ಮಳವಳ್ಳಿ: ಕೆಆರ್‌ಎಸ್ ಮತ್ತು ಕಬನಿ ಅಣೆಕಟ್ಟೆಗಳಿಂದ 2 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ತಾಲ್ಲೂಕಿನ ವಿವಿಧೆಡೆ ಪ್ರವಾಹ ಪರಿಸ್ಥಿತಿಯನ್ನು ಗುರುವಾರ ಜಿಲ್ಲಾಧಿಕಾರಿ ಕುಮಾರ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲಿಸಿದರು.
ಜಿಲ್ಲೆಯ ಗಡಿಭಾಗದ ಸತ್ತೇಗಾಲ ಸೇತುವೆ, ಬೆಳಕವಾಡಿ, ಬಿಳಿಜಗಲೆ ಮೊಳೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ತಹಶೀಲ್ದಾರ್ ಕೆ.ಎನ್.ಲೋಕೇಶ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕಾವೇರಿ ನದಿ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದಿಂದ ಕೆಲ ಕೃಷಿ ಜಮೀನು ಜಲಾವೃತವಾಗಿದ್ದು, ಬೆಳೆ ನಷ್ಟ ಅನುಭವಿಸುವ ರೈತರಿಗೆ ಪರಿಹಾರ ನೀಡುವ ಬಗ್ಗೆ ಕೂಡಲೇ ವರದಿ ಸಿದ್ಧಪಡಿಸಿ ಕಳುಹಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳ ತಂಡ ಬಿಳಿಜಗಲೆ ಮೊಳೆ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆ ಭಾಗವಾಗಿರುವ ಪಂಪ್ ಹೌಸ್‌ಗೂ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಕೆಆರ್‌ಎಸ್ ಜಲಾಶಯದಿಂದ 1.70 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಇದ್ದರಿಂದ ಕೃಷಿ ಜಮೀನು ಹಾಗೂ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ತಾಲ್ಲೂಕಿನ ವಿವಿಧೆಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸತ್ತೇಗಾಲ, ಪೂರಿಗಾಲಿ, ಮುತ್ತತ್ತಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಈಗಾಗಲೇ ಬೆಳೆನಷ್ಟದ ಬಗ್ಗೆ ತಂಡ ರಚಿಸಿ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದರು.
ಡಿವೈಎಸ್ಪಿ ವಿ.ಕೃಷ್ಣಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ದೀಪಕ್, ಕಂದಾಯ ನಿರೀಕ್ಷಕ ಯೋಗೇಶ್, ಕೃಷಿ ಅಧಿಕಾರಿ ರಾಜೇಶ್, ಪಿಎಸ್ಐ ವಿ.ಸಿ.ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.