ADVERTISEMENT

ಶ್ರೀರಂಗಪಟ್ಟಣ | ಮತಾಂತರ ಆರೋಪ, ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 15:49 IST
Last Updated 15 ಏಪ್ರಿಲ್ 2025, 15:49 IST
ಶ್ರೀರಂಗಪಟ್ಟಣದಲ್ಲಿ ಶನಿವಾರ ಸಂಜೆ ಮತಾಂತರಕ್ಕೆ ಒಪ್ಪದವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಮಂಗಳವಾರ ಪಟ್ಟಣ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣದಲ್ಲಿ ಶನಿವಾರ ಸಂಜೆ ಮತಾಂತರಕ್ಕೆ ಒಪ್ಪದವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಮಂಗಳವಾರ ಪಟ್ಟಣ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯಲ್ಲಿ ಪತಿಯೇ ತನ್ನ ಬಂಧುಗಳ ಜತೆ ಸೇರಿ ಪತ್ನಿಯನ್ನು ಮತಾಂತರ ಆಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಇಲ್ಲಿನ ಪೊಲೀಸ್‌ ಠಾಣೆ ಎದುರು ಒಂದು ತಾಸು ಕಾಲ ಪ್ರತಿಭಟನೆ ನಡೆಯಿತು. ಮತಾಂತರಕ್ಕೆ ಒಪ್ಪದ ತನ್ನ ಪತ್ನಿ ಲಕ್ಷ್ಮಿ ಮತ್ತು ಆಕೆಯ ತಾಯಿ ಶ್ರುತಿ ಅವರ ಮೇಲೆ ಪಾಲಹಳ್ಳಿಯ ಶ್ರೀಕಾಂತ್‌ ಮತ್ತು ಆತನ ಸಹೋದರ ಹರೀಶ್ ಇತರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳಾದರೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

‘ಘಟನೆ ಸಂಬಂಧ 9 ಮಂದಿಯ ವಿರುದ್ಧ ಪ್ರಕರಣದ ದಾಖಲಾಗಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ಲಕ್ಷ್ಮಿ ಅವರ ಸಹೋದರ ರವಿಕಿರಣ್‌ ದೂರಿದರು.

ADVERTISEMENT

‘ತಾಲ್ಲೂಕಿನ ಪಾಲಹಳ್ಳಿ, ದೊಡ್ಡಪಾಳ್ಯ, ಚಂದಗಿರಿಕೊಪ್ಪಲು, ಮೊಗರಹಳ್ಳಿ ಮಂಟಿ ಇತರ ಗ್ರಾಮಗಳಲ್ಲಿ ಬಡ ಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಲಕ್ಷ್ಮಿ, ಆಕೆಯ ತಾಯಿ ಶ್ರುತಿ ಮತ್ತು ರವಿಕಿರಣ್‌ ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ’ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಮಾರ್ಕಂಡೇಯ ಎಚ್ಚರಿಸಿದರು.

‘ಘಟನೆಯಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದಾರೆ. ಲಕ್ಷ್ಮಿ ಮತ್ತು ಶ್ರೀಕಾಂತ್‌ ಅವರ ಬಂಧುಗಳಿಂದ ದೂರು ಮತ್ತು ಪ್ರತಿ ದೂರುಗಳು ಬಂದಿದ್ದು, ಪ್ರಕರಣ ದಾಖಲಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್ಪಿ ಶಾಂತಮಲ್ಲಪ್ಪ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಬಿಜೆಪಿ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌.ರಮೇಶ್, ಪುರಸಭೆ ಸದಸ್ಯ ಎಸ್‌. ಪ್ರಕಾಶ್, ವಿಶ್ವ ಹಿಂದೂ ಪರಿಷತ್‌ ಕಾರ್ಯದರ್ಶಿ ಬೆಳಗೊಳ ಸುನಿಲ್‌, ವಕೀಲ ಟಿ. ಬಾಲರಾಜು, ಹಿಂದೂ ಜಾಗರಣಾ ವೇದಿಕೆಯ ಸಂದೇಶ್, ರತ್ನಾಕರ್‌, ಆರ್‌ಎಸ್‌ಎಸ್‌ ಜಿಲ್ಲಾ ಕಾರ್ಯವಾಹಕ ಅವಿನಾಶ್, ಚಿನ್ನೇನಹಳ್ಳಿ ಹರ್ಷ, ಗಂಜಾಂ ಅಭಿಷೇಕ್, ಸನತ್‌, ಪ್ರೇಮ್‌, ಶಂಕರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.