ADVERTISEMENT

ಮೈಸೂರು| ಸಂವಿಧಾನ ಒಪ್ಪದ ಮನಸ್ಥಿತಿ ಕೆಲವರಲ್ಲಿದೆ: ಜ್ಞಾನಪ್ರಕಾಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 3:16 IST
Last Updated 9 ಫೆಬ್ರುವರಿ 2026, 3:16 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು   

ಮಂಡ್ಯ: ಸಂವಿಧಾನ ಒಪ್ಪುವುದಿಲ್ಲ ಎನ್ನುವ ಮನಸ್ಥಿತಿ ಕೆಲವರಲ್ಲಿ ಇರುವುದರಿಂದ ಅದನ್ನು ಸಂಪೂರ್ಣವಾಗಿ ಜಾರಿ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ, ಅದಕ್ಕೆ ಅವಕಾಶ ನೀಡಬಾರದು ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. 

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಸಂವಿಧಾನ ಸೇನೆ(ಕೆಎಸ್‌ಎಸ್) ವತಿಯಿಂದ ಸಂವಿಧಾನ ಜಾರಿ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮನೆಯಲ್ಲಿ ಊರಿನಲ್ಲಿರುವ ದೇವರನ್ನೆಲ್ಲ ಪೂಜಿಸಿ ಮನುವಾದಕ್ಕೆ ಅವಕಾಶ ನೀಡಿರುವ ನೀವು, ಬೀದಿಗೆ ಬಂದು ಸಂವಿಧಾನ ಜಾರಿ ಆಗಬೇಕೆಂದರೆ ಹೇಗೆ? ಈ ಹಿಂದೆಯೇ ರಾಮಲೀಲ ಮೈದಾನದಲ್ಲಿ ಸಂವಿಧಾನ ಜಾರಿ ಮಾಡಬಾರದೆಂದು ಪ್ರತಿಭಟನೆ ನಡೆಸಲಾಗಿತ್ತು. ಈಗ ಸಂವಿಧಾನ ವಿರೋಧಿಗಳೇ ಅಧಿಕಾರ ನಡೆಸುತ್ತಿದ್ದಾರೆ. ನೀವು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಲು ಹೋಗುತ್ತೀರಾ ಅದನ್ನು ಬಿಟ್ಟು ಮೊದಲು ನಿಮ್ಮ ತಂದೆ ತಾಯಿಗೆ ಊಟ ಹಾಕಿ ಚೆನ್ನಾಗಿ ನೋಡಿಕೊಳ್ಳಿ’ ಎಂದು ತಿಳಿಸಿದರು.

ADVERTISEMENT

ಅಸ್ಪೃಶ್ಯರ ನೋವು ಯಾರಿಗೂ ಗೊತ್ತಿಲ್ಲ. ದಲಿತರು ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ಕಿತ್ತು ಹಾಕುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ದಲಿತ ಮುಖ್ಯಮಂತ್ರಿ ಆಗಬೇಕೆನ್ನುವ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂಬುದನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಳಿದರೆ ಅವರು ಹೈಕಮಾಂಡ್‌ ಇದೆ ಎನ್ನುತ್ತಾರೆ, ಹಾಗಾದರೆ ಇವರು ಯಾರು, ಕಾಂಗ್ರೆಸ್‌ನಲ್ಲಿ ಇವರ ಸ್ಥಾನ ಏನು ಎಂದು ಪ್ರಶ್ನಿಸಿದರು.

ರಾಜ್ಯ ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ ಮಾತನಾಡಿ, ಸಂವಿಧಾನ ಮೂಲ ಬೇರುಗಳನ್ನೇ ಹಂತಹಂತವಾಗಿ ಕತ್ತರಿಸಲಾಗುತ್ತಿದೆ. ದೇಶದಲ್ಲಿ ಶೇ 43ರಷ್ಟು ಕಡು ಬಡವರಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿ, ಎಸ್‌ಟಿ ಸಮುದಾಯ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಿದೆ. 2004 ರಿಂದ ಇಲ್ಲಿಯವರೆಗೆ ಎಸ್‌ಸಿಎಸ್‌ಪಿಯಲ್ಲಿ ₹2.3 ಲಕ್ಷ ಕೋಟಿ ಮತ್ತು ಟಿಎಸ್‌ಪಿಯಲ್ಲಿ ₹79 ಸಾವಿರ ಕೋಟಿ ಖರ್ಚಾಗಿದೆ. ಇಷ್ಟಿದ್ದರೂ ಆರ್ಥಿಕವಾಗಿ ಸಬಲರಾಗದೇ ಹಿಂದೆ ಹೇಗಿದ್ದರೋ ಹಾಗೆಯೇ ನಮ್ಮ ಜನ ಇದ್ದಾರೆ ಎಂದು ವಿಷಾದಿಸಿದರು.

ಸಂವಿಧಾನ ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ ಹಾಗೂ ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಮುಖಂಡರಾದ ಸುರೇಶ್‌ಕಂಠಿ, ಅಭಿ ಹನಕೆರೆ, ಎಸ್.ಸಿದ್ದಯ್ಯ, ಗುರುಮೂರ್ತಿ, ಕುಮಾರ್ ಗಂಗವಾಡಿ, ಟಿ.ಡಿ.ನಾಗರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.