ADVERTISEMENT

ಶ್ರೀರಂಗಪಟ್ಟಣ: ದೊಡ್ಡಮ್ಮ– ಚಿಕ್ಕಮ್ಮ ದೇವರ ಉತ್ಸವ

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ: ಬಾಯಿಬೀಗ ಚುಚ್ಚಿಸಿಕೊಂಡು ಹರಕೆ ಸಲ್ಲಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 3:11 IST
Last Updated 7 ಏಪ್ರಿಲ್ 2021, 3:11 IST
ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿಯಲ್ಲಿ ಮಂಗಳವಾರ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರ ಉತ್ಸವ ನಡೆಯಿತು (ಎಡಚಿತ್ರ). ಹರಕೆ ಹೊತ್ತವರು ಬಾಯಿಬೀಗ ಚುಚ್ಚಿಸಿಕೊಂಡರು
ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿಯಲ್ಲಿ ಮಂಗಳವಾರ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರ ಉತ್ಸವ ನಡೆಯಿತು (ಎಡಚಿತ್ರ). ಹರಕೆ ಹೊತ್ತವರು ಬಾಯಿಬೀಗ ಚುಚ್ಚಿಸಿಕೊಂಡರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯಲ್ಲಿ ಮಂಗಳವಾರ ದೊಡ್ಡಮ್ಮ– ಚಿಕ್ಕಮ್ಮನ ಹಬ್ಬದ ನಿಮಿತ್ತ ದೇವರ ಉತ್ಸವ ಮಂಗಳವಾರ ಸಡಗರ, ಸಂಭ್ರಮದಿಂದ ನಡೆಯಿತು.

ಗ್ರಾಮಕ್ಕೆ ಅನತಿ ದೂರದ ವಿರಿಜಾ ನಾಲೆಯ ಬಳಿ ದೇವರನ್ನು ಪ್ರತಿಷ್ಠಾಪಿಸಿ, ಹೂ ಹೊಂಬಾಳೆಗಳಿಂದ ಸಿಂಗರಿಸಿ ಅಗ್ರ ಪೂಜೆ ಸಲ್ಲಿಸಲಾಯಿತು. ದಾಸಪ್ಪ ಮತ್ತು ಊರಿನ ವ್ಯಕ್ತಿಯೊಬ್ಬರು ದೇವರನ್ನು ಅವಾಹನೆ ಮಾಡಿದರು. ಮಧ್ಯಾಹ್ನದ ವೇಳೆಗೆ ಉತ್ಸವಕ್ಕೆ ಚಾಲನೆ ಸಿಕ್ಕಿತು. ಊರಿನ ಮುಖ್ಯಬೀದಿ, ಈಶ್ವರನ ಗುಡಿ ಬೀದಿ, ಗರಡಿ ರಸ್ತೆ, ಶ್ರೀರಾಮ ಮಂದಿರ ರಸ್ತೆ ಇತರೆಡೆ ಉತ್ಸವ ಜರುಗಿತು. ಉತ್ಸವ ಸಾಗಿದ ದಾರಿಯ ಉದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಅಲ್ಲಲ್ಲಿ ಈಡುಗಾಯಿ ಸೇವೆ ನಡೆದವು.

ಕೊಂಬು, ಕಹಳೆ ಹಾಗೂ ತಮಟೆಗಳು ಉತ್ಸವಕ್ಕೆ ಮೆರಗು ನೀಡಿದವು. ಮಹಿಳೆಯರು ತಂಬಿಟ್ಟಿನ ಆರತಿ ಹಿಡಿದು ಹೆಜ್ಜೆ ಹಾಕಿದರು. ಹರಕೆ ಹೊತ್ತವರು ಬಾಯಿ ಬೀಗ ಚುಚ್ಚಿಸಿಕೊಂಡು ಹರಕೆ ಸಲ್ಲಿಸಿದರು.

ADVERTISEMENT

ಯಜಮಾನ್‌ ಶ್ರೀಧರ್‌ ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನಡೆದವು. ನಂತರ ದೇವರನ್ನು ಊರ ಹೊರಗಿನ ಬಯಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಎರಡೂ ದೇವರಿಗೆ ಜನರು ರಕ್ತಗೂಳು ಅರ್ಪಿಸಿದರು. ಬಳಿಕ ನೆರೆದಿದ್ದವರಿಗೆ ಪ್ರಸಾದ ವಿತರಣೆ
ನಡೆಯಿತು.

ಸಂಜೆ ವೇಳೆಗೆ ಹೊಸಹಳ್ಳಿ ಮಾರ್ಗದಲ್ಲಿ ದೇವರನ್ನು ವಿಸರ್ಜಿಸಲಾಯಿತು. ದೊಡ್ಡಮ್ಮ– ಚಿಕ್ಕಮ್ಮನ ಉತ್ಸವದಲ್ಲಿ ಸ್ಥಳೀಯರು ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ಜನರು ಹಾಗೂ ನೆಂಟರಿಷ್ಟರು ಕೂಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.