ADVERTISEMENT

ಪಾಂಡವಪುರ: ಸೌಕರ್ಯ ವಂಚಿತ ಭವನದಲ್ಲಿ ವಸತಿ ಶಾಲೆ!

ಪಾಂಡವಪುರ: ₹22 ಕೋಟಿ ಬಿಡುಗಡೆಯಾಗಿ ವರ್ಷ ಕಳೆದರೂ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿಲ್ಲ

ಹಾರೋಹಳ್ಳಿ ಪ್ರಕಾಶ್‌
Published 23 ಫೆಬ್ರುವರಿ 2026, 8:25 IST
Last Updated 23 ಫೆಬ್ರುವರಿ 2026, 8:25 IST
ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆ 9 ವರ್ಷಗಳಿಂದ ಸಮುದಾಯ ಭವನದಲ್ಲೇ ನಡೆಯುತ್ತಿದೆ
ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆ 9 ವರ್ಷಗಳಿಂದ ಸಮುದಾಯ ಭವನದಲ್ಲೇ ನಡೆಯುತ್ತಿದೆ   

ಪಾಂಡವಪುರ: ಮೂಲಸೌಕರ್ಯ ವಂಚಿತ ಖಾಸಗಿ ಸಮುದಾಯದ ಭವನದಲ್ಲೇ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆ ನಡೆಯುತ್ತಿದೆ. ನೂತನ ಕಟ್ಟಡಕ್ಕೆ ಸರ್ಕಾರ ₹22 ಕೋಟಿ ಬಿಡುಗಡೆ ಮಾಡಿ ವರ್ಷ ಕಳೆದರೂ, ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ

ತಾಲ್ಲೂಕಿನ ಮಹದೇಶ್ವರಪುರ ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಇರುವ ಈ ವಸತಿ ಶಾಲೆಯು ಕಳೆದ 9 ವರ್ಷಗಳಿಂದ ಮಹದೇಶ್ವರ ಸೇವಾ ಸಮಿತಿಗೆ ಸೇರಿದ ಸಮುದಾಯ ಭವನದಲ್ಲಿಯೇ ನಡೆಯುತ್ತಿದೆ.

2017ರಲ್ಲಿ 50 ಹೆಣ್ಣುಮಕ್ಕಳಿಂದ ಈ ವಸತಿ ಶಾಲೆ ಪ್ರಾರಂಭಗೊಂಡಿತು. 6ನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆಯುತ್ತಿರುವ ಈ ವಸತಿ ಶಾಲೆಯಲ್ಲಿ ಈಗ 250 ಹೆಣ್ಣುಮಕ್ಕಳಿದ್ದಾರೆ. ಪಾಠ, ಊಟ, ವಸತಿಗೆ ಪ್ರತ್ಯೇಕ ಕೊಠಡಿಗಳಿಲ್ಲದೆ, ಸಮುದಾಯ ಭವನದ ಹಾಲ್‌ನಲ್ಲಿಯೇ ಎಲ್ಲ ಚಟುವಟಿಕೆಗಳು ನಡೆಯಬೇಕಿದೆ. ಜತೆಗೆ ಸಮರ್ಪಕ ಗಾಳಿ– ಬೆಳಕಿಲ್ಲದೆ ಉಸಿರುಗಟ್ಟಿದ ವಾತಾವರಣದಲ್ಲಿಯೇ ಮಕ್ಕಳು ದಿನದೂಡುವಂತಾಗಿದೆ.

ADVERTISEMENT

ತಿಂಗಳಿಗೆ ₹55 ಸಾವಿರ ಬಾಡಿಗೆ ಪಡೆಯುತ್ತಿರುವ ಸೇವಾ ಸಮಿತಿಯವರು ಬಾಡಿಗೆ ಕರಾರು ಮಾಡಿಕೊಂಡಾಗ, ವಸತಿ ಶಾಲೆಗೆ ಮೂಲಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಒಂದಿಷ್ಟು ಸೌಲಭ್ಯಗಳನ್ನು ಒದಗಿಸಿ ಕೈತೊಳೆದು ಕೊಂಡಿದ್ದಾರೆ. ಈ ಸಮುದಾಯ ಭವನಕ್ಕೆ ಸರ್ಕಾರದ ಕೆ.ಆರ್.ಡಿ.ಎಲ್. ವತಿಯಿಂದ ₹5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಡಲಾಗಿದೆ.

ಕಟ್ಟಡಕ್ಕೆ ₹22 ಕೋಟಿ ಮಂಜೂರು: ಡಾ. ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಕಳೆದ 8 ವರ್ಷಗಳ ಹಿಂದೆಯೇ ಮಹದೇಶ್ವರ ಗ್ರಾಮದ ಬಳಿ ಸರ್ಕಾರವು 5 ಎಕರೆ ಜಾಗ ಮಂಜೂರು ಮಾಡಿತ್ತು. ಬಳಿಕ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೂತನ ಕಟ್ಟಡ ನಿರ್ಮಾಣಕ್ಕೆ 10ನೇ ಮಾರ್ಚ್‌ 2025 ರಂದು ₹22 ಕೋಟಿ ಬಿಡುಗಡೆ ಮಾಡಿ ಆಡಳಿತ್ಮಾಕ ಮಂಜೂರಾತಿ ನೀಡಿದ್ದಾರೆ. 12 ತಿಂಗಳೊಳಗಾಗಿ ಕಟ್ಟಡ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಕಟ್ಟಡವನ್ನು ಇಲಾಖೆ ವಶಕ್ಕೆ ನೀಡತಕ್ಕದ್ದು ಎಂದು ಆದೇಶ ನೀಡಿದೆ. ಆದರೆ, ಹಣ ಬಿಡುಗಡೆಯಾಗಿ 11 ತಿಂಗಳು ಕಳೆದರೂ ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ಪ್ರಾರಂಭಿಸಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ದೂರಿದರು. 

ವಸತಿ ಶಾಲೆ ಸಮುದಾಯ ಭವನದ ಹೊರನೋಟ

ವಸತಿ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಟ್ಟಡ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು

– ಕೆ.ಶ್ರೀನಿವಾಸ್ ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಮಂಡ್ಯ

ಅಗತ್ಯ ಸೌಲಭ್ಯಗಳಿಗೆ ಕ್ರೈಸ್ ವರದಿ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಸಲಹೆಗಾರ ಎಸ್.ತುಕರಾಮ್ ಅವರು ‘ರಾಜ್ಯದ ಹಲವು ವಸತಿ ಶಾಲೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಮಕ್ಕಳ ಕಲಿಕಾ ವಾತಾವರಣಕ್ಕೆ ತೊಂದರೆಯಾಗಿದೆ. ಆದ್ದರಿಂದ ತುರ್ತಾಗಿ ಸೂಕ್ತ ಸ್ಥಳಗಳಿಗೆ ಬದಲಾಯಿಸುವಂತೆ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ವರದಿ ನೀಡಿದ್ದಾರೆ. ಆದರೂ ಮಹದೇಶ್ವರಪುರ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆಯ ಮಕ್ಕಳು ನಿತ್ಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.