
ಮಂಡ್ಯ: ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1844 ಇ–ಖಾತಾಗಳನ್ನು (ಇ–ಸ್ವತ್ತು) ನಿಯಮಬಾಹಿರವಾಗಿ ವಿತರಿಸಿರುವುದು ಮತ್ತು ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ‘ಕ್ರಿಮಿನಲ್ ಪ್ರಕರಣ’ ದಾಖಲಿಸುವಂತೆ ಉಪಲೋಕಾಯುಕ್ತ–2 ಬಿ.ವೀರಪ್ಪ ಅವರು ಮತ್ತೆ ಚಾಟಿ ಬೀಸಿದ್ದಾರೆ.
‘ಕಿರಂಗದೂರು ಗ್ರಾಮದ ಸರ್ವೆ ನಂ.26ರಲ್ಲಿ 17 ಗುಂಟೆ ಗೋಮಾಳ ಜಮೀನಿದೆ. ಯಾವುದೇ ಮಂಜೂರಾತಿ ಇಲ್ಲದೇ ಅನ್ಯಕ್ರಾಂತವಾಗದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆಯಾಗದೇ ಇರುವ ಸರ್ಕಾರಿ ಜಮೀನನ್ನು ಒಟ್ಟು 12 ನಿವೇಶನಗಳನ್ನು ವಿಜಯ್‌ಕುಮಾರ್ ಬಿನ್ ಚೆನ್ನಪ್ಪ ಅವರ ಹೆಸರಿನಲ್ಲಿ ಖಾತೆ ಮಾಡಲಾಗಿದೆ. ನಮೂನೆ 9 ಮತ್ತು 11ಎ ನಮೂನೆಗಳನ್ನು ವಿತರಿಸಲಾಗಿದೆ. ನಂತರ ಒಂದೇ ತಿಂಗಳಲ್ಲಿ ಬೇರೆಯವರಿಗೆ ಖಾತೆ ವರ್ಗಾವಣೆ ಮಾಡಲಾಗಿದೆ’ ಎಂದು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.
ಈ ಬಗ್ಗೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಬೇಕು. ಜಿಲ್ಲಾ ಪಂಚಾಯಿತಿ ಸಿಇಒ ಹೊರಡಿಸಿದ ಆದೇಶದ ಅನುಸಾರ, ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರಿಗೆ ನೋಟಿಸ್ ನೀಡಿ, ಅವರ ಪ್ರತಿಕ್ರಿಯೆ ಪಡೆಯುವಂತೆಯೂ ಸೂಚಿಸಲಾಗಿದೆ.
ಅಮಾನತುಗೊಳಿಸಿದರೆ ಸಾಕೇ?: 1844 ಅಕ್ರಮ ಇ–ಖಾತಾಗಳನ್ನು ಸೃಷ್ಟಿಸಿದವರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ, ಕೇವಲ ಅಮಾನತುಗೊಳಿಸಿದರೆ ಸಾಲದು. ಗಂಭೀರ ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ‘ಅಮಾನತು’ ಶಿಸ್ತುಕ್ರಮ ಸಾಕಾಗುವುದಿಲ್ಲ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸರ್ಕಾರಿ ಗೋಮಾಳದ ಅಕ್ರಮ ಮಂಜೂರಾತಿ ಮತ್ತು ಸರ್ಕಾರಿ ಅನುದಾನ ದುರ್ಬಳಕೆಯು ಗಂಭೀರ ಪ್ರಕರಣವಾಗಿದೆ ಎಂದು ಉಪಲೋಕಾಯುಕ್ತರು ತಮ್ಮ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸರ್ಕಾರಿ ಅನುದಾನ ದುರುಪಯೋಗ: ಇಂಡುವಾಳು ಗ್ರಾಮ ಪಂಚಾಯಿತಿಗೆ ಸೇರಿದ ಎರಡು ಕಟ್ಟಡಗಳಾದ ರಾಜೀವಗಾಂಧಿ ಸೇವಾ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಕಾರ್ಯಾಲಯವು ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನವಾಗಿತ್ತು. ಇದಕ್ಕೆ ಪರಿಹಾರವಾಗಿ ಗ್ರಾ.ಪಂ.ಯ ಖಾತೆಗೆ ₹1.30 ಕೋಟಿ ಜಮೆ ಆಗಿತ್ತು.
‘ಪಿಡಿಒ ಯೋಗೇಶ್ ಕೆ.ಸಿ. ಅವರು ಅನಧಿಕೃತವಾಗಿ ಇಂದುಮತಿ ಎಂಬುವರಿಗೆ ₹5 ಲಕ್ಷ ಜಮೆ ಮಾಡಿದ್ದಾರೆ ಮತ್ತು ವೈಯಕ್ತಿಕ ಖಾತೆಗೆ ₹8 ಲಕ್ಷವನ್ನು ಜಮೆ ಮಾಡಿಕೊಂಡು ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಉಪಲೋಕಾಯುಕ್ತರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾರ್ಚ್ 23ರಂದು ಸಮಗ್ರ ವರದಿ ಸಲ್ಲಿಸಬೇಕು– ಬಿ.ವೀರಪ್ಪ ಉಪಲೋಕಾಯುಕ್ತ–2
6 ಸರ್ಕಾರಿ ನೌಕರರ ಅಮಾನತು
‘ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 2021ರಿಂದ 2025ರವರೆಗೆ ವಿತರಿಸಿರುವ 1929 ಇ–ಖಾತಾ ಕಡತಗಳಲ್ಲಿ 85 ಕಡತಗಳು ಕ್ರಮಬದ್ಧವಾಗಿದ್ದು ಉಳಿದ 1844 ಕಡತಗಳು ಕ್ರಮಬದ್ಧವಾಗಿಲ್ಲ’ ಎಂದು ಮಂಡ್ಯ ತಹಶೀಲ್ದಾರ್ ಅವರು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ ವರದಿಯಲ್ಲಿ ಸಾಬೀತಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಪಿಡಿಒಗಳಾದ ಎಚ್.ಬಿ. ವಿಶಾಲಮೂರ್ತಿ ಕೆ.ಸಿ.ಯೋಗೇಶ್ ಎ.ಎಸ್.ಸಿದ್ದರಾಜು ಪ್ರಭಾರ ಪಿಡಿಒ ದಯಾನಂದ ಕಾರ್ಯದರ್ಶಿ ಎಸ್. ಮರಿಲಿಂಗಯ್ಯ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಎಚ್.ಆರ್. ರಾಣಿ ಸೇರಿದಂತೆ ಆರು ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
‘ಕಂದಾಯ ಭೂಮಿ ರಕ್ಷಣೆ ತಹಶೀಲ್ದಾರ್ ಹೊಣೆ’
‘ಕಂದಾಯ ಭೂಮಿಯನ್ನು ರಕ್ಷಣೆ ಮಾಡುವುದು ತಹಶೀಲ್ದಾರ್ ಹೊಣೆ. ಮಂಡ್ಯ ತಹಶೀಲ್ದಾರ್ ಅವರು ಕಿರಂಗದೂರು ಗ್ರಾಮದ ಸರ್ಕಾರಿ ಗೋಮಾಳ ಜಮೀನು ರಕ್ಷಣೆ ಮಾಡಲು ಹಾಗೂ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನ ಪಟ್ಟಿರುವ ಬಗ್ಗೆ ಯಾವುದೇ ದಾಖಲೆ ಒದಗಿಸಿಲ್ಲ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.