ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಮಂಡ್ಯ: ನಗರದ ರಸ್ತೆಯ ಇಕ್ಕೆಲಗಳಲ್ಲಿ ಇರುವ ಬೃಹತ್ ಮರಗಳನ್ನು ಪದೇ ಪದೇ ಕಡಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲನೆ ನಡೆಸಿ 10 ದಿನಗಳ ಒಳಗೆ ವರದಿಯನ್ನು ಸಲ್ಲಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ಮರ ಕಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದರು.
‘ಪ್ರಜಾವಾಣಿ’ಯಲ್ಲಿ ಮಾರ್ಚ್ 18ರ ಸಂಚಿಕೆಯಲ್ಲಿ ‘ಮುಂದುವರಿದ ಮರಗಳ ಹನನ’ ಶೀರ್ಷಿಕೆಯಲ್ಲಿ ಚಿತ್ರ ಸಹಿತ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಸಚಿವರು, ಮರಗಳ ಹನನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಅಧಿಕಾರಿ ಅಥವಾ ಸಿಬ್ಬಂದಿ ತಪ್ಪೆಸಗಿದ್ದರೆ, ಅಂತಹವರ ವಿರುದ್ಧ ಕೈಗೊಂಡ ಕ್ರಮದ ವಿವರದೊಂದಿಗೆ ವರದಿಯನ್ನು ಸಲ್ಲಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
‘ಮಂಡ್ಯ ನಗರದ ಹೊರವಲಯದ ಹೆಬ್ಬಾಳದ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡ ಸರ್ಕಾರಿ ಸ್ಥಳದಲ್ಲಿದ್ದ ಭಾರಿ ಗಾತ್ರದ ಆರು ಮರಗಳನ್ನು ಕಡಿಯಲಾಗಿದೆ ಹಾಗೂ ಸಿಟಿ ಕ್ಲಬ್ ಮುಂಭಾಗದ ಬೃಹತ್ ಮರವನ್ನು ಬುಡ ಸಮೇತ ನೆಲಕ್ಕುರುಳಿಸಲಾಗಿದೆ. ಅರಣ್ಯ ಇಲಾಖೆ ನೇತೃತ್ವದಲ್ಲೇ ಮರಗಳ ಹನನ ನಡೆದಿರುವುದು ದುರಂತ’ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು.
ಈ ಹಿಂದೆ ಕೂಡ ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ಹಲವಾರು ಮರಗಳನ್ನು ಕತ್ತರಿಸಿದ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು. ಆಗಲೂ ಪ್ರಜಾವಾಣಿಯಲ್ಲಿ ‘ಮರಗಳಿಗೆ ಕೊಡಲಿ; ಬಾನಾಡಿಗಳು ತಬ್ಬಲಿ’ ಶೀರ್ಷಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಟೆಂಡರ್‌ದಾರನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.