
ಮಂಡ್ಯ: ‘ಮಾದಕ ವಸ್ತುಗಳಿಂದ ಯುವಜನರು, ಶಾಲಾ ಮಕ್ಕಳು ಮಾದಕ ವ್ಯಸನಿಗಳಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳು ಜಿಲ್ಲೆಗೆ ಬಾರದಂತೆ ಕಟ್ಟುನಿಟ್ಟಿನ ಕ್ರಮವಹಿಸಿ, ಅವುಗಳ ಮಾರಾಟದ ಮೇಲೆ ವಿಶೇಷ ನಿಗಾ ಇಡಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಬಾರಿ ನಡೆದ ಸಭೆಯ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಸುತ್ತಲಿನ ನೂರು ಮೀಟರ್ ವ್ಯಾಪ್ತಿಯನ್ನು ತಂಬಾಕು ಮುಕ್ತ ವ್ಯಾಪ್ತಿ ಎಂದು ನಾಮಫಲಕ ಅಳವಡಿಸಲು ಸೂಚಿಸಲಾಗಿತ್ತು. ಇದುವರೆಗೆ ಎಷ್ಟು ಶಾಲೆಗಳಲ್ಲಿ ಫಲಕ ಅಳವಡಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಪತ್ರ ಅಭಿಯಾನ ಯಶಸ್ವಿಗೊಳಿಸಿ:
ಶಾಲೆಗಳಲ್ಲಿ ಮಕ್ಕಳು ಮಾದಕ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶಿಕ್ಷಣ ಇಲಾಖೆ ಇದರ ಕುರಿತಾಗಿ ಹೆಚ್ಚಿನ ಗಮನ ಹರಿಸಬೇಕು ಹಾಗೂ ಮಾದಕ ವ್ಯಸನಕ್ಕೆ ಬಲಿಯಾಗಿರುವ ಮಕ್ಕಳ ಮನ ಪರಿವರ್ತನೆ ಮಾಡಬೇಕು. ಕಳೆದ ಸಭೆಯಲ್ಲಿ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಶಾಲಾ ಕಾಲೇಜು ಮಕ್ಕಳಿಂದ ಪತ್ರ ಅಭಿಯಾನ ಮಾಡಲು ಸೂಚನೆ ನೀಡಲಾಗಿತ್ತು. ಅದರಂತೆ 119 ಕಾಲೇಜುಗಳ ಮಕ್ಕಳು ಸದರಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಶಾಲಾ ಮಕ್ಕಳನ್ನು ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಪತ್ರ ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ಕಿವಿಮಾತು ಹೇಳಿದರು.
ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಬೆಳೆ ಬೆಳೆಯುತ್ತಾರೆ. ಕೆಲವು ಕಡೆ ಕೃಷಿ ಬೆಳೆಗಳ ಮಧ್ಯದಲ್ಲಿ ಯಾರಿಗೂ ತಿಳಿಯದಂತೆ ಗಾಂಜಾ ಗಿಡಗಳನ್ನು ಬೆಳೆಸಲು ಸಾಧ್ಯತೆ ಇರುತ್ತದೆ. ಅಧಿಕಾರಿಗಳು ಬೆಳೆ ಸಮೀಕ್ಷೆಗೆ ಹೋದಾಗ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಡೆಸಬೇಕು ಎಂದರು.
ಗಾಂಜಾ ಬೆಳೆಯುವುದು ಎಷ್ಟು ಅಪಾಯಕಾರಿ ಹಾಗೂ ಗಾಂಜಾ ಬೆಳೆ ಬೆಳೆಯುವುದರಿಂದ ಎದುರಿಸಬೇಕಾದ ಪರಿಣಾಮಗಳ ಕುರಿತು ರೈತ ಸಂಪರ್ಕ ಕೇಂದ್ರಗಳಲ್ಲಿ ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸಿ. ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಮಾದಕ ವಸ್ತುಗಳು ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗಶಯನ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ತಿಮ್ಮರಾಜು, ಆರ್‌ಸಿಎಚ್ ಅಧಿಕಾರಿ ಡಾ.ಅಶ್ವತ್ಥ್ ಪಾಲ್ಗೊಂಡಿದ್ದರು.
65 ಪ್ರಕರಣ ದಾಖಲು: ಎಸ್ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ‘ಪ್ರಸಕ್ತ ವರ್ಷ ಮಾದಕ ವ್ಯಸನಿಗಳ ವಿರುದ್ಧ 65 ಪ್ರಕರಣ ದಾಖಲಾಗಿದೆ. ಅಬಕಾರಿ ಇಲಾಖೆ 21 ಪ್ರಕರಣ ದಾಖಲು ಮಾಡಿ 22 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದೆ. ಜೊತೆ ಮಾದಕ ವಸ್ತುಗಳ ಸಾಗಣೆಗೆ ಬಳಸಿದ 6 ವಾಹನವನ್ನು ಸೀಜ್ ಮಾಡಲಾಗಿದೆ ಎಂದರು. ಪ್ರಸ್ತುತ ವರ್ಷ ರೈಲ್ವೆ ಇಲಾಖೆಯ ಮೂಲಕ 2 ಪ್ರಕರಣ ಹಾಗೂ 4 ಕೆ.ಜಿ 900 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಾಗಿ ರೈಲ್ವೆ ಮೂಲಕ ಮಾದಕ ವಸ್ತುಗಳು ಜಿಲ್ಲೆಗೆ ಬರುತ್ತಿದೆ. ರೈಲ್ವೆ ಇಲಾಖೆಯವರು ಇದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಶ್ವಾನದಳ ಬಳಸಿಕೊಳ್ಳಿ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.