ADVERTISEMENT

ಮಂಡ್ಯ: 6 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಗೆ ಚಿಕಿತ್ಸೆ

ಎಬಿಆರ್‌ಕೆ ಅಡಿ ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು ಅಗತ್ಯ, ನೇರವಾಗಿ ದಾಖಲಾದರೆ ದುಬಾರಿ

ಎಂ.ಎನ್.ಯೋಗೇಶ್‌
Published 1 ಮೇ 2021, 19:30 IST
Last Updated 1 ಮೇ 2021, 19:30 IST
ಕೋವಿಡ್‌ ಪರೀಕ್ಷೆಗೆ ಮಿಮ್ಸ್‌ ಆಸ್ಪತ್ರೆ  ಎದುರು ಜನರು ಸಾಲುಗಟ್ಟಿ ನಿಂತಿರುವುದು
ಕೋವಿಡ್‌ ಪರೀಕ್ಷೆಗೆ ಮಿಮ್ಸ್‌ ಆಸ್ಪತ್ರೆ  ಎದುರು ಜನರು ಸಾಲುಗಟ್ಟಿ ನಿಂತಿರುವುದು   

ಮಂಡ್ಯ: ಕೋವಿಡ್‌ ರೋಗಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿದೆ. ಸದ್ಯ 4 ಆಸ್ಪತ್ರೆಗಳಲ್ಲಿ ಈಗಾಗಲೇ ರೋಗಿಗಳು ದಾಖಲಾಗಿದ್ದು ಇನ್ನೆರಡು ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ.

ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆ ಕೋವಿಡ್‌ ರೋಗಿಗಳಿಗೆ 100 ಹಾಸಿಗೆಗಳನ್ನು ಮೀಸಲಿಟ್ಟಿದೆ. ಸರ್ಕಾರಿ ಆಸ್ಪತ್ರೆಯ ಶಿಫಾರಸು ಇಲ್ಲದೇ ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ಧಾರಿಯಲ್ಲಿರುವ ಸ್ಯಾಂಜೊ ಆಸ್ಪತ್ರೆಯೂ 100 ಹಾಸಿಗೆ ಮೀಸಲಿಟ್ಟಿದ್ದು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್ (ಎಬಿಆರ್‌ಕೆ) ಮೂಲಕ, ಸರ್ಕಾರಿ ಆಸ್ಪತ್ರೆಯ ಶಿಫಾರಸಿನೊಂದಿಗೆ ರೋಗಿಗಳನ್ನು ದಾಖಲು ಮಾಡಲಾಗುತ್ತಿದೆ.

ಮದ್ದೂರು ತಾಲ್ಲೂಕು ಜಿ.ಮಾದೇಗೌಡ ಆಸ್ಪತ್ರೆ, ಮಂಡ್ಯದ ಎಂಎಂಎಚ್‌ ಆಸ್ಪತ್ರೆಗಳಲ್ಲೂ ತಲಾ 60 ಹಾಸಿಗೆಗಳನ್ನು ಕೋವಿಡ್‌ಗಾಗಿ ಮೀಸಲಿಡಲಾಗಿದೆ. ಇದರ ಜೊತೆಗೆ ನಗರದ ಪ್ರಶಾಂತ್‌ ನರ್ಸಿಂಗ್‌ ಹೋಂ ಹಾಗೂ ಸುರಭಿ ನರ್ಸಿಂಗ್‌ ಹೋಂಗಳನ್ನೂ ಗುರುತಿಸಲಾಗಿದ್ದು ರೋಗಿಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಈ ಆಸ್ಪತ್ರೆಗಳು ಎಬಿಆರ್‌ಕೆ ಅಡಿ ಚಿಕಿತ್ಸೆ ನೀಡಲಿದ್ದು ಸರ್ಕಾರಿ ಆಸ್ಪತ್ರೆಗಳ ಶಿಫಾರಸು ಕಡ್ಡಾಯವಾಗಿದೆ.

ADVERTISEMENT

ಇದರ ಜೊತೆಗೆ ಈ ಖಾಸಗಿ ಆಸ್ಪತ್ರೆಗಳು ಖಾಸಗಿಯಾಗಿಯೂ ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿವೆ. ಆದರೆ ರೋಗಿಗಳು ದುಬಾರಿ ಚಿಕಿತ್ಸಾ ವೆಚ್ಚ ಭರಿಸಬೇಕಾಗಿದೆ. ನಿಗದಿತ ಶುಲ್ಕದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಖಾಸಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯಲಾಗುತ್ತಿದೆ. ಹಲವು ಖಾಸಗಿ ಆಸ್ಪತ್ರೆಗಳು ವಿವಿಧ ರೀತಿಯ ಶುಲ್ಕ ನಿಗದಿ ಮಾಡಿವೆ.

‘ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲೂ ಹಾಸಿಗೆ ಸಿಗದಿದ್ದಾಗ ತುರ್ತು ಚಿಕಿತ್ಸೆಯ ಅಗತ್ಯವುಳ್ಳ ರೋಗಿಗಳನ್ನು ಮಾತ್ರ ಎಬಿಆರ್‌ಕೆ ಅಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಪ್ರತಿದಿನ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು ಅಲ್ಲಿಯ ವೈದ್ಯರು ನೀಡುವ ಚಿಕಿತ್ಸೆ ಮೇಲೆ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಖಾಲಿ ಇದ್ದ ಕಡೆ ದಾಖಲು: ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿದ್ದು ಆಮ್ಲಜನಕ, ವೆಂಟಿಲೇಟರ್‌ ಅಗತ್ಯವುಳ್ಳ ರೋಗಿಗಳನ್ನು ಬೇರೆಬೇರೆ ತಾಲ್ಲೂಕುಗಳಿಗೆ ದಾಖಲಿಸಲಾಗುತ್ತಿದೆ. ಖಾಲಿ ಇದ್ದ ಕಡೆಗಳಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಗೆ ಹೊಸದಾಗಿ 25 ವೆಂಟಿಲೇಟರ್‌ಗಳು ಬಂದಿದ್ದು ಅವುಗಳನ್ನು ಅಳವಡಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಹೆಚ್ಚುವರಿ 150 ಹಾಸಿಗೆಗಳ ವಾರ್ಡ್‌ ಸಿದ್ಧಗೊಳ್ಳುತ್ತಿದ್ದು ಆಮ್ಲಜನಕ ಪೂರೈಕೆಯ ಪೈಪ್‌ಲೈನ್‌ (ಫ್ಲೋಮೀಟರ್‌) ಅಳವಡಿಕೆ ಪ್ರಕ್ರಿಯೆ ಸಾಗಿದೆ. ಇದು ಸಿದ್ಧಗೊಂಡರೆ ತಾಲ್ಲೂಕು ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡುವುದು ತಪ್ಪುತ್ತದೆ ಎಂದು ಮಿಮ್ಸ್‌ ವೈದ್ಯರು ತಿಳಿಸುತ್ತಾರೆ.

ತಾಲ್ಲೂಕಿನ ಕೀಲಾರ ಹಾಗೂ ಶಿವಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಿಗೂ ಕೋವಿಡ್‌ ರೋಗಿಗಳನ್ನು ದಾಖಲು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ಕೀಲಾರ ಸಿಎಚ್‌ಸಿಯಲ್ಲಿ 12 ರೋಗಿಗಳನ್ನು ದಾಖಲು ಮಾಡಲಾಗಿದೆ. ಆಮ್ಲಜನಕ ಪೂರೈಕೆ ಸೌಲಭ್ಯವುಳ್ಳ ಹಾಸಿಗೆ ಸಿದ್ಧಗೊಳಿಸಲಾಗಿದೆ. ಸಿಬ್ಬಂದಿ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ನೋಡಿಕೊಂಡು ಇತರ ಸಿಎಚ್‌ಸಿಗಳಿಗೆ ರೋಗಿಗಳನ್ನು ದಾಖಲು ಮಾಡಲು ಸಿದ್ಧತೆ ಮಾಡಿಕೊಳ್ಳಲಿದೆ.

200 ಹಾಸಿಗೆಯ ಕಟ್ಟಡಕ್ಕೆ ಸಿದ್ಧತೆ
ನಗರ ವ್ಯಾಪ್ತಿಯ ಕಲ್ಯಾಣಮಂಟಪ ಅಥವಾ ಬೇರೆ ಬೃಹತ್‌ ಕಟ್ಟಡವೊಂದನ್ನು ಪಡೆದು 200 ಹಾಸಿಗೆ ಸಾಮರ್ಥ್ಯದ ಆಮ್ಲಜನಕ ಪೂರೈಕೆ ಸೌಲಭ್ಯದ ವಾರ್ಡ್‌ ಸಿದ್ಧಗೊಳಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಚಾಲನೆ ಕೊಟ್ಟಿದೆ.

ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಶೀಘ್ರವಾಗಿ ಆಮ್ಲಜನಕ ಪೂರೈಕೆಯ ಪೈಪ್‌ಲೈನ್‌ ಅಳವಡಿಸುವ ಗುತ್ತಿಗೆದಾರರ ಜೊತೆಯೂ ಮಾತುಕತೆ ನಡೆಸಲಾಗಿದೆ.

‘10 ದಿನದಲ್ಲಿ ಪೈಪ್‌ಲೈನ್‌ ಮಾಡಿಕೊಡುವುದಾಗಿ ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕಟ್ಟಡದ ಹುಡುಕಾಟ ನಡೆಸಲಾಗಿದೆ’ ಎಂದು ಡಿಎಚ್‌ಒ ಮಂಚೇಗೌಡ ತಿಳಿಸಿದರು.

ಶಾಸಕರೇ, ನಿಮ್ಮ ಶಾಲೆ ಬಿಟ್ಟುಕೊಡಿ
ಜಿಲ್ಲೆಯ ಹಲವು ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ದೊಡ್ಡ ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರು ಶೀಘ್ರ ತಮ್ಮ ಶಾಲಾ ಕಟ್ಟಡಗಳನ್ನು ಕೋವಿಡ್‌ ವಾರ್ಡ್‌ಗಳನ್ನಾಗಿ ಬದಲಾಯಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

‘ಮಂಡ್ಯ ಕ್ಷೇತ್ರದಲ್ಲಿ ಎಂ.ಶ್ರೀನಿವಾಸ್‌ ಅವರು ವಿವೇಕಾನಂದ ವಿದ್ಯಾಸಂಸ್ಥೆ, ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಶಾಸಕ ಸಿ.ಎಸ್‌.ಪುಟ್ಟರಾಜು ಅವರ ಜಿಎಸ್‌ಟಿ ಶಾಲೆ ನಡೆಸುತ್ತಿದ್ದಾರೆ. ಶಾಲೆ ಸದ್ಯಕ್ಕೆ ನಡೆಯುತ್ತಿಲ್ಲ. ಜನರ ಜೀವದ ಮೇಲೆ ಅವರಿಗೆ ಕಾಳಜಿ ಇದ್ದರೆ ತಮ್ಮ ಶಾಲೆಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳನ್ನಾಗಿ ಮಾಡಬೇಕು’ ಎಂದು ವಕೀಲ ರಾಮಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.