ADVERTISEMENT

ಒಂದೇ ದಿನ 33 ಮಂದಿಗೆ ಕೋವಿಡ್‌–19 ದೃಢ

ಜಿಲ್ಲೆಯಲ್ಲಿ 373ಕ್ಕೆ ಏರಿಕೆಯಾದ ಒಟ್ಟು ಸೋಂಕಿತರ ಸಂಖ್ಯೆ, 119 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:52 IST
Last Updated 3 ಜುಲೈ 2020, 16:52 IST
   

ಮಂಡ್ಯ: ಶುಕ್ರವಾರ ಒಂದೇ ದಿನ 33 ಮಂದಿಯಲ್ಲಿ ಕೋವಿಡ್–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 473ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರಲ್ಲಿ ನಾಲ್ಕು ಮಂದಿ ಬೆಂಗಳೂರಿನಿಂದ ಜಿಲ್ಲೆಗೆ ಪ್ರಯಾಣಿಸಿದ್ದಾರೆ. ಅವರಲ್ಲಿ ಇಬ್ಬರು ನಾಗಮಂಗಲ ತಾಲ್ಲೂಕು, ಒಬ್ಬರು ಮಂಡ್ಯ ಹಾಗೂ ಒಬ್ಬರು ಮಳವಳ್ಳಿ ತಾಲ್ಲೂಕಿಗೆ ಸೇರಿದ್ದಾರೆ. ಮೈಸೂರಿನಿಂದ ಮಳವಳ್ಳಿಗೆ ಬಂದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದೆ. ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ.

ಬಿಹಾರದಿಂದ ಮದ್ದೂರಿಗೆ ಮರಳಿದ್ದ 23 ವರ್ಷದ ಯುವಕನಿಗೆ (ಪಿ–18036) ಕೋವಿಡ್‌ ಕಾಣಿಸಿಕೊಂಡಿದೆ. ಪಶ್ಚಿಮ ಬಂಗಾಳದಿಂದ ಮದ್ದೂರು ತಾಲ್ಲೂಕಿಗೆ ಮರಳಿದ್ದ ಮತ್ತೊಬ್ಬ 38 ವರ್ಷದ ವ್ಯಕ್ತಿಯಲ್ಲೂ (ಪಿ– 18065)ಸೋಂಕು ಪತ್ತೆಯಾಗಿದೆ. 11,009ನೇ ರೋಗಿಯ ಪ್ರಥಮ ಸಂಪರ್ಕಿತರಾಗಿದ್ದ ಮಂಡ್ಯ ತಾಲ್ಲೂಕಿನ ನಾಲ್ವರಲ್ಲಿ ಕೋವಿಡ್‌ ಪತ್ತೆಯಾಗಿದೆ.

ADVERTISEMENT

11,012ನೇ ರೋಗಿಯ ಸಂಪರ್ಕಿತರಾಗಿರುವ ಮಳವಳ್ಳಿ ತಾಲ್ಲೂಕಿನ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಳವಳ್ಳಿ ತಾಲ್ಲೂಕು 10,144ನೇ ರೋಗಿಯ ಸಂಪರ್ಕಿತರಾಗಿರುವ ತಾಲ್ಲೂಕಿನ ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದೆ. 10,138ನೇ ರೋಗಿಯ ಪ್ರಥಮ ಸಂಪರ್ಕಿತರಾಗಿರುವ ಮದ್ದೂರಿನ ಇಬ್ಬರಲ್ಲಿ ಕೋವಿಡ್‌ ಪಾಸಿಟಿವ್‌ ಬಂದಿದೆ.

ಮದ್ದೂರಿನ ಮತ್ತೊಬ್ಬರಲ್ಲೂ ಸೋಂಕು ಕಂಡುಬಂದಿದ್ದು ಅವರು 13,195ನೇ ರೋಗಿಯ ಪ್ರಥಮ ಸಂಪರ್ಕಿತರಾಗಿದ್ದಾರೆ. 15,254ನೇ ರೋಗಿಯ ಸಂಪರ್ಕದಿಂದ ಪಾಂಡವಪುರ ತಾಲ್ಲೂಕಿನ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಂಡುಬಂದಿದೆ. ಇವರಲ್ಲಿ ರೋಗ ಲಕ್ಷಣಗಳು ಕಂಡುಬಂದಿಲ್ಲ.

ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ (ಐಎಲ್‌ಐ) ಐವರಲ್ಲಿ ಕೋವಿಡ್‌–19 ಪತ್ತೆಯಾಗಿದೆ. ಅವರಲ್ಲಿ ಇಬ್ಬರು ಮಂಡ್ಯ ತಾಲ್ಲೂಕಿಗೆ ಸೇರಿದ್ದಾರೆ. ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಕೆ.ಆರ್‌.ಪೇಟೆ ತಾಲ್ಲೂಕಿನ ತಲಾ ಒಬ್ಬಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌ನಿಂದ ಗುಣಮುಖರಾದ ಇಬ್ಬರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 355 ಮಂದಿ ಗುಣಮುಖರಾಗಿದ್ದು 119 ಮಂದಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲೆಗೆ ಪೊಲೀಸ್‌ ಠಾಣೆ ಸ್ಥಳಾಂತರ

ಮಳವಳ್ಳಿ ತಾಲ್ಲೂಕು ಹಲಗೂರು ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ಗೆ ಕೋವಿಡ್ ಹರಡಿದ್ದು ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ವಸತಿ ಗೃಹವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗೆ ಪೊಲೀಸ್‌ ಠಾಣೆ ಸ್ಥಳಾಂತರ ಮಾಡಲಾಗಿದ್ದು ಸಿಬ್ಬಂದಿ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ಜನರು ಠಾಣೆಗೆ ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.