ADVERTISEMENT

ಕೆ.ಆರ್‌.ಪೇಟೆ 14, ಪಾಂಡವಪುರದ ಒಬ್ಬರಿಗೆ ಕೋವಿಡ್‌

252ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, ಸಕ್ರಿಯ ಪ್ರಕರಣಗಳಲ್ಲಿ ಜಿಲ್ಲೆಯೇ ಮೊದಲು

​ಪ್ರಜಾವಾಣಿ ವಾರ್ತೆ
Published 24 ಮೇ 2020, 13:54 IST
Last Updated 24 ಮೇ 2020, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕಿನ 14, ಪಾಂಡವಪುರ ತಾಲ್ಲೂಕಿನ ಒಬ್ಬರಿಗೆ ಭಾನುವಾರ ಕೋವಿಡ್‌–19 ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆಯಾಗಿದೆ.

6 ವರ್ಷದ ಮಗುವಿನಿಂದ 44 ವರ್ಷದ ವ್ಯಕ್ತಿ ಸೇರಿ ಒಟ್ಟು 15 ಮಂದಿಯಲ್ಲಿ ಭಾನುವಾರ ಸೋಂಕು ಪತ್ತೆಯಾಗಿದೆ. 15 ಮಂದಿಯಲ್ಲಿ 11 ಮಂದಿ ಮುಂಬೈ ಮುಂಬೈ ವಲಸಿಗರಾಗಿದ್ದಾರೆ. ನಾಲ್ವರು 869ನೇ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕೆ.ಆರ್‌.ಪೇಟೆ ತಾಲ್ಲೂಕಿನ ಮರುವನಹಳ್ಳಿ ಗ್ರಾಮದ 22 ವರ್ಷದ ವ್ಯಕ್ತಿ 869ನೇ ರೋಗಿಯಾಗಿದ್ದು ಈತ ಮೇ 12ರಂದು ಕೋವಿಡ್‌ ಪತ್ತೆಯಾಗಿತ್ತು. ಈತನ ಜೊತೆ ಗುರುತಿಸಿಕೊಂಡಿದ್ದ 10 ಮಂದಿಯಲ್ಲಿ ಈಗಾಗಲೇ ಕೋವಿಡ್‌ ಪತ್ತೆಯಾಗಿದೆ.

ಮುಂಬೈನಿಂದ ತಪ್ಪಿಸಿಕೊಂಡು ಬಂದಿದ್ದ 869ನೇ ರೋಗಿ ಮರುವನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಹೀಗಾಗಿ ಇಡೀ ಗ್ರಾಮದ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಾಥಮಿಕವಾಗಿ, ದ್ವಿತೀಯ ಹಂತದಲ್ಲಿ ಸಂಪರ್ಕಕ್ಕೆ ಬಂದಿದ್ದ 30ಕ್ಕೂ ಹೆಚ್ಚು ಮಂದಿಯನ್ನು ವಿವಿಧ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈತನಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ADVERTISEMENT

‘ಮೇ 17, 18, 19ರಂದು ಬಂದ ನೂರಾರು ವಲಸಿಗರನ್ನು ಮೇ 20, 21ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 11 ಮಂದಿಗೆ ಕೋವಿಡ್‌ ಪತ್ತೆಯಾಗಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ಮುಂಬೈ ವಲಸಿಗರಿಗೆ ಸಮರೋಪಾದಿಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಹೀಗೆ ಮಾಡದಿದ್ದರೆ ವಲಸಿಗರು ಗ್ರಾಮಗಳಿಗೆ ತೆರಳಿ ಹೆಚ್ಚು ಜನರಿಗೆ ಸೋಂಕು ಹರಡಿಸುವ ಅಪಾಯ ಇತ್ತು. ಅಧಿಕಾರಿಗಳ ಶ್ರಮದಿಂದಾಗಿ ವೇಗಗತಿಯಲ್ಲಿ ಪರೀಕ್ಷೆ ನಡೆಸಲಾಯಿತು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಹೆಚ್ಚಿನ ವಲಸಿಗರು ನಿಪ್ಪಾಣಿ ಚೆಕ್‌ಪೋಸ್ಟ್‌ ಮೂಲಕ ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ಚನ್ನರಾಯಪಟ್ಟಣ ಮಾರ್ಗವಾಗಿ ಆನೆಗೊಳ ಚೆಕ್‌ಪೋಸ್ಟ್‌ಗೆ ಬರುತ್ತಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಗ್ರಾಮಗಳಿಗೆ ಬಿಟ್ಟಿಲ್ಲ. ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೂ ಅವರನ್ನು ಬಿಡುಗಡೆ ಮಾಡಿಲ್ಲ. 14 ದಿನ ಕ್ವಾರಂಟೈನ್‌ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳ ಶ್ರಮ ಸಾಕಷ್ಟಿದೆ’ ಎಂದು ಹೇಳಿದರು.

‘ಕೊರೊನಾ ಯೋಧರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಅವಿರತ ಕೆಲಸ ಮಾಡುತ್ತಿದ್ದಾರೆ. ಅವರನ್ನು ಯಾರೂ ನಿಂದನೆ, ಅಪಹಾಸ್ಯ ಮಾಡಬಾರದು. ಕೆಲವು ಕ್ವಾರಂಟೈನ್‌ ಕೇಂದ್ರಗಳಲ್ಲಿ ಕೊರೊನಾ ವಾರಿಯರ್ಸ್‌ ವಿರುದ್ಧ ಟೀಕೆ ಮಾಡುತ್ತಿರುವ ಪ್ರಕರಣಗಳು ಕೇಳಿಬರುತ್ತಿವೆ. ಇದು ಮಾನವತೆಯ ವಿರುದ್ಧದ ನಡವಳಿಕೆಯಾಗಿದೆ. ಸಾರ್ವಜನಿಕರಾಗಲೀ, ಕ್ವಾರಂಟೈನ್‌ ವಾಸಿಗಳಾಗಲೀ ಯಾರೂ ಈ ರೀತಿ ನಡೆದುಕೊಳ್ಳಬಾರದು. ಅವರಿಗೆ ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ ತುಂಬುವಂತಹ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಇನ್ನುಮುಂದೆ ಪ್ರತಿ ಭಾನುವಾರ ಲಾಕ್‌ಡೌನ್‌ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು. ಸರ್ಕಾರ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕೊರೊನಾ ಸೋಂಕಿನ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ಮುಂಬೈ ವಲಸಿಗರ ಪರೀಕ್ಷೆ ಪೂರ್ಣ

‘ಇಲ್ಲಿಯವರೆಗೆ ಮುಂಬೈನಿಂದ ಬಂದಿರುವ 1,400 ಮಂದಿ ವಲಸಿಗರಿಗೆ ಸಮರೋಪಾದಿಯಲ್ಲಿ ಕೋವಿಡ್‌ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಇನ್ನು 60–80 ಮಂದಿಯ ವರದಿಯಷ್ಟೇ ಬರಬೇಕಾಗಿದೆ. ನಂತರ ಸೋಂಕಿತ ಸಂಖ್ಯೆ ಕಡಿಮೆಯಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಮುಂಬೈನಿಂದ ಬಂದ ಎಲ್ಲರಿಗೂ ಬಹಳ ಕಟ್ಟುನಿಟ್ಟಾಗಿ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಈಗ ಹೊಸದಾಗಿ ಮುಂಬೈನಿಂದ ಬರುವವರಿಗೆ ಅನುಮತಿ ನೀಡುತ್ತಿಲ್ಲ’ ಎಂದರು.

ತೀವ್ರಗತಿಯಲ್ಲಿ ಗುಣಮುಖ

‘ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ತೀವ್ರಗತಿಯಲ್ಲಿ ಗುಣಮುಖರಾಗುತ್ತಿದ್ದಾರೆ. ಇದು ಇಡೀ ರಾಜ್ಯ, ದೇಶಕ್ಕೆ ಮಾದರಿಯಾಗಿದೆ. ಇವರಿಗೆ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದ ಎಲ್ಲರೂ ಸ್ಪಂದಿಸುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಮತ್ತೆ ಹೊಸದಾಗಿ ಇಬ್ಬರು ಗುಣಮುಖರಾಗಿದ್ದು ಕೋವಿಡ್‌ನಿಂದ ಮುಕ್ತರಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಬಹುತೇಕ ಮಂದಿಯ ವರದಿ 14ನೇ ದಿನಕ್ಕೆ ನೆಗೆಟಿವ್‌ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಲವರು 28ನೇ ದಿನಕ್ಕೆ ಗುಣಮುಖರಾಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.