ನಾಗಮಂಗಲ: ತಾಲ್ಲೂಕಿನ ದಾಸರಹಳ್ಳಿ ಸಮೀಪ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆ ಪರವಾನಗಿ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸುತ್ತಮುತ್ತಲಿನ ಹತ್ತು ಗ್ರಾಮಗಳ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಹೊರವಲಯದಲ್ಲಿ ಸಾತೇನಹಳ್ಳಿ ಸರ್ವೇ ನಂಬರ್ 138ರಲ್ಲಿರುವ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಿರುವ ಜಾಗಕ್ಕೆ ಗುರುವಾರ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಜಮಾಯಿಸಿ ಗಣಿಗಾರಿಕೆಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಬೇಕು. ಇಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ ಸುತ್ತಮುತ್ತಲಿನ 10 ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಸಾವಿರಾರು ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಸುತ್ತಮುತ್ತಲ ನಮ್ಮ ಜಮೀನು ಮತ್ತು ತೋಟಗಳು ನಾಶವಾಗುತ್ತವೆ’ಎಂದು ಆರೋಪಿಸಿದರು.
‘ಕಲ್ಲು ಗಣಿಗಾರಿಕೆಯ ವೇಳೆ ಸ್ಫೋಟ ನಡೆಸಿದರೆ ನಮ್ಮ ಮನೆಗಳು ಸೇರಿದಂತೆ ಪಕ್ಷದ ಬೆಟ್ಟದಲ್ಲಿರುವ ಐತಿಹಾಸಿಕ ದೇವಾಲಯಕ್ಕೂ ಹಾನಿಯಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಉತ್ತಮ ಪರಿಸರ ನಾಶವಾಗುತ್ತದೆ. ಕೃಷಿಯನ್ನೇ ನಂಬಿ ಬದುಕುತ್ತರುವ ಜನರು ಇಲ್ಲಿಂದ ಬಿಡುಗಡೆಯಾಗುವ ಧೂಳಿನಿಂದ ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲರೂ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಪ್ರತಿಭಟನಕಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಂತರ ಮುಖಂಡರಾದ ಕಂಚಹಳ್ಳಿ ಜಯರಾಮೇಗೌಡ ಮಾತನಾಡಿ, ‘ನಾವು ರಕ್ತ ಕೊಟ್ಟರೂ ಪರವಾಗಿಲ್ಲ. ಆದರೆ ನಮ್ಮ ಊರುಗಳ ವ್ಯಾಪ್ತಿಯಿಂದ ಒಂದು ಹಿಡಿ ಮಣ್ಣು, ಒಂದು ಕಲ್ಲನ್ನು ಸಹ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಜೊತೆಗೆ ಪರವಾನಗಿ ರದ್ದುಗೊಳಿಸುವವರೆಗೂ ಶಾಂತಿಯುತ ಹೋರಾಟ ಮಾಡುತ್ತೇವೆ’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಪರವಾನಗಿ ಪಡೆದ ಪುಟ್ಟೇಗೌಡ ಅವರ ಅಳಿಯ ಕಿರಣ್ ಗ್ರಾಮಸ್ಥರೊಂದಿಗೆ ಮಾತನಾಡಿ, ‘ಗಣಿಗಾರಿಕೆಗೆ ಅಗತ್ಯವಾದ ರಸ್ತೆ ಮಾಡಿಕೊಳ್ಳುತ್ತಿದ್ದೇವೆ. ಇಲ್ಲಿ ಕ್ರಷರ್ ಮಾಡುವುದಿಲ್ಲ, ಕೇವಲ ಕಲ್ಲನ್ನು ಹೊಡೆದು ಸಾಗಿಸುತ್ತೇವೆ. ಗ್ರಾಮಸ್ಥರು ಒಪ್ಪದಿದ್ದರೆ, ಸರ್ಕಾರ ಪರವಾನಗಿ ರದ್ದು ಮಾಡಿದರೆ ಪರವಾನಗಿಗೆ ನೀಡಿದ ಹಣವನ್ನು ಮರಳಿ ಪಡೆದು ಹೋಗುತ್ತೇವೆ. ಆದರೆ ಗ್ರಾಮದ ರೈತರು ರಸ್ತೆ ಅವಕಾಶ ಕೊಟ್ಟರೆ ಗಣಿಗಾರಿಕೆ ಮಾಡುತ್ತೇವೆ’ ಎಂದರು.
ಸ್ಥಳಕ್ಕೆ ರಾಜಸ್ವನಿರೀಕ್ಷಕ ಮಂಜುನಾಥ್ ಮತ್ತು ಗ್ರಾಮಾಡಳಿತಾಧಿಕಾರಿ ಬಸವರಾಜ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಾದ ಸಾತೇಹಳ್ಳಿ ನರೇಂದ್ರ, ವೆಂಕಟೇಶ್, ದುರ್ಗೇಶ್, ಶ್ರೀಹರಿ, ಶ್ರೀನಿವಾಸ್, ರಾಮಲಿಂಗೇಗೌಡ, ಚೇತನ್, ಚನ್ನಕೇಶವ, ರವಿಕುಮಾರ್, ಬಸವರಾಜು, ಕೆಂಪಣ್ಣ, ಯೋಗೇಶ್, ಮಂಜು, ಹರೀಶ್, ಮನು, ಜಯರಾಮು, ಮಂಜುನಾಥ, ನಾಗರಾಜ್, ಸುಬ್ಬಕೃಷ್ಣ, ಶಂಕರ್, ರೇವಣ್ಣ, ಕೆಂಪಯ್ಯ, ಮಲ್ಲೇಶ್, ಸುನೀಲ್ ಕುಮಾರ್, ಕುಮಾರಸ್ವಾಮಿ, ಪುಟ್ಟೇಗೌಡ, ಸುರೇಶ್, ಮನೋಜ್ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.
ಯಾವ ಗ್ರಾಮಗಳು
ತಾಲ್ಲೂಕಿನ ಸಾತೇನಹಳ್ಳಿ ದಾಸರಹಳ್ಳಿ ಇರಕನಘಟ್ಟ ಹೊನ್ನೇನಹಳ್ಳಿ ವಡ್ಡರಹಳ್ಳಿ ಕಂಚನಹಳ್ಳಿ ಬೀಚನಹಳ್ಳಿ ಸೇರಿದಂತೆ ಕೋಡಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗಾಗಿ ನೀಡಿರುವ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.