ADVERTISEMENT

ಶಾಶ್ವತ ಕುಡಿಯುವ ನೀರಿನ ಯೋಜನೆ ಸಾಕಾರ

ನನಸಾದ ದಶಕದ ಕನಸು, ₹ 690 ಕೋಟಿಯ ಕಾಮಗಾರಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 14:12 IST
Last Updated 27 ಮೇ 2021, 14:12 IST
ನಾಗಮಂಗಲ ಸಮೀಪದ ಹಳ್ಳಿಯೊಂದರಲ್ಲಿ ಟ್ಯಾಂಕರ್‌ ಮೂಲಕ ನೀರು ಪಡೆಯುತ್ತಿರುವ ಜನರು (ಸಂಗ್ರಹ ಚಿತ್ರ)
ನಾಗಮಂಗಲ ಸಮೀಪದ ಹಳ್ಳಿಯೊಂದರಲ್ಲಿ ಟ್ಯಾಂಕರ್‌ ಮೂಲಕ ನೀರು ಪಡೆಯುತ್ತಿರುವ ಜನರು (ಸಂಗ್ರಹ ಚಿತ್ರ)   

ಮಂಡ್ಯ: ಜಿಲ್ಲೆಯ 3 ತಾಲ್ಲೂಕುಗಳ 791 ಗ್ರಾಮಗಳು ಮತ್ತು ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಹಾಗೂ ನಬಾರ್ಡ್ ನೆರವಿನ ಯೋಜನೆಗೆ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ದಶಕಗಳ ಕನಸು ಕೈಗೂಡಿದ್ದು ಶೀಘ್ರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಳ್ಳಲಿದೆ.

₹ 690.36 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಮೂರು ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕೆಆrffಎಸ್ ಜಲಾಶಯದಿಂದ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು 2023ರೊಳಗೆ ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ ತಾಲ್ಲೂಕುಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆಯಾಗಲಿದೆ.

ಮೂರೂ ತಾಲ್ಲೂಕುಗಳ ಹಳ್ಳಿಗಳಿಗೆ ಪ್ರತಿ ಮನೆಮನೆಗೆ ನಲ್ಲಿ ನೀರು ಪೂರೈಕೆ, ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರ, ಕೆ.ಆರ್‌.ಪೇಟೆ ತಾಲ್ಲೂಕಿನ 5 ವಸತಿ ಶಾಲೆಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಜಾರಿ ಸನ್ನಿಹಿತವಾಗಿದೆ.

ADVERTISEMENT

ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ 55 ಎಲ್‍ಪಿಸಿಡಿ ( ಲೀಟರ್‌ ಪರ್‌ ಕ್ಯಾಪಿಟ ಪರ್‌ ಡೇ), ಪಟ್ಟಣ ಪ್ರದೇಶಕ್ಕೆ 135 ಎಲ್‍ಪಿಸಿಡಿ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಮೂರು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. 30 ತಿಂಗಳೊಳಗಾಗಿ ಯೋಜನೆಯನ್ನು ಪೂರ್ಣಗೊಳಿಸಿ, ಯೋಜನೆಯ ರೂಪು ರೇಷೆಯಂತೆ ಯೋಜನೆ ಜಾರಿಯ ಉದ್ದೇಶ ಹೊಂದಲಾಗಿದೆ.

ಕೆ.ಆರ್.ಪೇಟೆ ತಾಲೂಕಿನ 310 ಹಳ್ಳಿಗಳು, ನಾಗಮಂಗಲ ತಾಲೂಕಿನ 391 ಹಳ್ಳಿಗಳು, ಬೆಳ್ಳೂರು ಪಟ್ಟಣ ಪಂಚಾಯತಿ, ಪಾಂಡವಪುರ ತಾಲೂಕಿನ 96 ಹಳ್ಳಿಗಳು ಸೇರಿ ಒಟ್ಟು 791 ಕ್ಕು ಹೆಚ್ಚು ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ತಲುಪಲಿದೆ.

ಈ ಯೋಜನೆಯಿಂದ ಒಟ್ಟು 4,16,568 ಜನರಿಗೆ ಈ ಯೋಜನೆ ಲಾಭವಾgಲಿದೆ. ಕೆ.ಆರ್. ಪೇಟೆ ತಾಲ್ಲೂಕಿನ 1,95,112 ಜನರಿಗೆ, ನಾಗಮಂಗಲ ತಾಲ್ಲೂಕಿನ 1,31,221 ಜನರಿಗೆ ಹಾಗೂ ಪಾಂಡವಪುರದ 90,235 ಜನರಿಗೆ ಕುಡಿಯುವ ನೀರು ದೊರೆಯಲಿದೆ.

ಸಂತಸ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ: ‘ಅಭಿವೃದ್ಧಿಯ ವಿಚಾರದಲ್ಲಿ ನಾನು ಯಾವುದೇ ರಾಜಕಾರಣ ಮಾಡುವುದಿಲ್ಲ, ಚುನಾವಣೆಯಲ್ಲಿ ಮಾತ್ರ ರಾಜಕೀಯ. ಪಕ್ಷ ಭೇದ ಮರೆತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದೇ ನನ್ನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಸಾಕಷ್ಟು ಶ್ರಮಿಸಿದ್ದೇನೆ. ಯೋಜನೆಗೆ ಅನುಮೋದನೆ ದೊರೆತಿರುವುದು ಸಂತಸ ತಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

‘ಈ ಯೋಜನೆಗೆ ಮಂಜೂರಾತಿ ದೊರಕಿಸಿಕೊಡಲು ಸಹಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಚಿವ ಸಂಪುಟದ ಸಹುದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಯೋಜನೆ ಅಂಕಿ ಅಂಶ

ಗ್ರಾಮೀಣ ವಸತಿ 797
ಪಟ್ಟಣ 04
ಜನಸಂಖ್ಯೆ 4.93 ಲಕ್ಷ
ಯೋಜನಾ ವೆಚ್ಚ ₹ 690.36 ಕೋಟಿ
ಕೇಂದ್ರದ ಪಾಲು ₹ 230.23 ಕೋಟಿ
ನಬಾರ್ಡ್‌ ಸಹಾಯ ₹ 297.79
ಯೋಜನಾ ಅವಧಿ 30 ತಿಂಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.