ADVERTISEMENT

ಕಾಳೇನಹಳ್ಳಿ: ಪತ್ನಿಯನ್ನು ಕೊಲೆಗೈದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:01 IST
Last Updated 24 ಅಕ್ಟೋಬರ್ 2025, 3:01 IST
ಲೋಕೇಶ್‌ ಮತ್ತು ಶ್ವೇತಾ ದಂಪತಿ 
ಲೋಕೇಶ್‌ ಮತ್ತು ಶ್ವೇತಾ ದಂಪತಿ    

ಮಂಡ್ಯ: ಪತಿಯೇ ಪತ್ನಿ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಶ್ವೇತಾ (38) ಮೃತಪಟ್ಟವರು. ಪತಿ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕೇಶ್‌ ಮತ್ತು ಶ್ವೇತಾ ಅವರು 17 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿದ್ದಾಗ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 16 ವರ್ಷದ ಮಗಳಿದ್ದಾಳೆ.

ನಾಲ್ಕೈದು ವರ್ಷದ ಹಿಂದೆ ದಂಪತಿ ಕಾಳೇನಹಳ್ಳಿಗೆ ಬಂದು ವಾಸವಿದ್ದರು. ಈ ನಡುವೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಲೋಕೇಶ್, ಕುಡಿತಕ್ಕೆ ದಾಸನಾಗಿದ್ದನು. ಹಣ ಕೊಡುವಂತೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಸಂಬಂಧ ಹಿಂದೊಮ್ಮೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ನಂತರ ಸಂಬಂಧಿಕರು ಲೋಕೇಶ್‌ಗೆ ತಿಳಿವಳಿಕೆ ಹೇಳಿದ್ದರು.

ADVERTISEMENT

ಅ.22ರಂದು ಮಧ್ಯರಾತ್ರಿ ದಂಪತಿ ನಡುವೆ ಮತ್ತೆ ಜಗಳವಾಗಿದೆ. ಕುಪಿತಗೊಂಡ ಪತಿ ಗುದ್ದಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಆಕೆಯ ತಲೆ ಬಲಭಾಗ ಜಜ್ಜಿ ಹೋಗಿತ್ತು. ಇದಲ್ಲದೆ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ. ಘಟನೆ ಸಮಯದಲ್ಲಿ ಮಗಳ ಮೇಲೂ ಹಲ್ಲೆಗೆ ಮುಂದಾಗಿದ್ದು, ಅದೃಷ್ಟವಶಾತ್ ತಪ್ಪಿಸಿಕೊಂಡು ಬಂದು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ. ಅಲ್ಲಿಗೆ ಹೋಗುವಷ್ಟರಲ್ಲಿ ಶ್ವೇತಾ ಮೃತಪಟ್ಟಿದ್ದರು.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ. ತಿಮ್ಮಯ್ಯ, ಇನ್‌ಸ್ಪೆಕ್ಟರ್‌ ಕೆ.ಬಿ. ಶಿವಪ್ರಸಾದ್‌ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.