ನಾಗಮಂಗಲ: ತಾಲ್ಲೂಕಿನ ದೇವರಹಳ್ಳಿಯ ತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ಕುಸಿದ ಪರಿಣಾಮ ಕಾರ್ಮಿಕ ಕಲಬುರಗಿ ಜಿಲ್ಲೆಯ ಶರಣ್ (27) ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಮಿಕರು ಕಬ್ಬಿಣದ ಸರಳು ಮತ್ತು ಸೆಂಟ್ರಿಂಗ್ ಮಧ್ಯೆ ಸಿಲುಕಿ ಗಾಯಗೊಂಡಿದ್ದು, ಹೊರಬರಲಾರದೆ ಗಂಭೀರವಾಗಿ ಗಾಯಗೊಂಡಿದ್ದರು. ಜೆಸಿಬಿ ಯಂತ್ರದ ಮೂಲಕ ಹೊರತೆಗೆದು ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶರಣ್ ಮೃತಪಟ್ಟಿದ್ದಾರೆ.
ಗಾಯಾಳುಗಳ ಪೈಕಿ ಒಬ್ಬ ಕಾರ್ಮಿಕನಿಗೆ ಕಾಲು ಮುರಿದಿದ್ದು, ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ದೇವಸ್ಥಾನದ ಮುಂಭಾಗದಲ್ಲಿ ದಾನಿಗಳ ನೆರವಿನಿಂದ 20 ಅಡಿ ಎತ್ತರ ಮತ್ತು 35ಅಡಿ ಉದ್ದದ ಮಹಾದ್ವಾರ ನಿರ್ಮಾಣ ನಡೆಯುತ್ತಿತ್ತು. ಮೇಲ್ಛಾವಣಿಗೆ ಕಾಂಕ್ರೀಟ್ ಹಾಕಲು ಸೆಂಟ್ರಿಂಗ್ ಹೊಡೆದು ಕಬ್ಬಿಣ ಕಟ್ಟಲಾಗಿತ್ತು. ಸೋಮವಾರ ಕಾಂಕ್ರೀಟ್ ಹಾಕುವ ವೇಳೆ ಕುಸಿತ ಸಂಭವಿಸಿದೆ.
ಮಾಹಿತಿ ತಿಳಿದು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶರಣ್ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ವರ್ಗಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.