ADVERTISEMENT

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ: ಜಿಲ್ಲಾಧಿಕಾರಿ ಕುಮಾರ

ನೋಡೆಲ್‌ ಅಧಿಕಾರಿಗಳ ನೇಮಕ: 8 ಆಶ್ರಯ ತಾಣ ನಿರ್ಮಾಣಕ್ಕೆ ಕ್ರಮ: ಡಿಸಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:05 IST
Last Updated 24 ಫೆಬ್ರುವರಿ 2026, 7:05 IST
ಮಂಡ್ಯ ನಗರದ ಕಲ್ಲಹಳ್ಳಿಯ ವಿ.ವಿ. ನಗರ ಬಡಾವಣೆಯ ಎ.ಪಿ.ಎಂ.ಸಿ ಮುಖ್ಯರಸ್ತೆಯಲ್ಲಿ ಕಂಡುಬಂದ ಬೀದಿನಾಯಿಗಳು  – ಪ್ರಜಾವಾಣಿ ಚಿತ್ರ 
ಮಂಡ್ಯ ನಗರದ ಕಲ್ಲಹಳ್ಳಿಯ ವಿ.ವಿ. ನಗರ ಬಡಾವಣೆಯ ಎ.ಪಿ.ಎಂ.ಸಿ ಮುಖ್ಯರಸ್ತೆಯಲ್ಲಿ ಕಂಡುಬಂದ ಬೀದಿನಾಯಿಗಳು  – ಪ್ರಜಾವಾಣಿ ಚಿತ್ರ    

ಮಂಡ್ಯ: ‘ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಾರ್ಯೋನ್ಮುಖರಾಗಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.

ಪ್ರತಿ ನಗರ ಸ್ಧಳೀಯ ಸಂಸ್ಥೆಗಳಲ್ಲಿಯೂ ಬೀದಿ ನಾಯಿಗಳ ಉಪಟಳ ತಡೆಯಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಸಾರ್ವಜನಿಕ ಕಟ್ಟಡಗಳ ಸುತ್ತ ಆವರಣ ಗೋಡೆ ನಿರ್ಮಿಸಬೇಕು. ಬಸ್ ನಿಲ್ದಾಣದಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ, ಎಲ್ಲೆಂದರಲ್ಲಿ ತಿನಿಸು ಪದಾರ್ಥಗಳನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ADVERTISEMENT

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ: ಎಲ್ಲ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಸೂಕ್ತ ಆಶ್ರಯ ತಾಣಕ್ಕೆ ಸ್ಥಳಾಂತರಿಸಿ ರೇಬಿಸ್ ಲಸಿಕೆಗಳನ್ನು ಹಾಕಬೇಕಾಗುತ್ತದೆ. ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ತಿಳಿಸಿದರು.

ಪ್ರತಿ ತಾಲ್ಲೂಕಿನ ಸ್ಧಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಒಂದರಂತೆ ಒಟ್ಟು 8 ಆಶ್ರಯ ತಾಣಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಶಾಲಾ, ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ 190 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಮುಂದಿನ ದಿನಗಳಲ್ಲಿ ಆಶ್ರಯತಾಣಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಿ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಆಹಾರದ ತ್ಯಾಜ್ಯಗಳು ನಾಯಿಗಳನ್ನು ಆಕರ್ಷಿಸುತ್ತವೆ. ಆದ್ದರಿಂದ ಕಸದ ಡಬ್ಬಿಗಳನ್ನು ಮುಚ್ಚಿಡಿ ಮತ್ತು ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಿ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್‌. ನರಸಿಂಹಮೂರ್ತಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ನಗರಸಭೆ ಆಯುಕ್ತೆ ಪಂಪಾಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.