ADVERTISEMENT

‘ಜಿ.ಪಂ ಸದಸ್ಯರನ್ನು ಸೋಲಿಸಿ’ ಅಭಿಯಾನ!

ಮುಂಬರುವ ಚುನಾವಣೆಯಲ್ಲಿ ಆಯ್ಕೆ ಮಾಡದಂತೆ ಗ್ರಾ.ಪಂ ವ್ಯಾಪ್ತಿಯಲ್ಲಿ ಜಾಗೃತಿ ನಡೆಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:50 IST
Last Updated 19 ಮಾರ್ಚ್ 2021, 16:50 IST
ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡ
ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡ   

ಮಂಡ್ಯ: ಕಳೆದ 18 ತಿಂಗಳಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಸದೇ ಜಿಲ್ಲೆಯ ಅಭಿವೃದ್ಧಿ ಬಲಿಕೊಟ್ಟ ಜಿ.ಪಂ ಸದಸ್ಯರ ವಿರುದ್ಧ ‘ಚುನಾವಣೆಯಲ್ಲಿ ಸೋಲಿಸಿ’ ಅಭಿಯಾನ ನಡೆಸಲು ಯುವ ಹೋರಾಟಗಾರರ ತಂಡವೊಂದು ಸಿದ್ಧತೆ ನಡೆಸಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಹಾಗೂ ಜೆಡಿಎಸ್‌ ಸದಸ್ಯರ ಅಧಿಕಾರದ ದಾಹಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯಿತಿಯ ಮರ್ಯಾದೆ ರಾಜ್ಯ ಮಟ್ಟದಲ್ಲಿ ಹರಾಜಾಗಿದೆ. ಸದಸ್ಯರ ವಿಶ್ವಾಸ ಪಡೆಯಲು ವಿಫಲರಾಗಿರುವ ಅಧ್ಯಕ್ಷರು ಬಜೆಟ್‌ ಮಂಡಿಸಲೂ ಸಾಧ್ಯವಾಗಿಲ್ಲ. ಕ್ರಿಯಾಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಜಿಲ್ಲೆಯ ಹಿತ ಕಡೆಗಣಿಸಿರುವ ಸದಸ್ಯರು ರಾಜಕೀಯ ಮೇಲಾಟ ಪ್ರದರ್ಶಿಸಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ.

ಇಂಥವರು ಮತ್ತೊಮ್ಮೆ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾಗಬಾರದು ಎಂಬ ಉದ್ದೇಶದಿಂದ ‘ನಾವು ದ್ರಾವಿಡ ಕನ್ನಡಿಗರು’ ಸಂಘಟನೆ ಸದಸ್ಯರು ‘ಚುನಾವಣೆಯಲ್ಲಿ ಸೋಲಿಸಿ’ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಮುಂಬರುವ ಜಿ.ಪಂ ಚುನಾವಣೆ ವೇಳೆ ಈಗಿನ ಸದಸ್ಯರನ್ನು ಆಯ್ಕೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದ್ದಾರೆ.

ADVERTISEMENT

‘ಕಳೆದ 2 ವರ್ಷಗಳಿಂದ ಜಿಲ್ಲೆಯ ಜನರ ಹಿತವನ್ನು ಬಲಿ ಕೊಟ್ಟಿರುವ ಸದಸ್ಯರು ಮತ್ತೆ ಸದಸ್ಯರಾಗಬಾರದು ಎಂಬುದೇ ನಮ್ಮ ಕಾಳಜಿ. ಈಗ ಸದಸ್ಯರಾಗಿರುವವರು ಮುಂಬರುವ ಚುನಾವಣೆಯಲ್ಲಿ ಎಷ್ಟು ಮಂದಿ ಸ್ಪರ್ಧಿಸುತ್ತಾರೋ ಅವರೆಲ್ಲರ ವಿರುದ್ಧ ಅಭಿಯಾನ ನಡೆಸಲಾಗುವುದು. ಜಿ.ಪಂ ಆಡಳಿತ ನಡೆಸಲು ಇವರು ಅಸಮರ್ಥರಾಗಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ಸಂಘಟನೆ ಅಧ್ಯಕ್ಷ ಅಭಿಗೌಡ ಹೇಳಿದರು.

‘ಸಾಮಾನ್ಯ ಸಭೆಗಳಲ್ಲಿ ಇವರು ಪ್ರದರ್ಶಿಸಿರುವ ನಾಟಕವನ್ನು ರಾಜ್ಯದ ಜನರು ನೋಡಿದ್ದಾರೆ. ಇವರು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದರೂ ಅವರನ್ನು ಜನರು ತಿರಸ್ಕಾರ ಮಾಡಬೇಕು. ಜಿಲ್ಲೆಯ 234 ಗ್ರಾ.ಪಂಗಳಲ್ಲಿ ನಮ್ಮ ತಂಡ ಸಭೆ ನಡೆಸಿ ಜಾಗೃತಿ ಮೂಡಿಸಲಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಅಭಿಯಾನ ನಡೆಸಲಿದ್ದೇವೆ’ ಎಂದರು.

ಇಂದು 8ನೇ ಸಭೆ: ಕಳೆದ 18 ತಿಂಗಳಿಂದ 7 ಬಾರಿ ಸಾಮಾನ್ಯ ಸಭೆ ಮುಂದೂಡಲಾಗಿದೆ. 8ನೇ ಸಾಮಾನ್ಯ ಸಭೆ ಶನಿವಾರ ನಡೆಯಲಿದ್ದು ಈಗಲಾದರೂ ಅಧ್ಯಕ್ಷರು–ಸದಸ್ಯರು ಸಭೆ ನಡೆಸುವರೇ ಎಂಬ ಪ್ರಶ್ನೆ ನಿರ್ಮಾಣವಾಗಿದೆ. ಜಿಲ್ಲಾ ಪಂಚಾಯಿತಿಯ ಅಧಿಕಾರಾವಧಿ ಕೇವಲ 40 ದಿನ ಬಾಕಿ ಉಳಿದಿದ್ದು ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಅಂತಿಮವಾಗಿ ಕಾಟಾಚಾರಕ್ಕೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಒಟ್ಟು 41 ಸ್ಥಾನಗಳಿದ್ದು ಜೆಡಿಎಸ್‌ 27, ಕಾಂಗ್ರೆಸ್‌ 13, ಪಕ್ಷೇತರ 1 ಸ್ಥಾನಗಳಿವೆ. ಜೆಡಿಎಸ್‌ನಿಂದ ಗೆದ್ದು ನಾಗರತ್ನಾ ಅಧ್ಯಕ್ಷೆಯಾಗಿದ್ದಾರೆ. ಜೆಡಿಎಸ್‌ ವರಿಷ್ಠರು ರಾಜೀನಾಮೆಗೆ ಸೂಚನೆ ನೀಡಿದ್ದರೂ ಅದಕ್ಕೆ ಕ್ಯಾರೆ ಎನ್ನದೇ ಅಧಿಕಾರಾವಧಿ ಪೂರ್ಣಗೊಳಿಸುವ ಹಂತ ತಲುಪಿದ್ದಾರೆ. ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಹಠಕ್ಕೆ ಬಿದ್ದಿದ್ದ ಜೆಡಿಎಸ್‌ ಸದಸ್ಯರು ಸೋತು ಸುಣ್ಣವಾಗಿದ್ದಾರೆ. ಯಾವುದೇ ಸಭೆಗೂ ಹಾಜರಾಗದೇ ಅಸಹಾಕಾರ ತೋರಿದ್ದಾರೆ. ಅಧ್ಯಕ್ಷರು ಹಾಗೂ ಸದಸ್ಯರ ನಡುವೆ 2 ಗುಂಪುಗಳಾಗಿದ್ದು ಇವರ ವರ್ತನೆಯಿಂದ ಸಾಮಾನ್ಯ ಸಭೆಗಳು ಬಲಿಯಾಗಿವೆ.

‘ಜಿಲ್ಲಾ ಪಂಚಾಯಿತಿ ಆಡಳಿತಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಯಾವ ಮುಖ ಹೊತ್ತು ಜನರ ಮುಂದೆ ಹೋಗಿ ವೋಟು ಕೊಡಿ ಎಂದು ಕೇಳಬೇಕೋ ಗೊತ್ತಿಲ್ಲ’ ಎಂದು ಪಕ್ಷೇತರ ಸದಸ್ಯ ಎನ್‌.ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.