸಕ್ಕರೆ ನಾಡಿನ ರಾಜಕಾರಣದ ಜಿದ್ದಾಜಿದ್ದಿಗೇನೂ ಕೊರತೆ ಇಲ್ಲ. ಈ ಹಿಂದೆ ಜಿದ್ದಾಜಿದ್ದಿಯಲ್ಲಿ ತೊಡಗುತ್ತಿದ್ದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಯೇ ಎದುರಾಳಿಯಾಗಿದೆ.

ಮೂರು ಉಪಚುನಾವಣೆ ಕಂಡಿದ್ದ ಕ್ಷೇತ್ರ ಈಗ ನಾಲ್ಕನೇ ಉಪಸಮರಕ್ಕೆ ಸಜ್ಜುಗೊಂಡಿದೆ. ಎಂ.ಕೆ.ಶಿವನಂಜಪ್ಪ ನಿಧನ ರಾದಾಗ ಕ್ಷೇತ್ರದಲ್ಲಿ ಮೊದಲ ಉಪ ಚುನಾವಣೆ (1968) ನಡೆದಿತ್ತು. ನಂತರ ಎಸ್‌.ಎಂ.ಕೃಷ್ಣ (1972), ಎನ್‌.ಚಲುವರಾಯಸ್ವಾಮಿ (2013) ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆಗಳು ನಡೆದಿವೆ. ಸಿ.ಎಸ್‌.ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾದ ಎಸ್‌.ಎಂ.ಕೃಷ್ಣ, ಅಂಬರೀಷ್‌ ಕೇಂದ್ರ ಸಚಿವರಾಗಿದ್ದರು. ಕೃಷ್ಣ ಅವರ ನಂತರ ಯಾವೊಬ್ಬ ಸಂಸದರೂ ಸಂಸತ್‌ನಲ್ಲಿ ಜಿಲ್ಲೆಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಲಿಲ್ಲ ಎಂಬ ಕೊರಗಿದೆ.

ADVERTISEMENT

ಕ್ಷೇತ್ರದಲ್ಲಿ ಬಿಜೆಪಿಗೆ ಇಲ್ಲಿಯವರೆಗೂ ನೆಲೆ ಸಿಕ್ಕಿಲ್ಲ. ಪ್ರತಿ ಚುನಾವಣೆಯಲ್ಲಿ ಜೆಡಿಎಸ್‌– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಡುತ್ತದೆ. ಸ್ಥಳೀಯ ಕಾಂಗ್ರೆಸ್‌ ಮುಖಂಡರಿಗೆ ಮೈತ್ರಿ ಇಷ್ಟವಿಲ್ಲದಿದ್ದರೂ ವರಿಷ್ಠರ ಸೂಚನೆಯ ಮೇರೆಗೆ ಮೈತ್ರಿಧರ್ಮಕ್ಕೆ ಶರಣಾಗ
ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬಿಜೆಪಿ ಲಾಭವಾಗುವುದೇ?: ಮೈತ್ರಿ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ವಿರುದ್ಧ ಕ್ಷೇತ್ರದಲ್ಲಿ ನಕಾರಾತ್ಮಕ ಪ್ರಚಾರ ನಡೆದಿದೆ. ವಕೀಲ– ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣವನ್ನು ಮುನ್ನೆಲೆಗೆ ತಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿದ್ದಾರೆ. ಜೊತೆಗೆ ಅವರು ಎಲ್ಲಾ ಪಕ್ಷಗಳನ್ನೂ ನೋಡಿ ಬಂದವರು ಎಂಬ ಹಣೆಪಟ್ಟಿ ಇದೆ. ಈ ಅಂಶಗಳು ಬಿಜೆಪಿಗೆ ಲಾಭವಾಗುತ್ತವೆ. ಅಲ್ಲದೇ ಚಲುವರಾಯಸ್ವಾಮಿ ಸೇರಿ ಅತೃಪ್ತ ಕಾಂಗ್ರೆಸ್‌ ಮುಖಂಡರ ಬೆಂಬಲಿಗರು ಬಿಜೆಪಿಗೆ ಮತ ಹಾಕುತ್ತಾರೆ ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರವಾಗಿದೆ. ಒಳ ಒಪ್ಪಂದವೂ ಸಾಕಷ್ಟು ಕೆಲಸ ಮಾಡುತ್ತಿದೆ.

ಮತಗಳ ಅಂತರದ ಚರ್ಚೆ: ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಕೆ.ಆರ್‌.ನಗರ ಸೇರಿ ಎಂಟೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರೇ ಇದ್ದಾರೆ. ಜೊತೆಗೆ ಕಾಂಗ್ರೆಸ್‌ ಬೆಂಬಲವೂ ಇರುವ ಕಾರಣ ಮೈತ್ರಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂಬ ಅಭಿಪ್ರಾಯ ಜೆಡಿಎಸ್‌ ಮುಖಂಡರಲ್ಲಿ ಅಚಲವಾಗಿದೆ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ‘ಹೊಸಬ’ ಎಂಬ ಹಣೆಪಟ್ಟಿ ಕೊಟ್ಟಿದ್ದಾರೆ. ಇದೂ ಜೆಡಿಎಸ್‌ ವಿಶ್ವಾಸಕ್ಕೆ ಬಲನೀಡುವಂತಿದೆ. ಆದರೆ ಶಿವರಾಮೇಗೌಡ ಎಷ್ಟು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ಚರ್ಚೆ ಗರಿಗೆದರಿದೆ. 1.80 ಲಕ್ಷ ಮತಗಳ ಅಂತರದ ಗೆಲುವು ಪಡೆದ ದಾಖಲೆ ಅಂಬರೀಷ್‌ ಹೆಸರಲ್ಲಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಟಿಕೆಟ್‌ ಪಡೆಯಲು ಗೆಲುವಿನ ಅಂತರ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.

‘ಜಿಲ್ಲೆಯಲ್ಲಿ ಬಹುಸಂಖ್ಯಾತ ಒಕ್ಕಲಿಗರ ಮತಗಳು ಜೆಡಿಎಸ್‌ ಬೆನ್ನಿಗಿವೆ. ಮೈತ್ರಿಯಿಂದಾಗಿ ಕಾಂಗ್ರೆಸ್‌ ಮತಗಳೂ ಹೆಚ್ಚುವರಿಯಾಗಿ ಸಿಗಲಿವೆ’ ಎಂಬ ಲೆಕ್ಕಾಚಾರ ಆ ಪಕ್ಷದ್ದು.

ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ನಂದೀಶ್‌ ಕುಮಾರ್‌, ಎಂ.ಹೊನ್ನೇಗೌಡ, ಕೌಡ್ಲೆ ಚನ್ನಪ್ಪ, ಶಂಭುಲಿಂಗೇಗೌಡ, ಬಿ.ಎಸ್‌.ಗೌಡ, ನವೀನ್‌ ಕುಮಾರ್‌, ಕೆ.ಎಸ್‌.ರಾಜಣ್ಣ ಇದ್ದಾರೆ.

***

ಒಟ್ಟು ಮತದಾರರು: 16,81,678

ಪುರುಷರು: 8,42,017

ಮಹಿಳೆಯರು: 8,39,519

ಇತರೆ: 142

ಸೇವಾ ಮತದಾರರು: 717

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.