ರಾಜು
ಮದ್ದೂರು: ‘ಧರ್ಮಸ್ಥಳದ ಬಗ್ಗೆ ಮುಸುಕುಧಾರಿ ವ್ಯಕ್ತಿಯ ಹೇಳಿಕೆಗಳು ಸತ್ಯಕ್ಕೆ ದೂರ. ಸಾವಿರಾರು ಜನರಿಗೆ ಅನ್ನ ಹಾಕಿದ ಧಣಿಯವರ ಬಗ್ಗೆ ಈ ರೀತಿ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ’ ಎಂದು ಆತನ ಸ್ನೇಹಿತ ತಾಲ್ಲೂಕಿನ ವೈದ್ಯನಾಥಪುರದ ನಿವಾಸಿ ರಾಜು ತಿಳಿಸಿದ್ದಾನೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧ ನನ್ನನ್ನು ಎಸ್ಐಟಿ ಅಧಿಕಾರಿಗಳು ಅರ್ಧ ಗಂಟೆ ವಿಚಾರಣೆ ನಡೆಸಿದರು. ನನಗೆ ಗೊತ್ತಿರುವ ಮಾಹಿತಿಯನ್ನು ನೀಡಿದ್ದೇನೆ’ ಎಂದರು.
‘ನಾನು ಹತ್ತು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ 4 ವರ್ಷ ಕಸ ಗುಡಿಸುವ ಕೆಲಸ ಮಾಡಿಕೊಂಡಿದ್ದೆ. ಧರ್ಮಸ್ಥಳದ ಸ್ನಾನಘಟ್ಟ, ಬಾಹುಬಲಿ ಬೆಟ್ಟ, ದೇವಸ್ಥಾನದ ಬಳಿಯೂ ಕೆಲಸ ಮಾಡಿದ್ದೇನೆ. ಧಣಿಯವರು ಅನ್ನ ಹಾಕಿ ಕೈತುಂಬ ಸಂಬಳ ಕೊಡುತ್ತಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.
‘ಮಾಸ್ಕ್ ಮ್ಯಾನ್’ ಹಾಗೂ ನಾನು ಅಕ್ಕಪಕ್ಕದ ಮನೆಯವರಾಗಿದ್ದೆವು. ಆ ಸಂದರ್ಭದಲ್ಲಿ ಪುರುಷ ಮತ್ತು ಮಹಿಳೆಯ ಕೊಳೆತ ಶವಗಳನ್ನು ನೋಡಿದ್ದೆ. ಅವು ಮರದಲ್ಲಿ ನೇತಾಡುತ್ತಿದ್ದವು. ಮೃತದೇಹಗಳನ್ನು ಮರದಿಂದ ಕೆಳಗೆ ಇಳಿಸಿದ್ದೆ, ಆದರೆ ಹೂತು ಹಾಕಿರಲಿಲ್ಲ. ನಂತರ ಆಂಬುಲೆನ್ಸ್ ಬಂದು ತೆಗೆದುಕೊಂಡು ಹೋಯಿತು’ ಎಂದು ಮಾಹಿತಿ ನೀಡಿದ್ದಾರೆ.
‘ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ’ ಎಂಬ ಮುಸುಕುಧಾರಿಯ ಹೇಳಿಕೆ ಸತ್ಯಕ್ಕೆ ದೂರವಾದುದು. ಹಣದ ಆಸೆಗೋ ಏನೋ ಗೊತ್ತಿಲ್ಲ ಈ ರೀತಿ ಹೇಳಿಕೆ ನೀಡುತ್ತಿದ್ದಾನೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.