ADVERTISEMENT

ಬೆಳೆ ಸಮೀಕ್ಷೆ: 15 ದಿನಕ್ಕೆ ಶೇ 6ರಷ್ಟು ಸಾಧನೆ

ರೈತರಿಂದಲೇ ಬೆಳೆಯ ಮಾಹಿತಿ ದಾಖಲು, ಸೆ.24ರವರೆಗೂ ಅವಧಿ ಮುಂದೂಡಿಕೆ

ಶರತ್‌ ಎಂ.ಆರ್‌.
Published 25 ಆಗಸ್ಟ್ 2020, 13:22 IST
Last Updated 25 ಆಗಸ್ಟ್ 2020, 13:22 IST
ಮಂಡ್ಯ ತಾಲ್ಲೂಕಿನ ಊರಮಾರಕಸಲಗೆರೆ ಗ್ರಾಮದ ಜಮೀನೊಂದರಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್‌ ಬೆಳೆ ಸಮೀಕ್ಷೆ ಮಾಹಿತಿ ದಾಖಲು ಮಾಡುತ್ತಿರುವುದು
ಮಂಡ್ಯ ತಾಲ್ಲೂಕಿನ ಊರಮಾರಕಸಲಗೆರೆ ಗ್ರಾಮದ ಜಮೀನೊಂದರಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್‌ ಬೆಳೆ ಸಮೀಕ್ಷೆ ಮಾಹಿತಿ ದಾಖಲು ಮಾಡುತ್ತಿರುವುದು   

ಮಂಡ್ಯ: ಈ ಬಾರಿಯ ವಿವಿಧ ಹಂಗಾಮುಗಳ ಬೆಳೆ ಸಮೀಕ್ಷೆ ಜವಾಬ್ದಾರಿಯನ್ನು ಸರ್ಕಾರ ರೈತರಿಗೇ ನೀಡಿದೆ. ಕಳೆದ 15 ದಿನದಿಂದ ಸಮೀಕ್ಷಾ ಕಾರ್ಯ ನಡೆಯುತ್ತಿದ್ದು ಇಲ್ಲಿಯವರೆಗೆ ಜಿಲ್ಲೆಯ ಶೇ 6ರಷ್ಟು ರೈತರು ಬೆಳೆಯ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಖಲು ಮಾಡಿದ್ದಾರೆ.

ಈ ಹಿಂದೆ ಖಾಸಗಿ ನಿವಾಸಿಗಳು (ಪ್ರೈವೇಟ್‌ ರೆಸಿಡೆಂಟ್‌) ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಈ ಬಾರಿ ರೈತರಿಗೆ ನೇರ ಅವಕಾಶ ಕಲ್ಪಿಸಲಾಗಿದ್ದು, ನಿಖರ ಮಾಹಿತಿಗಳನ್ನು ಸ್ವತಃ ರೈತರೇ ದಾಖಲು ಮಾಡುತ್ತಿದ್ದಾರೆ. ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಆಗಬಹುದಾದ ಅಡಚಣೆ ತಪ್ಪಿಸುವುದೇ ಇದರ ಉದ್ದೇಶವಾಗಿದೆ. ಬೆಳೆ ಸಮೀಕ್ಷೆ ಮಾಹಿತಿ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ, ಪ್ರಕೃತಿ ವಿಕೋಪ ಪರಿಹಾರ, ಬೆಳೆ ವಿಮೆ, ಸಾಲ ಯೋಜನೆಗಳ ಸೌಲಭ್ಯ, ಬೆಳೆ ಕಟಾವು ಪ್ರಯೋಗ ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಮಾಡಲು ಸಮೀಕ್ಷೆ ನೆರವಾಗುವುದು.

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯು ಆ. 10 ರಂದು ಆರಂಭವಾಗಿದೆ. ಆ.24ರವರೆಗೆ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನಿಗದಿತ ಅವಧಿಯಲ್ಲಿ ರೈತರು ಮಾಹಿತಿ ದಾಖಲಿಸಲು ಆಸಕ್ತಿ ತೋರಿಸದ ಕಾರಣ ಸಮೀಕ್ಷಾ ಅವಧಿಯನ್ನು ಸೆ. 24ರವರೆಗೆ ಮುಂದೂಡಲಾಗಿದೆ. ಆ್ಯಂಡ್ರಾಯಿಡ್‌ ಮೊಬೈಲ್‌ನ ಫೋನ್‌ನ ಪ್ಲೇ ಸ್ಟೋರ್‌ನಲ್ಲಿ ‘ರೈತರ ಬೆಳೆ ಸಮೀಕ್ಷೆ ಆ್ಯಪ್‌ 2020–21’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಜಮೀನಿನಲ್ಲಿ ಬೆಳೆದ ಬೆಳೆ, ವಿಸ್ತೀರ್ಣ, ನಿರಾವರಿ ಮಾಹಿತಿಯನ್ನು ದಾಖಲು ಮಾಡಬೇಕಾಗಿದೆ.

ADVERTISEMENT

ಬೆಳೆ ಸಮೀಕ್ಷೆ ಸಂದರ್ಭದಲ್ಲಿ ತಪ್ಪು ಮಾಹಿತಿ ದಾಖಲಾದಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ತೊಡಕುಂಟಾಗಬಹುದು. ಬೆಂಬಲ ಬೆಲೆ ಯೋಜನೆ ಘೋಷಣೆಯಾದಾಗ ರೈತರು ಬೆಳೆದಿರುವ ಬೆಳೆ ಹಾಗೂ ಆರ್‌ಟಿಸಿಯಲ್ಲಿ ದಾಖಲಾಗಿರುವ ಮಾಹಿತಿ ವ್ಯತ್ಯಾಸವಾಗುತ್ತಿತ್ತು. ಇದರಿಂದ ರೈತರಿಗೆ ಯೋಜನೆ ಲಾಭ ಸಿಗುತ್ತಿರಲಿಲ್ಲ. ಆದ್ದರಿಂದ ರೈತರೇ ತಮ್ಮ ಮಾಹಿತಿ ದಾಖಲು ಮಾಡುವುದರಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬೆಳೆ ಸಮೀಕ್ಷೆಯಲ್ಲಿ ಒಂದು ವೇಳೆ ತಪ್ಪು ಮಾಹಿತಿ ದಾಖಲಾದಲ್ಲಿ ಮೇಲ್ವಿಚಾರಕರ ಲಾಗಿನ್‌ನಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಅದಕ್ಕೆ ಮನವಿಯನ್ನು ಆನ್‌ಲೈನ್‌ನಲ್ಲೇ ಸಲ್ಲಿಸಬಹುದಾಗಿದೆ. ಈಗಾಗಲೇ ಖಾಸಗಿ ನಿವಾಸಿಗಳು, ಮಾಸ್ಟರ್‌ ತರಬೇತುದಾರರು, ಮೇಲ್ವಿಚಾರಣಾಧಿಕಾರಿಗಳಿಗೆ ಎರಡೆರಡು ಬಾರಿ ತರಬೇತಿ ನೀಡಲಾಗಿದ್ದು ಕೃಷಿ ಇಲಾಖೆ ಬೆಳೆ ಸಮೀಕ್ಷೆಗೆ ಸಂಪೂರ್ಣ ಸಜ್ಜಾಗಿದೆ.

ಸೆ. 24 ರವರೆಗೆ ರೈತರಿರು ಸಮೀಕ್ಷೆ ನಡೆಸಲಿದ್ದು ನಂತರ ಖಾಸಗಿ ನಿವಾಸಿಗಳು ಉಳಿದ ಪ್ಲಾಟ್‌ಗಳ ಸಮೀಕ್ಷೆ ಮಾಡಲಿದ್ದಾರೆ. ಜಿಲ್ಲೆಯ 1,480 ಗ್ರಾಮಗಳಿಗೆ 1940 ಖಾಸಗಿ ನಿವಾಸಿಗಳನ್ನು ಈಗಾಗಲೇ ತರಬೇತಿ ನೀಡಿ ನೇಮಕ ಮಾಡಲಾಗಿದೆ. ದೊಡ್ಡ ಗ್ರಾಮಗಳಿಗೆ ಇಬ್ಬರು ಪಿಆರ್‌ಗಳನ್ನು ನೇಮಿಸಲಾಗಿದೆ. ಮಾಹಿತಿ ದಾಖಲು ಮಾಡುವಲ್ಲಿ ಗೊಂದಲಗಳಿದ್ದಲ್ಲಿ ಅವರನ್ನು ಸಂಪರ್ಕಿಸಿ ನೆರವು ಪಡೆಯಬಹುದು.

ಖಾಸಗಿ ನಿವಾಸಿಗಳ ನೆರವು ಪಡೆದು ರೈತರು ಬೆಳೆ ಮಾಹಿತಿ ನಮೂದಿಸಬಹುದು. ಬರ, ನೆರೆ, ಬೆಳೆ ನಷ್ಟ, ಖರೀದಿ ಸಂದರ್ಭದಲ್ಲಿ ಇದು ನೆರವಾಗಲಿದೆ. ನೆರವು ನೀಡಲು ಸರ್ಕಾರಕ್ಕೆ ಒಂದು ದಾಖಲೆಯಾಗಿ ಸಿಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್ ಪ್ರತಿಕ್ರಿಯಿಸಿದರು.

ಎಲ್ಲಾ ರೈತರಿಗೂ ಇದು ಅಸಾಧ್ಯ

‘ಬೆಳೆ ಸಮೀಕ್ಷೆ ಮಾಡಲು ರೈತರಿಗೆ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ. ಆದರೆ ಬಹುತೇಕ ರೈತರು ಸಾಮಾನ್ಯ ಮೊಬೈಲ್ ಉಪಯೋಗಿಸುತ್ತಿರುವ ಕಾರಣ ಎಲ್ಲಾ ರೈತರು ಸಮೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ಇಡೀ ಸಮೀಕ್ಷೆಯಲ್ಲಿ ಶೇ10 ರಷ್ಟು ರೈತರು ಮಾತ್ರ ಮಾಹಿತಿಗಳನ್ನು ದಾಖಲು ಮಾಡಬಹುದಷ್ಟೇ. ನಾನು ಆ್ಯಂಡ್ರಾಯಿಡ್ ಫೋನ್ ಬಳಸುತ್ತೇನೆ. ಆದರೆ ಆ್ಯಪ್ ಗಳನ್ನು ಅಷ್ಟಾಗಿ ಉಪಯೋಗಿಸಲು ಬರುವುದಿಲ್ಲ. ನೆರವು ನೀಡಿ, ಮಾರ್ಗದರ್ಶನ ಕೊಟ್ಟರೆ ನಾನೇ ಅಪ್ ಲೋಡ್ ಮಾಡುತ್ತೇನೆ’ ಎಂದು ಉಮ್ಮಡಹಳ್ಳಿ ಗ್ರಾಮದ ಪ್ರಗತಿಪರ ರೈತ ಯು.ಸಿ.ಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.