ನಾಗಮಂಗಲ (ಮಂಡ್ಯ ಜಿಲ್ಲೆ): ‘ಆತ್ಮಹತ್ಯೆಗೆ ಯತ್ನಿಸಿದ್ದ ಸಾರಿಗೆ ಸಂಸ್ಥೆ ಬಸ್ ಚಾಲಕ ಎಚ್.ಆರ್.ಜಗದೀಶ್ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು– ಬದುಕಿನ ನಡುವೆ ಹೋರಾಡುತ್ತಿದ್ದು, ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಅವರ ಸಹೋದರ ರವಿಕುಮಾರ್ ಮನವಿ ಮಾಡಿದ್ದಾರೆ.
‘ಯಾರ ಒತ್ತಡದಿಂದ ಆತ್ಮಹತ್ಯೆಗೆ ಯತ್ನಿಸಿದರೆಂಬುದು ನಮಗೆ ಮುಖ್ಯವಲ್ಲ, ಅವರ ಜೀವ ಉಳಿಸಿಕೊಳ್ಳುವುದೇ ಮುಖ್ಯ’ ಎಂದು ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.
‘ಡೆತ್‌ನೋಟ್‌ನಲ್ಲಿ ಸಚಿವ ಚಲುವರಾಯಸ್ವಾಮಿಯವರ ಹೆಸರು ಹೇಗೆ ಬಂತೆಂಬುದು ಗೊತ್ತಿಲ್ಲ. ಯಾವ ಒತ್ತಡದ ಬಗ್ಗೆಯೂ ಅವರು ಹೇಳಿಕೊಂಡಿರಲಿಲ್ಲ. ಅತ್ತಿಗೆ ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದರೂ ಅಣ್ಣ ಸರ್ಕಾರಿ ಉದ್ಯೋಗಿಯಾಗಿದ್ದರಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿರಲಿಲ್ಲ’ ಎಂದರು.
‘ಐಸಿಯುನಲ್ಲಿರುವ ಅಣ್ಣನ ಬಗ್ಗೆ ಸದ್ಯ ಏನೂ ಹೇಳಲಾಗದು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಜ್ಞೆ ಬಂದಿದ್ದರೂ ಮಾತನಾಡುವ ಸ್ಥಿತಿಯಲ್ಲಿಲ್ಲ’ ಎಂದರು.
ಚಾಲಕ ಜಗದೀಶ್ ಅವರ ಪತ್ನಿ ಪಾವನಾ ಮಾತನಾಡಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.