ADVERTISEMENT

ತಮ್ಮ ಲೋಪ ಮುಚ್ಚಿಡಲು ಸುಮಲತಾ ಯತ್ನ: ಜಿ.ಎನ್. ನಾಗರಾಜು ಆರೋಪ

Sumalatha seeks to cover up omissions

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:28 IST
Last Updated 14 ಜುಲೈ 2021, 3:28 IST
ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು
ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು   

ಭಾರತೀನಗರ: ‘ಸಂಸದೆ ಸುಮಲತಾ ಅವರು ತಮ್ಮ ಲೋಪದೋಷಗಳನ್ನು ಮುಚ್ಚಿಡುವ ಯತ್ನ ಮಾಡುತ್ತಿದ್ದಾರೆ’ ಎಂದು ಸಿಪಿಐ(ಎಂ) ರಾಜ್ಯ ಮುಖಂಡ ಜಿ.ಎನ್. ನಾಗರಾಜು ಆರೋಪಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡಿದರು.

‘ಸುಮಲತಾ ಅವರು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಪಾದರಸದಂತೆ ಕೆಲಸ ಮಾಡುತ್ತಿರುವಂತೆ, ಜಿಲ್ಲೆಯ ಬೇರಾವ ಸಮಸ್ಯೆಯ ವಿರುದ್ದವೂ ಒಂದು ಸಣ್ಣ ದನಿ ಎತ್ತಿಲ್ಲ. ರೈತ ವಿರೋಧಿ ಕಾನೂನುಗಳ ಕುರಿತು ಸೊಲ್ಲೆತ್ತುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅವರು ದಿನನಿತ್ಯವೂ ಕ್ರಿಯಾಶೀಲರಾಗಬೇಕಿತ್ತು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಕೊರೊನಾ ಸಂಕಷ್ಟದಲ್ಲಿ ಜಿಲ್ಲೆಯ ಜನತೆಗೆ ಸಹಾಯ ಮಾಡಬೇಕಿತ್ತು. ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಊರಿಗೆ ಬಂದಿರುವ ಯುವಜನರಿಗೆ ಕೆಲಸ ಒದಗಿಸುವ ಕೆಲಸ ಮಾಡಬೇಕಿತ್ತು. ಅದ್ಯಾವುದನ್ನು ಅವರು ಮಾಡಲಿಲ್ಲ’ ಎಂದು ಕಿಡಿಕಾರಿದರು.

‘ಅಕ್ರಮವೋ, ಸಕ್ರಮವೋ, ಎಲ್ಲಾ ರೀತಿಯ ಗಣಿಗಾರಿಕೆಯನ್ನುನಿಲ್ಲಿಸಬೇಕು. ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಸರ್ಕಾರಿ ಸ್ವಾಮ್ಯದಲ್ಲಿದ್ದ ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿರುವ ಕ್ರಮ ಖಂಡನೀಯ’ ಎಂದರು.

ಕೃಷಿಕೂಲಿಕಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಂ. ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿದರಹಳ್ಳಿ ಹನುಮೇಶ, ಮುಖಂಡರಾದ ಟಿ.ಎಲ್. ಕೃಷ್ಣೇಗೌಡ, ಸಿ. ಕುಮಾರಿ, ಯಶವಂತ್, ಕೆ. ಬಸವರಾಜು, ಹನುಮೇಗೌಡ, ಕರಡಕೆರೆ ವಸಂತಾ ಇದ್ದರು.

‘ಎಚ್‌ಡಿಕೆಗೆ ಜನರೇ ಪಾಠ ಕಲಿಸುತ್ತಾರೆ’

‘ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರದ್ದು ಪಾಳೇಗಾರಿಕೆ ಸಂಸ್ಕೃತಿ. ಅವರು ಸುಮಲತಾವಿರುದ್ಧ ಪಾಳೇಗಾರಿಕೆ ಹಾಗೂ ದರ್ಪದ ಮಾತುಗಳನ್ನಾಡಿ ಈಗಾಗಲೇ ಜನರಿಂದ ಉಗಿಸಿಕೊಂಡಿದ್ದಾರೆ. ಮತ್ತದೇ ಅಸಹ್ಯದ ಮಾತುಗಳನ್ನು ಮುಂದುವರಿಸಿದ್ದಾರೆ. ಅವರು ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ, ಜನರೇ ಪಾಠ ಕಲಿಸುತ್ತಾರೆ’ ಎಂದು ಜಿ.ಎನ್. ನಾಗರಾಜು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.