ADVERTISEMENT

ನಸುಕಿನಿಂದ ತಡರಾತ್ರಿವರೆಗೂ ಮದ್ಯ ಮಾರಾಟ

ಕಳ್ಳದಾರಿ, ಕಿಂಡಿ ಮೂಲಕ ವೈನ್‌ಶಾಪ್‌ಗಳ ವಹಿವಾಟು, ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಲಭ್ಯ

ಎಂ.ಎನ್.ಯೋಗೇಶ್‌
Published 18 ಆಗಸ್ಟ್ 2019, 20:00 IST
Last Updated 18 ಆಗಸ್ಟ್ 2019, 20:00 IST
ಬೆಳ್ಳಂಬೆಳಿಗ್ಗೆ ವೈನ್‌ಶಾಪ್‌ವೊಂದರ ಕಳ್ಳದಾರಿಯಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದು
ಬೆಳ್ಳಂಬೆಳಿಗ್ಗೆ ವೈನ್‌ಶಾಪ್‌ವೊಂದರ ಕಳ್ಳದಾರಿಯಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದು   

ಮಂಡ್ಯ: ನಗರದ ವಿವಿಧ ವೈನ್‌ಶಾಪ್‌, ಬಾರ್‌ಗಳಲ್ಲಿ ನಸುಕಿನ 5 ಗಂಟೆಯಿಂದಲೇ ಮದ್ಯ ಮಾರಾಟ ಆರಂಭಗೊಳ್ಳುತ್ತಿದೆ. ಅಂಗಡಿಗಳಲ್ಲಿ ಕಳ್ಳದಾರಿ, ಕಳ್ಳಕಿಂಡಿ ಮಾಡಿಕೊಂಡಿರುವ ಮಾರಾಟಗಾರರು ತಡರಾತ್ರಿ 1 ಗಂಟೆವರೆಗೂ ವಹಿವಾಟು ನಡೆಸುತ್ತಿದ್ದಾರೆ.

ಮದ್ಯದಂಗಡಿಗಳ ವಹಿವಾಟಿಗೆ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಸಮಯ ನಿಗದಿ ಮಾಡಲಾಗಿದೆ. ಆದರೆ, ಮಾರಾಟಗಾರರು ಎರಡು ಪಾಳಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಹಲವು ವೈನ್‌ಶಾಪ್‌ಗಳಲ್ಲಿ ಎರಡೆರಡು ಪ್ರವೇಶ ದ್ವಾರಗಳನ್ನು ಮಾಡಿಕೊಳ್ಳಲಾಗಿದೆ. ನಿಗದಿತ ಅವಧಿಯಲ್ಲಿ ಮುಖ್ಯ ಪ್ರವೇಶದ್ವಾರದ ಮೂಲಕ ಮದ್ಯ ಮಾರಾಟ ಮಾಡುತ್ತಾರೆ. ನಿಗದಿತ ಅವಧಿ ಮುಗಿದ ನಂತರ ನೆಪಕ್ಕಷ್ಟೇ ಬಾರ್‌ ಬಂದ್‌ ಆಗುತ್ತದೆ. ಆದರೆ, ಅಕ್ರಮ ಕಳ್ಳದಾರಿ, ಕಿಂಡಿಗಳು ತೆರೆದುಕೊಳ್ಳುತ್ತವೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ಹೊಸಹಳ್ಳಿ ಸರ್ಕಲ್‌, ವಿವಿ ರಸ್ತೆ, ಆರ್‌ಪಿ ರಸ್ತೆ, ನೂರು ಅಡಿ ರಸ್ತೆ, ಪೇಟೆ ಬೀದಿ, ಗುತ್ತಲು ರಸ್ತೆ ಮುಂತಾದ ಮುಖ್ಯರಸ್ತೆಗಳ ಬದಿಯಲ್ಲಿರುವ ವೈನ್‌ಶಾಪ್‌ಗಳಲ್ಲಿ ಕಳ್ಳದಾರಿಗಳ ಮೂಲಕವೇ ಹೆಚ್ಚು ವಹಿವಾಟು ನಡೆಯುತ್ತದೆ. ನಸುಕಿನ 5 ಗಂಟೆಗೇ ತೆರೆಯುವ ಈ ಕಳ್ಳದಾರಿಗಳಲ್ಲಿ ಒಮ್ಮೆ ಒಬ್ಬ ವ್ಯಕ್ತಿ ಮಾತ್ರ ಹೋಗಿ ಬರಬಹುದು. ಕೆಲವೆಡೆ ಕೌಂಟರ್‌ ಮಾದರಿಯಲ್ಲಿ ‘ಕಳ್ಳ ಕಿಂಡಿ’ಗಳನ್ನು ತೆರೆಯಲಾಗಿದ್ದು, ಕೈ ಹಾಕುವುದಕ್ಕೆ ಮಾತ್ರ ಸೀಮಿತವಾಗಿವೆ. ಯಾರಿಗೂ ತಿಳಿಯದಂತೆ ರಹಸ್ಯವಾಗಿ ಈ ಕಿಂಡಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ.

ADVERTISEMENT

ಕೆಲವು ಬಾರ್‌ ಮಾಲೀಕರು ನೇರವಾಗಿ ಕಳ್ಳದಾರಿ ಮೂಲಕ ವಹಿವಾಟು ನಡೆಸಿದರೆ, ಇನ್ನೂ ಕೆಲವರು ಕಳ್ಳ ವಹಿವಾಟು ನಡೆಸಲು ಬೇರೆಯವರನ್ನು ನೇಮಕ ಮಾಡಿಕೊಂಡಿದ್ದಾರೆ. ರಾತ್ರಿ ಬಾರ್‌ ಬಂದ್‌ ಮಾಡುವಾಗ ಅಕ್ರಮ ಮಾರಾಟಗಾರರಿಗೆ ಮದ್ಯ ನೀಡಿ, ಮಾರಾಟ ಜವಾಬ್ದಾರಿಯನ್ನು ವಹಿಸಿ ತೆರಳುತ್ತಾರೆ. ಬೆಳಿಗ್ಗೆ, ರಾತ್ರಿಯಲ್ಲಿ ಮದ್ಯ ಕೊಳ್ಳುವವರಿಗೆ ಶೇ 20ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.

ಕಾರ್ಮಿಕರೇ ಗುರಿ: ಕಳ್ಳ ವಹಿವಾಟು ನಡೆಸುವವರಿಗೆ ಗಾರೆ ಕೆಲಸಗಾರರು, ಕಟ್ಟಡ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರೇ ಗುರಿಯಾಗಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲು ಕೆಲ ಕಾರ್ಮಿಕರು ಕುಡಿದು ಹೋಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅಂಥವರು ಕಳ್ಳದಾರಿ ಹಾಗೂ ಕಿಂಡಿಗಳ ಮೂಲಕ ಹೆಚ್ಚು ಹಣ ಕೊಟ್ಟು ಮದ್ಯ ಖರೀದಿ ಮಾಡುತ್ತಿದ್ದಾರೆ. ನಗರದ ಮಹಾವೀರ ಸರ್ಕಲ್‌ನಲ್ಲಿ ಕೆಲಸ ಅರಸುತ್ತಾ ನೂರಾರು ಕಾರ್ಮಿಕರು ನಿಲ್ಲುತ್ತಾರೆ. ಬೆಳಿಗ್ಗೆ 5ರಿಂದ 9 ಗಂಟೆವರೆಗೂ ಕೆಲಸಕ್ಕೆ ಕಾಯುತ್ತಿರುತ್ತಾರೆ. ಆ ಅವಧಿಯಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಹುತೇಕ ವೈನ್‌ಶಾಪ್‌ಗಳಲ್ಲಿ ಭರ್ಜರಿ ವಹಿವಾಟು ನಡೆಯುತ್ತದೆ.

‘ನಾನು ಆಗಾಗ ಬೆಳಿಗ್ಗೆ 6 ಗಂಟೆಗೆ ಮಹಾವೀರ ಸರ್ಕಲ್‌ನಿಂದ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತೇನೆ. ಅಷ್ಟೊತ್ತಿಗಾಗಲೇ ಅವರು ಪರಿಮಳ ಭರಿತರಾಗಿರುತ್ತಾರೆ. ಇಷ್ಟು ಬೇಗ ಎಲ್ಲಿ ಕುಡಿಯುತ್ತೀರಿ ಎಂದು ಪ್ರಶ್ನಿಸಿದರೆ, ಮಂಡ್ಯದ ವೈನ್‌ಶಾಪ್‌ಗಳಲ್ಲಿ ನಡೆಯುತ್ತಿರುವ ಕಳ್ಳ ಮಾರಾಟದ ಕತೆಯನ್ನು ಬಿಚ್ಚಿಡುತ್ತಾರೆ’ ಎಂದು ಹೊಳಲು ಗ್ರಾಮದ ರೈತ ಶಿವಣ್ಣ ಹೇಳಿದರು.

ಮಹಾವೀರ ಸರ್ಕಲ್‌ ಮಾತ್ರವಲ್ಲದೇ ಫ್ಯಾಕ್ಟರಿ ಸರ್ಕಲ್‌, ಹೊಸಹಳ್ಳಿ ಸರ್ಕಲ್‌, ಹೊಳಲು ಸರ್ಕಲ್‌, ವಿವೇಕಾನಂದ ರಸ್ತೆಯಲ್ಲೂ ಬೆಳ್ಳಂಬೆಳಿಗ್ಗೆ ಕಾರ್ಮಿಕರು ಕೆಲಸಕ್ಕೆ ಕಾಯುತ್ತಿರುತ್ತಾರೆ. ಆ ಸಂದರ್ಭದಲ್ಲಿ ಅಕ್ಕಪಕ್ಕದ ವೈನ್‌ಶಾಪ್‌, ಬಾರ್‌ಗಳಲ್ಲಿ ಕಳ್ಳದಾರಿ ಹಾಗೂ ಕಿಂಡಿಯ ಮೂಲಕ ವಹಿವಾಟು ನಡೆಯುತ್ತದೆ.

ಪೆಟ್ಟಿಗೆ ಅಂಗಡಿಯಲ್ಲೂ ಲಭ್ಯ: ಅಬಕಾರಿ ಇಲಾಖೆ ಮಾಹಿತಿ ಪ್ರಕಾರ, ನಗರದಲ್ಲಿ ಪರವಾನಗಿ ಪಡೆದ 63 ಮದ್ಯದಂಗಡಿಗಳಿವೆ. ಅವುಗಳಲ್ಲಿ 22 ವೈನ್‌ಶಾಪ್‌, 23 ಬಾರ್‌ ಮತ್ತು ರೆಸ್ಟೋರೆಂಟ್‌ ಸೇರಿವೆ. ಆದರೆ, ಪರವಾನಗಿ ಪಡೆಯದ ನೂರಾರು ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹಲವು ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ದೊರೆಯುತ್ತದೆ. ಅಲ್ಲಿ ಯಾವುದೇ ಫಲಕಗಳಿಲ್ಲ, ಗೊತ್ತಿರುವ ಮಾಮೂಲಿ ಗ್ರಾಹಕರು ಅಲ್ಲಿಗೆ ಬಂದು ಹೋಗುತ್ತಾರೆ.

‘ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಕೆಲವು ಮನೆಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಗರದ ಹೊರವಲಯದ ಇಂಡುವಾಳು ಗ್ರಾಮದ ವ್ಯಕ್ತಿಯೊಬ್ಬರು ದೂರಿದರು.

ಅಬಕಾರಿ ಇಲಾಖೆ ಸಿಬ್ಬಂದಿಯ ಶ್ರೀರಕ್ಷೆ

ಕಳ್ಳದಾರಿ, ಕಿಂಡಿಯ ಮೂಲಕ ಮದ್ಯ ವಹಿವಾಟು ನಡೆಯುವುದು ಅಬಕಾರಿ ಇಲಾಖೆ ಸಿಬ್ಬಂದಿಗೆ ತಿಳಿದಿಲ್ಲ ಎಂದಲ್ಲ. ಅವರ ಶ್ರೀರಕ್ಷೆಯಲ್ಲೇ ಅಕ್ರಮ ನಡೆಯುತ್ತಿರುವುದು ಗೊತ್ತಿರುವ ವಿಚಾರವೇ ಆಗಿದೆ. ಯಾವ ಅಂಗಡಿಯಲ್ಲಿ ಕಳ್ಳದಾರಿಗಳಿವೆ ಎಂಬುದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಒಬ್ಬ ಅಬಕಾರಿ ಇಲಾಖೆ ಸಿಬ್ಬಂದಿ ಒಂದು ದಿನಕ್ಕೆ ಒಂದು ಬಾರ್‌ಗೆ ಭೇಟಿ ನೀಡುತ್ತಾನೆ. ಅವನಿಗೆ ₹500 ಮಾಮೂಲಿ ಕೊಡಬೇಕು. ಆತ ವಾರಕ್ಕೊಮ್ಮೆ ಕುಡಿಯಲು ಉಚಿತವಾಗಿ ಮದ್ಯ ನೀಡಬೇಕು. ತಿನ್ನುವಷ್ಟು ಮಾಂಸಾಹಾರ ಪೂರೈಸಬೇಕು. ಅಬಕಾರಿ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲೇ ಅಕ್ರಮ ವಹಿವಾಟು ನಡೆಯುತ್ತಿದೆ’ ಎಂದು ಬಾರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ತಿಳಿಸಿದರು.

ಮದ್ಯ ಪೂರೈಕೆಗೆ ಮಕ್ಕಳ ಬಳಕೆ?

ಬೆಳ್ಳಂಬೆಳಿಗ್ಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಅವರು ಇರುವ ಸ್ಥಳಕ್ಕೇ ಮದ್ಯ ಪೂರೈಸಲಾಗುತ್ತದೆ. ಮಹಾವೀರ ಸರ್ಕಲ್‌ನಲ್ಲಿ ನಿಲ್ಲುವ ಕಾರ್ಮಿಕರಿಗೆ ಸ್ಥಳಕ್ಕೇ ಬಂದು ಬಾಟಲಿ ನೀಡಲಾಗುತ್ತದೆ. ಅದಕ್ಕೆ ಶೇ 30ರಷ್ಟು ಅಧಿಕ ದರ ನಿಗದಿ ಮಾಡಲಾಗಿದೆ.

‘ಕಾರ್ಮಿಕರಿಗೆ ಮದ್ಯ ನೀಡಲು ಮಕ್ಕಳನ್ನು ಬಳಸಲಾಗುತ್ತಿದೆ. ಶಾಲೆಯ ಬ್ಯಾಗ್‌ಗಳಲ್ಲಿ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಬಂದು ಪೂರೈಸಲಾಗುತ್ತದೆ. ಯಾರಿಗೂ ಅನುಮಾನ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಪೊಲೀಸರು ಹಾಗು ಅಬಕಾರಿ ಇಲಾಖೆಯವರ ಸಹಾಯವಿದೆ’ ಎಂದು ಹೆಸರು ಹೇಳಲು ಇಚ್ಛಿಸದ ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ತಿಳಿಸಿದರು.

ಪೊಲೀಸ್‌ ಇಲಾಖೆ ವಿರುದ್ಧ ಅಬಕಾರಿ ಇಲಾಖೆ

ಅಕ್ರಮ ಮದ್ಯ ಮಾರಾಟ ವಿಚಾರದಲ್ಲಿ ಪೊಲೀಸ್‌ ಇಲಾಖೆ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ನಡುವೆ ಸಮನ್ವಯದ ಕೊರತೆ ಇದೆ. ಅಕ್ರಮ ಚಟುವಟಿಕೆ ನಡೆದಾಗ ಜನರು ಪೊಲೀಸ್‌ ಠಾಣೆಗಳಿಗೆ ಕರೆ ಮಾಡುತ್ತಾರೆ. ಆದರೆ, ಅಬಕಾರಿ ಇಲಾಖೆಗೆ ದೂರು ಕೊಡುವಂತೆ ಪೊಲೀಸರು ತಿಳಿಸುತ್ತಾರೆ. ಅಬಕಾರಿ ಇಲಾಖೆಗೆ ಹೋದರೆ ಪೊಲೀಸರಿಗೆ ತಿಳಿಸುವಂತೆ ಸೂಚಿಸುತ್ತಾರೆ. ಹೀಗಾಗಿ ಯಾರಿಗೆ ದೂರು ನೀಡಬೇಕು ಎಂಬ ಗೊಂದಲ ಜನರನ್ನು ಕಾಡುತ್ತದೆ.

‘ಅಕ್ರಮ ಮದ್ಯ ಮಾರಾಟ ವಿಚಾರ ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ವೈನ್‌ಶಾಪ್‌, ಬಾರ್‌ಗಳಲ್ಲಿ ಘರ್ಷಣೆ ಸಂಭವಿಸಿದರೆ ಅದು ಪೊಲೀಸ್‌ ಇಲಾಖೆ ವ್ಯಾಪ್ತಿಗೆ ಬರುತ್ತದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮದ್ಯ ಮಾರುವುದೇ ಸರಿಯಿಲ್ಲ. ಬೆಳಿಗ್ಗೆ ಮಾರುವುದು ಇನ್ನೂ ತಪ್ಪು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಾಜದ ಸ್ವಾಸ್ಥ್ಯ ಹಾಳುಗುತ್ತದೆ. ಅಬಕಾರಿ ಇಲಾಖೆ ಅಧಿಕಾರಿಗಳು ಇದನ್ನು ಕೂಡಲೇ ತಡೆಯಬೇಕು.

-ಹಳ್ಳಿಲಿಂಗಯ್ಯ, ಸುಭಾಷ್‌ ನಗರ

ಮೊದಲೆಲ್ಲಾ ಕೆಲಸಕ್ಕೆ ಬರೋರಿಗೆ ಟೀ, ಕಾಫಿ ಕೊಡಿಸಿದ್ರೆ ಸಾಕಾಗುತ್ತಿತ್ತು. ಈಗ ಎಣ್ಣೆ ಇಲ್ಲದೆ ಕೆಲಸಕ್ಕೇ ಬರಲ್ಲ ಅಂತಾರೆ. ಬೆಳಿಗ್ಗೆ ಮದ್ಯದಂಗಡಿಗೆ ಎಡತಾಕುವ ಪರಿಸ್ಥಿತಿ ಇದೆ. ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು.

-ನಿಂಗರಾಜು, ಮಂಗಲ

ಮದ್ಯ ಮಾರಾಟದಿಂದ ಬರುವ ದುಡ್ಡಿನಿಂದ ಸರ್ಕಾರ ನಡೆಸ ಬೇಕಾ? ಬಿಹಾರದಲ್ಲಿ ಮದ್ಯ ನಿಷೇಧಿಸಿರುವು ದನ್ನು ಮಾದರಿಯಾಗಿ ತೆಗೆದುಕೊಂಡು ಇಡೀ ದೇಶದಲ್ಲಿ ನಿಷೇಧ ಮಾಡಬೇಕು.
-ಕೆಂಚೇಗೌಡ, ಕಾಳೇನಹಳ್ಳಿ

ಸಂಜೆ ಮೇಲೆ ಮದ್ಯದಂಗಡಿಗಳು ತೆರೆದರೆ ಉತ್ತಮ. ಕೆಲಸ ಕಾರ್ಯಗಳನ್ನೆಲ್ಲಾ ಮುಗಿಸಿ, ಸಂಜೆ ನಂತರ ಮನೆಗೆ ತೆಗೆದುಕೊಂಡು ಹೋಗಿ ಕುಡಿಯಬೇಕು. ಇದರಿಂದ ಸಾಕಷ್ಟು ಅನಾಹುತಗಳು ತಪ್ಪುತ್ತವೆ.

-ಎ.ಎಸ್‌.ಗೌರಿಶಂಕರ್‌, ಅಂಬರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.