ADVERTISEMENT

ಮಂಡ್ಯ ಜಿಲ್ಲಾಸ್ಪತ್ರೆಯ 20 ಎಕರೆ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:58 IST
Last Updated 16 ಡಿಸೆಂಬರ್ 2025, 6:58 IST
<div class="paragraphs"><p>ಮಂಡ್ಯ ಜಿಲ್ಲಾಸ್ಪತ್ರೆ</p></div>

ಮಂಡ್ಯ ಜಿಲ್ಲಾಸ್ಪತ್ರೆ

   

ಮಂಡ್ಯ: ‘ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾಕೇರ್ ನಿರ್ಮಾಣಕ್ಕೆ ವಿಶಾಲ ಜಮೀನು ಅಗತ್ಯವಿದ್ದು, ಇದಕ್ಕಾಗಿ ಮೆಡಿಕಲ್ ಕಾಲೇಜಿಗೆ ಸೇರಿದ 20 ಎಕರೆ ಒತ್ತುವರಿ ತೆರವುಗೊಳಿಸಬೇಕು. ಆದರೆ ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ’ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.

‘ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಅವರು ಸಕಾರಾತ್ಮಕ ನಡೆ ಇಟ್ಟಿರುವುದು ಸ್ವಾಗತಾರ್ಹವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಶ್ಲಾಘಿಸಿದರು.

ADVERTISEMENT

‘ಒಂದು ಮೆಡಿಕಲ್ ಕಾಲೇಜಿಗೆ ಇರಬೇಕಾದ ಶೈಕ್ಷಣಿಕ ವಾತಾವರಣ ಇಲ್ಲವಾಗಿದ್ದು, ವಿದ್ಯಾರ್ಥಿಗಳು ಕಾಲೇಜು ಬಿಟ್ಟರೆ ಕೊಠಡಿ ಸೇರುವ ಜಿಲ್ಲಾಸ್ಪತ್ರೆಗೆ ಬರುವ ಜನರು ನಿಲ್ಲಲು ಆಗದಂತಹ ಇಕ್ಕಟ್ಟಾದ ವಾತಾವರಣದಲ್ಲಿ ಮೆಡಿಕಲ್ ಕಾಲೇಜನ್ನು ನಿರ್ವಹಿಸಲಾಗುತ್ತಿದೆ. ಇದೇ ಕಾರಣಕ್ಕೆ ಮಂಡ್ಯ ಮೆಡಿಕಲ್ ಕಾಲೇಜಿಗೆ ಹೆಚ್ಚುವರಿಯಾಗಿ ಲಭ್ಯವಾಗಬೇಕಿದ್ದ 50 ವೈದ್ಯಕೀಯ ಸೀಟುಗಳು ಮಿಮ್ಸ್‌ನಿಂದ ಕೈತಪ್ಪಿ ಹೋಗಿವೆ. ಇದಕ್ಕೆ ಯಾರನ್ನು ಹೊಣೆಗಾರಿಕೆ ಮಾಡಬೇಕು’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ತಮಿಳು ಕಾಲೊನಿ ನಿವಾಸಿಗಳಿಗಾಗಿ ₹36 ಕೋಟಿ ವೆಚ್ಚದಲ್ಲಿ 576 ಮನೆಗಳನ್ನು ನಗರ ವ್ಯಾಪ್ತಿಯೊಳಗೆ ನಿರ್ಮಿಸಿದೆ. ಇದನ್ನು ಹಂಚಿಕೆ ಮಾಡುವ ಬದಲು ತನ್ನ ಅಸಹಾಯಕತೆ ಪ್ರದರ್ಶಿಸುತ್ತಿದೆ. ಹೈಕೋರ್ಟ್‌ ದ್ವಿಸದಸ್ಯ ಪೀಠ ಒತ್ತುವರಿ ತೆರವಿಗೆ ಸ್ಪಷ್ಟ ಆದೇಶ ನೀಡಿದೆ. ಇದನ್ನು ಮನದಟ್ಟು ಮಾಡಲು ಆಡ್ವೋಕೇಟ್ ಜನರಲ್ ಅವರನ್ನು ಈ ಪ್ರಕರಣದಲ್ಲಿ ಹಾಜರುಪಡಿಸಿ ಒತ್ತುವರಿ ತೆರವಿನ ಕುರಿತು ರಾಜ್ಯ ಸರ್ಕಾರ ತನ್ನ ಬದ್ಧತೆ ತೋರಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ‘ಜನರ ಆರೋಗ್ಯದ ಪ್ರಶ್ನೆಯಾಗಿರುವುದರಿಂದ ಯಾವುದೇ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿರಿಸಿ ಜಿಲ್ಲೆಯ ಪರವಾಗಿ ರಾಜಕೀಯ ಇಚ್ಛಾಶಕ್ತಿ ತೋರಬೇಕು’ ಎಂದು ಸಲಹೆ ನೀಡಿದರು.

ಮುಖಂಡರಾದ ಅಣ್ಣಯ್ಯ, ಎಚ್.ಡಿ.ಜಯರಾಮ್, ರಾಜುಗೌಡ, ರಮೇಶ್‌ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.