
ಮಂಡ್ಯ: ‘ಪಿಲಿಫೈನ್ಸ್ ಅಂತರರಾಷ್ಟ್ರೀಯ ರೈಸ್ ರೀಸರ್ಚ್ ಸೆಂಟರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು ರೋಗನಿರೋಧಕ ಭತ್ತದ ತಳಿಗಳನ್ನು ನಮ್ಮಲ್ಲಿ ಬೆಳೆಯಲಾಗುವುದು. ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪೀಠೋಪಕರಣಗಳ ಅಭಿವೃದ್ಧಿಗಾಗಿ ₹100 ಕೋಟಿಯನ್ನು ಮುಖ್ಯಮಂತ್ರಿಯವರು ಮಂಜೂರು ಮಾಡಿದ್ದಾರೆ’ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ಕೃಷಿ ವಿವಿ ವತಿಯಿಂದ 3 ದಿನ ಆಯೋಜಿಸಿರುವ ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿ, ‘ಪ್ರತಿ ವರ್ಷ ವಿ.ಸಿ ಫಾರಂನಲ್ಲಿ ಕೃಷಿ ಮೇಳ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಸದರಿ ವರ್ಷ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಮೊದಲ ಬೃಹತ್ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ಹೆಚ್ಚಿನ ಕೃಷಿ ತಳಿಗಳು, ತಂತ್ರಜ್ಞಾನ ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಪರಿಚಯಿಸಲಾಗಿದೆ’ ಎಂದರು.
ಬೆಂಗಳೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಯೋಜಿಸಲಾಗಿದ್ದ ಕೃಷಿ ಮೇಳದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿ ಯಶಸ್ವಿಗೊಳಿಸಿದರು. ಮುಂದಿನ ದಿನಗಳಲ್ಲಿ ಮಂಡ್ಯ ಕೃಷಿ ವಿವಿಯ ಕೃಷಿ ಮೇಳದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಭಾಗಿಯಾಗುತ್ತಾರೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಯುಜಿಸಿ ಮಾನ್ಯತೆ:
1939ರಲ್ಲಿ ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 630 ಎಕರೆ ಜಾಗದಲ್ಲಿ ಮಂಡ್ಯದಲ್ಲಿ ಕೃಷಿ ವಿಜ್ಞಾನಗಳ ಸಂಶೋಧನಾ ಕೇಂದ್ರವನ್ನು ತೆರೆದರು. ನಂತರ ರಾಜ್ಯದ 4 ಭಾಗಗಳಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ಮಂಡ್ಯ ಕೃಷಿ ವಿಶ್ವವಿದ್ಯಾಲಯವು ರಾಜ್ಯದ 5ನೇ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆಯಾದ ಮೊದಲ ವರ್ಷದಲ್ಲೇ ಯು.ಜಿ.ಸಿ ಮಾನ್ಯತೆ ಪಡೆದಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಆದ ಬೆಳೆ ನಾಶಕ್ಕೆ ಎನ್.ಡಿ.ಆರ್.ಎಫ್. ಪರಿಹಾರದ ಮೊತ್ತದ ಜೊತೆಗೆ ರಾಜ್ಯ ಸರ್ಕಾರ ಪರಿಹಾರವನ್ನು ನೀಡಿತು. ರಾಜ್ಯ ಕಬ್ಬು ಬೆಳೆಗಾರರ ಆರ್ಥಿಕ ಅಭಿವೃದ್ಧಿಗಾಗಿ ಟನ್ ಕಬ್ಬಿಗೆ ₹50 ಅನ್ನು ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ಬಡವರು, ರೈತರು, ಶ್ರಮಿಕರು, ಮಹಿಳೆಯರು ಮತ್ತು ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಅಭಿವೃದ್ಧಿಪಡಿಸಿದ ಐದು ಕೃಷಿ ತಳಿಗಳನ್ನು ಮತ್ತು 9 ತಾಂತ್ರಿಕತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೃಷಿ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು.
ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ, ಮೈಷುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ ಹರಿಣಿ ಕುಮಾರ್, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪಾಲ್ಗೊಂಡಿದ್ದರು.
ಮೈಷುಗರ್ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ₹50 ಕೋಟಿ ನೀಡಿದೆ. ವಿದ್ಯುತ್ ಬಿಲ್ ಮನ್ನಾ ಮಾಡಿದೆ. ಹೊಸ ಬಾಯ್ಲಿಂಗ್ ಹೌಸ್ ನೀಡಲಾಗುವುದುಸಿದ್ದರಾಮಯ್ಯ ಮುಖ್ಯಮಂತ್ರಿ
ಕೃಷಿ ಪತ್ತಿನ ಸಹಕಾರ ಸಂಘ ಬಲಪಡಿಸಿ: ದರ್ಶನ್ ‘ಕೃಷಿ ಪತ್ತಿನ ಸಹಕಾರ ಸಂಘಗಳು ಸ್ಥಳೀಯ ಆರ್ಥಿಕತೆ ಬಲಪಡಿಸುವ ಉತ್ತಮ ಮಾರ್ಗ. ಅವುಗಳು ದುರಾಡಳಿತದಿಂದ ಹದಗೆಟ್ಟಿವೆ. ಅವುಗಳನ್ನು ಸರಿಪಡಿಸಿ ಸ್ಥಳೀಯ ಆರ್ಥಿಕತೆ ಉತ್ತಮಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಸಾಲ ಗೊಬ್ಬರ ಅಕ್ಕಿ ವಿತರಣೆಗೆ ಸೀಮಿತವಾಗಿವೆ. ಆದರೆ ಇವು ರೈತರು ಹಾಗೂ ಗ್ರಾಮೀಣ ಸಮುದಾಯಗಳನ್ನು ಮೇಲೆತ್ತಲು ಉತ್ತಮವಾದ ಸಂಸ್ಥೆಗಳು. ಇವುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.