ADVERTISEMENT

ದೇವೇಗೌಡರ ಹೆಸರಲ್ಲಿ ಅಪ್ಪ–ಮಕ್ಕಳ ರಾಜಕಾರಣ: ಎನ್‌.ಚಲುವರಾಯಸ್ವಾಮಿ

ನಿಖಿಲ್‌–ಕುಮಾರಸ್ವಾಮಿಯನ್ನು ಟೀಕಿಸಿದ ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 3:56 IST
Last Updated 2 ನವೆಂಬರ್ 2025, 3:56 IST
ಎನ್‌.ಚಲುವರಾಯಸ್ವಾಮಿ
ಎನ್‌.ಚಲುವರಾಯಸ್ವಾಮಿ   

ಮಂಡ್ಯ: ‘ಅಪ್ಪ-ಮಕ್ಕಳು ಇನ್ನೂ ಎಷ್ಟು ವರ್ಷ ದೇವೇಗೌಡರ ಹೆಸರಲ್ಲಿ ರಾಜಕಾರಣ ಮಾಡ್ತಾರೋ ಗೊತ್ತಿಲ್ಲ. ಜೆಡಿಎಸ್‌ನವರು ಬಾಯಿ ಹಿಡಿತ ಇಲ್ಲದಂತೆ ಮಾತನಾಡುತ್ತಾರೆ. ಈ ಬಾರಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಪಡೆದಿದ್ದೇವೆ. ಸತ್ಯ ಒಪ್ಪಿಕೊಂಡು ಸುಮ್ಮನಿರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. 

ನಿಖಿಲ್‌ ಕುಮಾರಸ್ವಾಮಿ ಟೀಕೆಗೆ ಶನಿವಾರ ಮಾಧ್ಯಮದವರೊಂದಿಗೆ ಚಲುವರಾಯಸ್ವಾಮಿ ಅವರು ಪ್ರತಿಕ್ರಿಯಿಸಿ, ‘ನಾವು ವಾಮಾಮಾರ್ಗದ ಚುನಾವಣೆ ಮಾಡಲ್ಲ. ಹಾಸನದಲ್ಲಿ ಜೆಡಿಎಸ್‌ನವರು ಗೆದ್ದಿದ್ರು. ಹಾಗಾದರೆ ಅವರು ವಾಮಾಮಾರ್ಗದಲ್ಲಿ ಗೆದ್ರಾ? ಜೆಡಿಎಸ್ ಬಗ್ಗೆ ನಾನು ಟೀಕೆ ಮಾಡಲ್ಲ. ಇಂದಿರಾಗಾಂಧಿ, ಅಂಬೇಡ್ಕರ್‌ ಅವರಂಥ ಮಹಾನ್ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. ಸೋಲು– ಗೆಲುವನ್ನು ಒಪ್ಪಿಕೊಳ್ಳಬೇಕು. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ಯಾವ ಚುನಾವಣೆಯಲ್ಲೂ ನಾನು ತೊಡೆ ತಟ್ಟಿಲ್ಲ. ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು ಎಂದು ಪ್ರಶ್ನಿಸಿದರು. 

ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಭಾಷೆ ಮೇಲೆ ಆಕ್ರಮಣ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ನೆಲ, ಜಲ, ಭಾಷೆ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ತಿಲಾಂಜಲಿ ಹೇಳಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ಕೇಂದ್ರ ಸರ್ಕಾರ ಆ ರಾಜ್ಯಗಳನ್ನ ಕರೆದು ಮಾತನಾಡಬೇಕು. ನಮ್ಮ ಕನ್ನಡಿಗರನ್ನು ಕಾಪಾಡಲು ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ‌. ನಮ್ಮ ಭಾಷೆ, ಜನ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ’ ಎಂದರು. 

ADVERTISEMENT

‘ಜೆಡಿಎಸ್ ನವರು ಎಷ್ಟು ಜನ ಕಾರ್ಯಕರ್ತರಿಗೆ ಬೆಂಬಲ ಕೊಟ್ಟಿದ್ದಾರೆ? ಸ್ಥಳೀಯ ಚುನಾವಣೆಯಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದಾರೆ? ಪಾಪ ಪುಟ್ಟರಾಜು ಒಬ್ಬರೇ ಓಡಾಡುತ್ತಾರೆ. ಅವರ ಮಾತನ್ನು ಯಾರೂ ಕೇಳ್ತಿಲ್ಲ. ಪುಟ್ಟರಾಜು ನನ್ನ ಸ್ನೇಹಿತ, ರಾಜಕೀಯವಾಗಿ ವಿರೋಧ ಅಷ್ಟೆ. ಕಳೆದ ಬಾರಿ ರೈತ ಸಂಘದ ಜೊತೆ ನಿಂತು ಅವರ ಸೋಲಿಗೆ ನಾನು ಕಾರಣನಾಗಿದ್ದೇನೆ’ ಎಂದರು.  

‘ಎಚ್‌.ಡಿ. ಕುಮಾರಸ್ವಾಮಿ ಅವರು ಮೈಷುಗರ್ ಶಾಲೆಗೆ ₹25 ಕೋಟಿ ಕೊಡ್ತೇನೆ ಅಂದ್ರು. ಖಾಸಗೀಕರಣ ಬೇಡ ಅಂದ್ರು ಇಲ್ಲಿಯವರೆಗೂ ಹಣ ಕೊಟ್ಟಿಲ್ಲ. ನಡೆಸಿಕೊಡಲು ಸಾಧ್ಯವಾಗುವುದಿದ್ದರೆ ಮಾತ್ರ ಮಾತು ಕೊಡಬೇಕು. ರಾಜ್ಯ ಸರ್ಕಾರ ಕೂಡ ಬೇಕಾದಷ್ಟು ಸಿಎಸ್‌ಆರ್‌ ಫಂಡ್‌ ಕೊಟ್ಟಿದೆ. ಕುಮಾರಸ್ವಾಮಿ ಸೌಜನ್ಯದಿಂದ ಮಾತನಾಡುವುದನ್ನು ಕಲಿಯಲಿ. ಮೈಶುಗರ್ ಶಾಲೆಯ ಶಿಕ್ಷಕರಿಗೆ ಸಂಬಳ ಕೊಡಲು ಕುಮಾರಸ್ವಾಮಿ ಹಣ ಕೊಟ್ಟಿಲ್ಲ. ಶಿಕ್ಷಕರ ಹಿತದೃಷ್ಟಿಯಿಂದ ನಾವೇ ಸಂಬಳ ಕೊಡಲು ಕ್ರಮ ಕೈಗೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.