ADVERTISEMENT

ಪರಿಹಾರ ಘೋಷಣೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 13:40 IST
Last Updated 10 ಆಗಸ್ಟ್ 2020, 13:40 IST
ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಬಂಡವಾಳಶಾಹಿಗಳ ಹಿತರಕ್ಷಣೆಗೆ ಒತ್ತು ನೀಡುವ ಆರ್ಥಿಕ ಧೋರಣೆಗಳನ್ನು ಕೈಬಿಡಬೇಕು, ಎಲ್ಲಾ ರೀತಿಯ ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯ ಪರಿಹಾರ ಧನ ನೀಡಬೇಕು, ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಸಿಐಟಿಯು, ಪ್ರಾಂತ ಕೃಷಿ ಕೂಲಿಕಾರರ ಸಂಘ, ಪ್ರಾಂತ ರೈತ ಸಂಘ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕೊರೊನಾ ಸಂಕಷ್ಟ ಕಾಲದಲ್ಲಿ ಜನ ಸಾಮಾನ್ಯರ ರಕ್ಷಣೆ ಮಾಡದೆ ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದೆ. ಕಾರ್ಮಿಕ ಪರ ಕಾನೂನುಗಳನ್ನು ತೆಗೆದು ಹಾಕಿ ಕಾರ್ಮಿಕರನ್ನು ಜೀತಕ್ಕೆ ದೂಡುವ ಸುಗ್ರೀವಾಜ್ಞೆ ಹೊರಡಿಸಿ ಅವರ ಜೀವನವನ್ನು ನಾಶ ಮಾಡಮಾಡುತ್ತಿದೆ. ಸಾರ್ವಜನಿಕ ವಲಯದ ಕೈಗಾರಿಕೆಗಳು, ಹಣಕಾಸು ವಲಯ ಸಂಸ್ಥೆಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು, ಸಾರ್ವಜನಿಕರನ್ನು ಕಾಳಸಂತೆಯ ಲೂಟಿಕೋರತನಕ್ಕೆ ಒಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬೀಡಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ಕಾರ್ಮಿಕರು ಅಸಮರ್ಪಕ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಮಿಕರಿಗೆ ಕೂಡಲೇ ವಿಶೇಷ ಪ್ಯಾಕೇಜ್‌ ನೀಡಬೇಕು. ಬಿಸಿಯೂಟ ನೌಕರರಿಗೆ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳ ವೇತನವನ್ನು ತಕ್ಷಣ ನೀಡಬೇಕು. ಅಂಗನವಾಡಿ, ಆಶಾ ಹಾಗೂ ಯೋಜನಾ ನೌಕರರಿಗೆ ಪ್ರೋತ್ಸಾಹಧನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ 18 ತಿಂಗಳ ಬಾಕಿ ವೇತನವನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕೋವಿಡ್‌ ನಿರ್ವಹಣೆ ಸಲಕರಣೆ ಖರೀದಿ ಭ್ರಷ್ಟಾಚಾರ ಹಗರಣದ ಸ್ವತಂತ್ರ್ಯ ನ್ಯಾಯಾಂಗ ತನಿಖೆ ನಡೆಸಬೇಕು. ಮೈಕ್ರೋ ಫೈನಾನ್ಸ್‌ ಹಾಗೂ ಸಣ್ಣ ಫೈನಾನ್ಸ್‌ಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ವಿದ್ಯಾವಂತ ಯುವಜನರಿಗೆ ₹10 ಸಾವಿರ ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಇಲ್ಲವೇ ಉದ್ಯೋಗಾವಕಾಶ ಸೃಷ್ಟಿಸಬೇಕು. ಮುಂದಿನ 6 ತಿಂಗಳು ತಲಾ 10 ಕೆ.ಜಿ. ಉಚಿತ ಆಹಾರ ಧಾನ್ಯ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಎಐಎಡಬ್ಲ್ಯೂಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಚಂದ್ರಶೇಖರ್‌, ಪುಟ್ಟಮ್ಮ, ಪ್ರಮೀಳಾ ಕುಮಾರಿ, ರಾಜು, ಟಿ.ಎಲ್‌ ಕೃಷ್ಣೇಗೌಡ, ವೆಂಕಟಲಕ್ಷ್ಮಿ, ಎಂ.ಲಕ್ಷ್ಮಿ, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.