ADVERTISEMENT

ತೋಟಗಾರಿಕೆ ಇಲಾಖೆ ಸ್ಥಳ ಹಸ್ತಾಂತರ ಬೇಡ: ಕಾರ್ಯಕರ್ತರಿಂದ ಪ್ರತಿಭಟನೆ

ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 16:22 IST
Last Updated 8 ಏಪ್ರಿಲ್ 2022, 16:22 IST
ತೋಟಗಾರಿಕೆ ಇಲಾಖೆ ಜಾಗವನ್ನು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ತೋಟಗಾರಿಕೆ ಇಲಾಖೆ ಜಾಗವನ್ನು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ:ಜಿಲ್ಲೆಯ ರೈತರ ಜೀವಾಳ ವಾಗಿರುವ ತೋಟಗಾರಿಕೆ ಇಲಾಖೆಯ ಜಾಗವನ್ನು ಯಾವುದೇ ಕಾರಣಕ್ಕೂ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸಬಾರದು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಜಯಕರ್ನಾಟಕ ಸಂಘಟನೆ, ಕದಂಬ ಸೈನ್ಯ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆಗೆ ಸೇರಿದ 2.30 ಗುಂಟೆ ಜಾಗವನ್ನು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸುವ ಕಾರ್ಯವನ್ನು ಸರ್ಕಾರ ಕೂಡಲೇ ಕೈಬಿಡಬೇಕು.ಜಿಲ್ಲೆಯ ವ್ಯಾಪ್ತಿಯಲ್ಲಿ 80 ಸಾವಿರ ಹೆಕ್ಟೇರ್‌ಗೂ ಹೆಚ್ಚು ಜಮೀನಿನಲ್ಲಿ ಸಾವಿರಾರು ರೈತರು ಇಲಾಖೆಯ ಮಾರ್ಗದರ್ಶನದಲ್ಲಿ ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದಾರೆ. ಜಿಲ್ಲಾ ತೋಟಗಾರಿಕಾ ಇಲಾಖೆ ಆವರಣದಲ್ಲಿ 200ಕ್ಕೂ ಹೆಚ್ಚು ಸಪೋಟ, ಮಾವು, ತೆಂಗು ಮತ್ತು ವಿವಿಧ ಬಹು ವಾರ್ಷಿಕ ಹಣ್ಣುಗಳನ್ನು ಬಿಡುವ 60 ವರ್ಷ ಹಿಂದಿನ ಮರಗಳಿವೆ. ಇವುಗಳ ನಾಶಕ್ಕೆ ಸರಿಯಲ್ಲ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತೋಟದಲ್ಲಿ ಬೆಳೆದಿರುವ ಹಣ್ಣಿನ ಮರಗಳಿಂದಲೇ ಇಲಾಖೆಗೆ ಆದಾಯ ಬರುತ್ತಿದೆ. ಪ್ರತಿ ವರ್ಷ ತೆಂಗಿನ ಮರದ ಕಪ್ಪುತಲೆ ಹುಳುವಿನ ನಿಯಂತ್ರಣಕ್ಕೆ ₹ 1 ಲಕ್ಷ ಪರೋಪಕಾರಿ ಜೀವಿಗಳನ್ನು ತಯಾರಿಸುವ ಪ್ರಯೋಗಾಲಯವೂ ಇದಾಗಿದೆ. ಕೃಷ್ಣರಾಜ ಒಡೆಯರ್ ಅವರ ಕಲಾ ವೇದಿಕೆಯಿದ್ದು, ಪ್ರತಿ ವರ್ಷ ಫಲ-ಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಮಹಾಶಿವರಾತ್ರಿ ಸಮಯದಲ್ಲಿ ನಡೆ ಯುವ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಲು ಸಾವಿರಾರು ಭಕ್ತರು ಬರುತ್ತಾರೆ. ಈ ಜಾಗದಲ್ಲಿ ತೋಟಗಾರಿಕೆ ಪಿತಾಮಹ ಎಂ.ಎಚ್.ಮರೀಗೌಡರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ. ಇಂಥ ಜಾಗವನ್ನು ಹಸ್ತಾಂತರಿಸುವುದು ಅವೈಜ್ಞಾನಿಕ ನಡೆ ಎಂದರು.

ತೋಟಗಾರಿಕೆ ಇಲಾಖೆಯ ಜಾಗವನ್ನು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರ ಮಾಡುತ್ತಿರು ವುದು ಸರಿಯಲ್ಲ. ಕಟ್ಟಡ ಕಟ್ಟಲು 2 ಎಕರೆ 30 ಗುಂಟೆ ಜಮೀನನ್ನು ನ್ಯಾಯಾಲಯದ ಸಂಕಿರ್ಣಕ್ಕೆ ನೀಡಿ ದರೆ ಜಿಲ್ಲೆಯಾದ್ಯಂತ ಜನರಲ್ಲಿ ಅರಿವು ಮೂಡಿಸಿ ಹೋರಾಟ ರೂಪಿಸಲಾ ಗುವುದು ಎಂದು ಎಚ್ಚರಿಕೆ ನೀಡಿದರು.

ವಿವಿಧ ಸಂಘಟನೆಗಳ ಮುಖಂಡ ರಾದ ಹನುಮಂತು ಕೋಣನಹಳ್ಳಿ, ಎಂ.ಚಾಮರಾಜ್‌, ಎಚ್‌.ಬಿ.ಹರಿ ಕುಮಾರ್, ಕೆ.ವಿ.ನಾಗರಾಜು, ಹನಿಯಂಬಾಡಿ ನಾಗರಾಜು, ಜಯ ಕರ್ನಾಟಕ ಯೋಗಣ್ಣ, ಶಂಕರೇಗೌಡ, ಚಿದಂಬರ್, ತೂಬಿನಕೆರೆ ಲಿಂಗರಾಜು, ಬೇಕ್ರಿ ರಮೇಶ್, ಕುಮಾರ್‌, ನಾಗರತ್ನ, ಕಿಟ್ಟಣ್ಣ, ಬೆಂಜಮಿನ್‌ಥಾಮಸ್‌, ಜಯಶೀಲ, ಗೋವಿಂದರಾಜು ಇದ್ದರು.

ಆದೇಶ ಪ್ರತಿಗೆ ಬೆಂಕಿ

ಮಂಡ್ಯ: ಪ್ರತಿನರೇಗಾ ಯೋಜನೆಯಡಿ ದಿನಕ್ಕೆ ಎರಡು ಬಾರಿ ಕೂಲಿಕಾರರ ಹಾಜರಾತಿ ಮತ್ತು ಛಾಯಾಚಿತ್ರವನ್ನು ಆನ್‌ಲೈನ್‌ ಮೂಲಕ ಪಡೆಯುವುದನ್ನು ವಿರೋಧಿಸಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಆದೇಶದ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಹಳೆಯ ಹಾಜರಾತಿಯನ್ನೇ ಮುಂದುವ ರಿಸಬೇಕು. ಕೇಂದ್ರ ಸರ್ಕಾರದ ಆದೇಶ ಬರುವವರೆಗೂ ಈ ಪದ್ಧತಿಯನ್ನೇ ಮುಂದುವರಿಸಿ ಕೂಲಿಕಾರ್ಮಿಕರಿಗೆ ನೆರವಾಗಬೇಕು. ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನೀಡುತ್ತಿಲ್ಲ. ಇದು ಸರಿಯಲ್ಲ. ತಕ್ಷಣ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಸಿ.ಕುಮಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಶಿವಮಲ್ಲಯ್ಯ, ಸರೋಜಮ್ಮ, ಅಮಾಸಯ್ಯ, ಗೋಪಾಲ್‌, ಅರುಣ್, ಜೆ.ರಾಮಯ್ಯ ಭಾಗವಹಿಸಿದ್ದರು.

‘ಮನವಿ ರವಾನೆ’

ಮಂಡ್ಯ: ‘ನಿಮ್ಮ ಬೇಡಿಕೆಗಳ ಮನವಿ ಯನ್ನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿ.ಪಂ.ಸಿಇಒ ದಿವ್ಯಾಪ್ರಭು ಹೇಳಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಯ ಎರಡನೇ ದಿನ ಧರಣಿ ಸ್ಥಳದಲ್ಲಿ ಮನವಿ ಆಲಿಸಿ ಅವರು ಮಾತನಾಡಿದರು.

ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.