ADVERTISEMENT

ಸೇವಾ ಮನೋಭಾವ ಮುಖ್ಯ: ಸ್ವಾಮೀಜಿ

ಆದಿ ಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 4:09 IST
Last Updated 19 ಮಾರ್ಚ್ 2021, 4:09 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಗಣ್ಯರು ‘ಏಮ್ಸ್ ಕಲಾಕೃತಿ’ ಪುಸ್ತಕ ಬಿಡುಗಡೆ ಮಾಡಿದರು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಗಣ್ಯರು ‘ಏಮ್ಸ್ ಕಲಾಕೃತಿ’ ಪುಸ್ತಕ ಬಿಡುಗಡೆ ಮಾಡಿದರು   

ನಾಗಮಂಗಲ: ವೈದ್ಯರಾಗುವವರಿಗೆ ಪ್ರತಿಭೆ, ತಾಳ್ಮೆ ಜೊತೆಗೆ ಸೇವಾ‌ ಮನೋಭಾವ ಮುಖ್ಯವಾಗಿರುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಿ.ಜಿ.ನಗರದ ಆದಿ ಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದುದ್ದಕ್ಕೂ ಕಲಿಕೆಯನ್ನು ಮುಂದುವರಿಸುವವರು ನಿಜವಾದ ವಿದ್ಯಾರ್ಥಿ ಗಳೆನಿಸಿಕೊಳ್ಳುತ್ತಾರೆ. ಬಾಲಗಂಗಾಧರನಾಥ ಶ್ರೀಗಳು ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕಾಲೇಜನ್ನು ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಕಟ್ಟಿದ್ದಾರೆ. ವಿದ್ಯಾರ್ಥಿಗಳು ಕೇವಲ ಪದವಿ, ರ‍್ಯಾಂಕ್‌ ಪಡೆದರೆ ಸಾಲದು; ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಪದವಿಗೆ ನಿಜವಾದ ಅರ್ಥ ಬರುತ್ತದೆ ಎಂದರು.

ADVERTISEMENT

ವೈದ್ಯರಾದವರು ದೇಹಕ್ಕೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ನೀಡುವ ಜತೆಗೆ, ಮನಸ್ಸನ್ನು ಅರಿತು ಚಿಕಿತ್ಸೆ ನೀಡಬೇಕು. ಏಳಿಗೆಗೆ ಶ್ರಮಿಸಿದ ತಂದೆ–ತಾಯಿಯನ್ನು ಗೌರವಿಸಬೇಕು ಎಂದರು.

ಪದವಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ತಿಮ್ಮಪ್ಪ ಹೆಗ್ಡೆ, ವಿದ್ಯಾರ್ಥಿಗಳು ಜೀವನದಲ್ಲಿ ತಂದೆತಾಯಿ, ಗುರುಗಳು ಮತ್ತು ಸಮಾಜದ ಋಣವನ್ನು ತೀರಿಸುವುದು ಬಹಳ ಮುಖ್ಯ. ಪದವಿ ಪಡೆಯುವ ಮೂಲಕ ಜೀವನದ ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ಮುಂದಿನ ವೃತ್ತಿ ಜೀವನದಲ್ಲಿ ನೀವು ಎಲ್ಲರಿಂದ ಬರುವ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದು ಮುಂದುವರಿದಾಗ ಉತ್ತಮ ವೈದ್ಯರಾಗಲು ಸಾಧ್ಯ ಎಂದರು.

ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣ, ಆಯುಷ್ ಸೇವೆಗಳ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಸಮಾಜವು ವೈದ್ಯರಿಂದ ನಿಜವಾದ ಸೇವೆಯನ್ನು ಬಯಸುತ್ತದೆ. ಆರೋಗ್ಯಯುತ ಸಮಾಜ ಕಟ್ಟಲು ಶ್ರಮಿಸಿ. ಹೊಸ ಚಿಂತನೆ, ಆವಿಷ್ಕಾರ, ಸಂಶೋಧನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಲಿ. ಜೊತೆಗೆ ಸೇವೆ ಗ್ರಾಮೀಣ ಪ್ರದೇಶಕ್ಕೆ ಅತ್ಯಂತ ಪ್ರಮುಖವಾಗಿದೆ ಎಂದರು.

ವೈದ್ಯಕೀಯ ಶಿಕ್ಷಣದಲ್ಲಿ ರ‍್ಯಾಂಕ್‌ ಪಡೆದ ಮತ್ತು ಹೆಚ್ಚು ಅಂಕ ಪಡೆದ ಅಂತಿಮ ವರ್ಷದ ಸಾಧಕರಿಗೆ ಪ್ರಶಸ್ತಿ ಮತ್ತು ಪದಕ ಪ್ರದಾನ ಮಾಡಲಾಯಿತು.

ಆದಿಚುಂಚನಗಿರಿ ಕಾಲೇಜಿನಲ್ಲಿ ಪದವಿ ಪಡೆದ 161 ವಿದ್ಯಾರ್ಥಿಗಳಿಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರಮಾಣ ಪತ್ರ, ಸ್ಮರಣಿಕೆ ನೀಡಿದರು.

ಏಮ್ಸ್ ಕಲಾಕೃತಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಡಾ.ಸುನೀಲ್ ಬಾಬು ಮಲ್ಲೇಶ ಅವರು‌ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೋವಿಡ್ ವಾರಿಯರ್‌ಗಳು ಮತ್ತು ಪೋಷಕರ ಅರ್ಪಣಾ ಮನೋಭಾವ ಕುರಿತ ವಿಡಿಯೊ ಪ್ರದರ್ಶಿಸಲಾಯಿತು.

ಆದಿಚುಂಚನಗಿರಿ ವಿವಿಯ ಕುಲಪತಿ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಉಪಕುಲಪತಿ ಡಾ.ಕೆ.ಭೈರಪ್ಪ, ರಿಜಿಸ್ಟ್ರಾರ್‌ ಡಾ.ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ ಡಿ.ದೇವರಾಜ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಡಾ.ಬಿ.ಜಿ.ಸಾಗರ್ ಮತ್ತು ಆದಿಚುಂಚನಗಿರಿ ಸಾಂಸ್ಥಿಕ‌ ಕಾಲೇಜುಗಳ ಪ್ರಾಂಶುಪಾಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.