ADVERTISEMENT

ಮಂಡ್ಯ: ಶ್ರೀನಿಧಿ ಗೋಲ್ಡ್‌ ಉದ್ಯಮಿಗೆ ₹ 50 ಲಕ್ಷ ವಂಚನೆ, ಹನಿಟ್ರ್ಯಾಪ್‌ ಆರೋಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 2:34 IST
Last Updated 22 ಆಗಸ್ಟ್ 2022, 2:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಇಲ್ಲಿನ ಉದ್ಯಮಿಯಿಂದ ₹ 50 ಲಕ್ಷ ಪಡೆದು ವಂಚಿಸಿರುವ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ನಗರದ ಶ್ರೀನಿಧಿ ಗೋಲ್ಡ್‌ ಮಾಲೀಕ, ಬಿಜೆಪಿಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಎಸ್.ಜಗನ್ನಾಥ ಎಸ್‌.ಶೆಟ್ಟಿ ಹನಿಟ್ರ್ಯಾಪ್‌ಗೆ ಒಳಗಾಗಿರುವ ವ್ಯಕ್ತಿ. ₹ 50 ಲಕ್ಷ ಪಡೆದಿರುವ ಆರೋಪದಲ್ಲಿ ಮಂಡ್ಯದ ಸುಭಾಷ್‌ನಗರದ 8ನೇ ಕ್ರಾಸ್ ನಿವಾಸಿ ಸಲ್ಮಾಬಾನು ಮತ್ತು ಜಯಂತ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಮಾಬಾನು ಹನಿಟ್ರ್ಯಾಪ್‌ ಮಾಡಿದ್ದಾರೆ ಎನ್ನಲಾಗಿದ್ದು, ಇತರ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

2022ರ ಫೆ.26ರಂದು ರಾತ್ರಿ 10.45ಕ್ಕೆ ಮೈಸೂರಿಗೆ ತೆರಳಲು ಮಂಡ್ಯದ ಸಾರಿಗೆ ಬಸ್ ನಿಲ್ದಾಣದಲ್ಲಿ ಜಗನ್ನಾಥ್ ನಿಂತಿದ್ದಾಗ ಕಾರಿನಲ್ಲಿ ಬಂದ ಸಲ್ಮಾಬಾನು, ಜಯಂತ್ ಹಾಗೂ ಇತರರು ಪರಿಚಯ ಮಾಡಿಕೊಂಡಿದ್ದರು. ‘ನಾವೂ ಮೈಸೂರಿಗೆ ತೆರಳುತ್ತಿದ್ದೇವೆ ಎಂದು ಹೇಳಿ ಕಾರಿಗೆ ಹತ್ತಿಸಿಕೊಂಡು ಮೈಸೂರಿಗೆ ಕರೆದುಕೊಂಡು ಹೋಗಿದ್ದರು’ ಎನ್ನಲಾಗಿದೆ.

ADVERTISEMENT

ಮೈಸೂರಿಗೆ ತೆರಳಿದ ಬಳಿಕ, ‘ನಮ್ಮ ಸ್ನೇಹಿತ ಲಾಡ್ಜೊಂದರಲ್ಲಿ ಚಿನ್ನದ ಬಿಸ್ಕೆಟ್ ತಂದಿದ್ದಾನೆ. ಅದನ್ನು ಪರಿಶೀಲಿಸಬೇಕು’ ಎಂದು ಹೇಳಿದ್ದಾರೆ. ಜಗನ್ನಾಥ ಅವರು ‘ನನಗೆ ಸಮಯ ಇಲ್ಲ’ ಎಂದರೂ ಒತ್ತಾಯಿಸಿ ಲಾಡ್ಜ್‌ ಕೊಠಡಿಯಲ್ಲಿರಿಸಿ ಆರೋಪಿಗಳು ಅಲ್ಲಿಂದ ತೆರಳಿದ್ದರು ಎಂದು ತಿಳಿದುಬಂದಿದೆ.

‘ಕೊಠಡಿಗೆ 25 ವರ್ಷದ ಯುವತಿ ಬಂದಿದ್ದಳು. ಕೆಲವೇ ನಿಮಿಷಗಳಲ್ಲಿ ಸಲ್ಮಾಬಾನು, ಜಯಂತ್, ಇತರ ಆರೋಪಿಗಳು ಬಂದು ನೀನು ಯುವತಿ ಯೊಂದಿಗಿರುವ ವಿಡಿಯೊ ಇದೆ. ₹4 ಕೋಟಿ ಹಣ ನೀಡುವಂತೆ ಹಲ್ಲೆ ನಡೆಸಿ ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘₹50 ಲಕ್ಷ ಕೊಡುವುದಾಗಿ ಒಪ್ಪಿ ಫೆ.27ರಂದು ಬೆಳಿಗ್ಗೆ 10ಕ್ಕೆ ಮೈಸೂರು ಝೂ ಗೇಟ್‌ ಬಳಿ ₹25 ಲಕ್ಷ ಕೊಟ್ಟಿದ್ದೇನೆ. ಇದುವರೆಗೂ ಒಟ್ಟು ₹50 ಲಕ್ಷವನ್ನು ಪಡೆದಿದ್ದಾರೆ. ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಜಗನ್ನಾಥ್‌ ಅವರು ಪಶ್ಚಿಮ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.