ADVERTISEMENT

ಡೆಕಾಯ್‌ ಕಾರ್ಯಾಚರಣೆ: ಮುಖ್ಯಮಂತ್ರಿ ಕ್ಷೇತ್ರದಲ್ಲೂ ‘ಭ್ರೂಣಹತ್ಯೆ’ ದಂಧೆ!

ಮಂಡ್ಯ ಡಿಎಚ್‌ಒ ನೇತೃತ್ವದಲ್ಲಿ 3ನೇ ಬಾರಿಗೆ ‘ಡೆಕಾಯ್‌’ ಕಾರ್ಯಾಚರಣೆ: 7 ಆರೋಪಿಗಳ ವಿರುದ್ಧ ಎಫ್‌ಐಆರ್‌

ಸಿದ್ದು ಆರ್.ಜಿ.ಹಳ್ಳಿ
Published 24 ಅಕ್ಟೋಬರ್ 2025, 2:42 IST
Last Updated 24 ಅಕ್ಟೋಬರ್ 2025, 2:42 IST
<div class="paragraphs"><p>‘ಡೆಕಾಯ್‌ ಕಾರ್ಯಾಚರಣೆ’ಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಡಿಎಚ್‌ಒ ಡಾ.ಕೆ.ಮೋಹನ್‌ ಮತ್ತು ಡಾ.ಬೆಟ್ಟಸ್ವಾಮಿ ನೇತೃತ್ವದ ತಂಡ&nbsp;</p></div>

‘ಡೆಕಾಯ್‌ ಕಾರ್ಯಾಚರಣೆ’ಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಡಿಎಚ್‌ಒ ಡಾ.ಕೆ.ಮೋಹನ್‌ ಮತ್ತು ಡಾ.ಬೆಟ್ಟಸ್ವಾಮಿ ನೇತೃತ್ವದ ತಂಡ 

   

ಮಂಡ್ಯ: ‘ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ’ ಪ್ರಕರಣಗಳು ‘ಸಕ್ಕರೆ ನಾಡು’ ಮಂಡ್ಯಕ್ಕೆ ಕಳಂಕ ತಂದಿದ್ದವು. ಈಗ ‘ಸಿಎಂ ತವರು ಕ್ಷೇತ್ರ’ಕ್ಕೂ ಈ ದಂಧೆಯ ಜಾಲ ವ್ಯಾಪಿಸಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಿ.ನರಸೀಪುರ ತಾಲ್ಲೂಕಿನ ಹುನಗನಹಳ್ಳಿ ಗ್ರಾಮದ ಫಾರಂ ಹೌಸ್‌ವೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ವರುಣ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ADVERTISEMENT

ಗರ್ಭಿಣಿಯಾಗಿ ಮೂರು ತಿಂಗಳು ಆದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿ, ‘ತಾಯಿ ಕಾರ್ಡ್‌’ ಪಡೆಯುತ್ತಿದ್ದವರ ಮೇಲೆ ಮಂಡ್ಯ ಡಿಎಚ್‌ಒ ಡಾ.ಕೆ.ಮೋಹನ್‌ ನೇತೃತ್ವದ ತಂಡ ವಿಶೇಷ ನಿಗಾ ಇಟ್ಟಿತ್ತು. ನಾಗಮಂಗಲ ತಾಲ್ಲೂಕಿನ ಗರ್ಭಿಣಿಯೊಬ್ಬರು ಸ್ಕ್ಯಾನ್‌ ಮಾಡಿಸಿಕೊಂಡು ಬಂದಿರುವ ವಿಚಾರ ಗಮನಕ್ಕೆ ಬಂದ ತಕ್ಷಣ ತಂಡ ಜಾಗೃತಗೊಂಡಿತು. 

ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಕಳೆದ ಎರಡು ತಿಂಗಳಿಂದ ಕಣ್ಗಾವಲು ಇಡಲಾಗಿತ್ತು. ಮಂಡ್ಯದ ವೈದ್ಯರ ತಂಡದ ವತಿಯಿಂದ ನಾಗಮಂಗಲ, ಆಂಧ್ರಪ್ರದೇಶದ ನಂತರ ಮೈಸೂರು ಜಿಲ್ಲೆಯಲ್ಲಿ ನಡೆಸಿರುವ 3ನೇ ಬಾರಿಯ ‘ಡೆಕಾಯ್‌ ಕಾರ್ಯಾಚರಣೆ’ಯೂ (ಹೆಣ್ಣು ಭ್ರೂಣ ಲಿಂಗ ಪತ್ತೆ ಜಾಲವನ್ನು ಭೇದಿಸಲು ಆರೋಗ್ಯ ಇಲಾಖೆಯಿಂದ ಗರ್ಭಿಣಿಯನ್ನು ಕಳುಹಿಸಿ ನಡೆಸಿದ ಕಾರ್ಯಾಚರಣೆ) ಯಶಸ್ವಿಯಾಗಿದೆ. 

‘ಡೆಕಾಯ್‌’ ಕಾರ್ಯಾಚರಣೆ

2024ರ ಆಗಸ್ಟ್‌ 16ರಂದು ನಾಗಮಂಗಲ ತಾಲ್ಲೂಕಿನ ಬಿಂಡಿಗನವಲೆ ಹೋಬಳಿಯ ದೇವರ ಮಾವಿನಕೆರೆಯ ತೋಟದ ಮನೆಯ ಮೇಲೆ ದಾಳಿ ನಡೆಸಿ, ಸ್ಥಳದಲ್ಲೇ ಮೂವರನ್ನು ವಶಕ್ಕೆ ಪಡೆಯುವಲ್ಲಿ ಡಿಎಚ್‌ಒ ನೇತೃತ್ವದ ವಿಶೇಷ ತಂಡ ಯಶಸ್ವಿಯಾಗಿತ್ತು. ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಸಿದ ‘ಡೆಕಾಯ್‌ ಕಾರ್ಯಾಚರಣೆ’ ಸಂಪೂರ್ಣ ಯಶಸ್ವಿಯಾಗಿತ್ತು. 

ಈ ಪ್ರಕರಣದ ನಂತರ ಹೆಣ್ಣುಭ್ರೂಣ ಲಿಂಗ ಪತ್ತೆ ಬಗ್ಗೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜತೆಗೆ, ದಂಧೆ ನಡೆಸುವ ಜಾಲದ ಬಗ್ಗೆ ‘ಹದ್ದಿನ ಕಣ್ಣು’ ಇಟ್ಟಿತ್ತು. ಇದೇ ವರ್ಷ ಸೆಪ್ಟೆಂಬರ್‌ 25ರಂದು ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಕರ್ನಾಟಕ ಮತ್ತು ಆಂಧ್ರದ ವೈದ್ಯರ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಆಂಧ್ರದ ಖಾಸಗಿ ನರ್ಸಿಂಗ್‌ ಹೋಂಗೆ ಬೀಗ ಬಿದ್ದಿತ್ತು. ಈ ಕಾರ್ಯಾಚರಣೆಯಲ್ಲೂ ಮಂಡ್ಯದ ವೈದ್ಯರ ತಂಡ ಪ್ರಮುಖ ಪಾತ್ರ ವಹಿಸಿತ್ತು. 

ಬಳ್ಳಾರಿ ಜಿಲ್ಲೆ ದೂಪರದಹಳ್ಳಿ ತಾಂಡ ಕುಟುಂಬವೊಂದು ಕಬ್ಬು ಕಟಾವು ಕೆಲಸಕ್ಕಾಗಿ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮಕ್ಕೆ ವಲಸೆ ಬಂದಿತ್ತು. ಈ ಮಧ್ಯೆ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯು ಬಳ್ಳಾರಿ ಕುಟುಂಬದ ಗರ್ಭಿಣಿಯ ಆರೋಗ್ಯ ತಪಾಸಣೆ ನಡೆಸಿ, ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ಸ್ಥಿತಿ ಅರಿಯಲು ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬರುವಂತೆ ಸಲಹೆ ನೀಡಿದ್ದರು.

ಆದರೆ, ಕೆಲವು ದಿನಗಳವರೆಗೆ ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬಾರದ ಮಹಿಳೆಯರು, ಇದ್ದಕ್ಕಿದ್ದಂತೆ ಬಳ್ಳಾರಿಗೆ ತೆರಳಿದ್ದರು. ಕೆಲವು ದಿನಗಳ ಬಳಿಕ ಬಂಡೂರಿಗೆ ವಾಪಸ್‌ ಆಗಿದ್ದ ಮಹಿಳೆಯರು ಬೇಸರದಲ್ಲಿ ಕುಳಿತಿರುವುದನ್ನು ಗಮನಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ವಿಚಾರಿಸಿದಾಗ, ‘ನನಗೆ ಮೂರು ಹೆಣ್ಣು ಮಕ್ಕಳಿವೆ. 4ನೇ ಮಗುವೂ ಹೆಣ್ಣಾಗಿದ್ದರಿಂದ ಗರ್ಭಪಾತ ಮಾಡಿಸಲಾಗಿತ್ತು. ಇದೀಗ 5ನೇ ಮಗುವೂ ಹೆಣ್ಣಾಗಿದೆ’ ಎಂದು ಬಾಯಿತಪ್ಪಿ ಹೇಳಿದ್ದರು. ಇದರಿಂದ ಪ್ರಕರಣ ಬಯಲಿಗೆಳೆಯಲು ಸಾಧ್ಯವಾಯಿತು ಎಂದು ಡಿಎಚ್‌ಒ ಕೆ.ಮೋಹನ್‌ ತಿಳಿಸಿದ್ದಾರೆ. 

ಹುನಗನಹಳ್ಳಿ ಪ್ರಕರಣದ ಕಾರ್ಯಾಚರಣೆಯಲ್ಲಿ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ವಿವೇಕ್‌ ದೊರೆ, ಡಿಎಚ್‌ಒ ಡಾ.ಕೆ.ಮೋಹನ್‌, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಮಂಗಳಾ, ಈಶ್ವರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಲಕ್ಷಾಂತರ ರೂಪಾಯಿ ಶುಲ್ಕ!
ತಿ.ನರಸೀಪುರ ತಾಲ್ಲೂಕಿನ ಹುಣಗನಹಳ್ಳಿ ಹುಂಡಿ ಗ್ರಾಮದ ಫಾರಂ ಹೌಸ್‌ವೊಂದರಲ್ಲಿ ದಾಳಿ ನಡೆಸಿದ ಸಂದರ್ಭ ಪತ್ತೆಯಾದ ಪುಸ್ತಕದಲ್ಲಿ ₹1.50 ಲಕ್ಷ ₹1.90 ಲಕ್ಷ ಎಂದು ಪುಸ್ತಕದಲ್ಲಿ ದಿನಾಂಕವಾರು ನಮೂದಿಸಲಾಗಿತ್ತು. ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿರುವುದು ಇದರಿಂದ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾದ ನಂತರ ಈ ದಂಧೆಯ ಜಾಲ ಅಕ್ಕಪಕ್ಕದ ಜಿಲ್ಲೆಗೆ ಕಾಲಿಟ್ಟು ಅಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ನಾಗಮಂಗಲದಲ್ಲಿ ಸಿಕ್ಕಿಬಿದ್ದ ಆರೋಪಿ ಈಗ ಜಾಮೀನಿನ ಮೇಲೆ ಹೊರಬಂದಿದ್ದು ಆತನ ಪಾತ್ರ ಮೈಸೂರಿನ ಪ್ರಕರಣದಲ್ಲೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಮಂಡ್ಯದಲ್ಲಿ ಲಿಂಗಾನುಪಾತ ಏರಿಕೆ

‘ಮಂಡ್ಯ ಜಿಲ್ಲೆಯಲ್ಲಿ 2023ರಲ್ಲಿ ಲಿಂಗಾನುಪಾತ 869 ಇತ್ತು. ಲಿಂಗಾನುಪಾತ ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರತಿ 1000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ. ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ನಂತರ ಲಿಂಗಾನುಪಾತ 936ಕ್ಕೆ ಏರಿಕೆಯಾಗಿದೆ’ ಎಂದು ಮಂಡ್ಯ ಡಿಎಚ್‌ಒ ಡಾ.ಕೆ.ಮೋಹನ್‌ ತಿಳಿಸಿದರು.

ಭ್ರೂಣ ಲಿಂಗ ಪತ್ತೆ ಮಾಡುವವರ ಮೇಲೆ ವಿಶೇಷ ನಿಗಾ ಇಟ್ಟ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿ ಈ ದಂಧೆಗೆ ಕಡಿವಾಣ ಬಿದ್ದಿದೆ. ಆದರೂ ಮಂಡ್ಯ ಜಿಲ್ಲೆಯ ಕೆಲವು ಗರ್ಭಿಣಿಯರು ಹೊರ ಜಿಲ್ಲೆಗೆ ಹೋಗಿ ಸ್ಕ್ಯಾನಿಂಗ್‌ ಮಾಡಿಸಿ ಭ್ರೂಣ ಲಿಂಗ ಪತ್ತೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಅನುಮಾನವಿದೆ. ಹೀಗಾಗಿ ಈ ಪಿಡುಗನ್ನು ಸಂಪೂರ್ಣವಾಗಿ ತೊಡದು ಹಾಕಲು ನಮ್ಮ ತಂಡ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

ಗಂಡಂದಿರ ಒತ್ತಡದಿಂದ ಸ್ಕ್ಯಾನಿಂಗ್‌!

‘ಹುನಗನಹಳ್ಳಿ ಫಾರಂ ಹೌಸ್‌ ಮೇಲೆ ದಾಳಿ ನಡೆಸಿದಾಗ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಲು ಬಂದಿದ್ದ ಇಬ್ಬರು ಗರ್ಭಿಣಿಯರು ಪತ್ತೆಯಾಗಿದ್ದಾರೆ. ‘ಈಗಾಗಲೇ ನಮಗೆ ಹೆಣ್ಣು ಮಕ್ಕಳಿದ್ದು ಮತ್ತೊಮ್ಮೆ ಹೆಣ್ಣುಮಗುವಾದರೆ ಗಂಡನಿಂದ ತೊಂದರೆಯಾಗುವ ಸಾಧ್ಯತೆ ಇತ್ತು. ಸ್ಕ್ಯಾನಿಂಗ್‌ ಮಾಡಿಸಿ ಭ್ರೂಣ ಪತ್ತೆ ಮಾಡಿಸಲು ನಮ್ಮ ಪತಿಯೇ ಹಣ ನೀಡಿ ಕಳುಹಿಸಿದ್ದರು. ಈಗಾಗಲೇ ₹30 ಸಾವಿರ ನೀಡಿದ್ದೇವೆ’ ಎಂದು ಇಬ್ಬರು ಗರ್ಭಿಣಿಯರು ಒಪ್ಪಿಕೊಂಡಿರುವುದಾಗಿ ಎಫ್‌ಐಆರ್‌ನಲ್ಲಿ ವರದಿಯಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.