ADVERTISEMENT

ಮಂಡ್ಯ: ಜಾತ್ರೋತ್ಸವಗಳ ಮೇಲೆ ಕೋವಿಡ್‌ ಕರಿನೆರಳು: ಸಣ್ಣ ವ್ಯಾಪಾರಿ ಕಂಗಾಲು

2 ವರ್ಷದಿಂದ ನಡೆಯದ ಹಲವು ಉತ್ಸವಗಳು

ಎಂ.ಎನ್.ಯೋಗೇಶ್‌
Published 16 ಜನವರಿ 2022, 19:30 IST
Last Updated 16 ಜನವರಿ 2022, 19:30 IST
ಮದ್ದೂರು ತಾಲ್ಲೂಕು ಆತ್ಮಲಿಂಗೇಶ್ವರ ಜಾತ್ರೆಯ ನೋಟ
ಮದ್ದೂರು ತಾಲ್ಲೂಕು ಆತ್ಮಲಿಂಗೇಶ್ವರ ಜಾತ್ರೆಯ ನೋಟ   

ಮಂಡ್ಯ: ಕೋವಿಡ್ ರೂಪಾಂತರಿ ತಳಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಕಾರಣ ಜಿಲ್ಲೆಯ ಹಲವು ಪ್ರಮುಖ ಜಾತ್ರೆ, ಉತ್ಸವಗಳು ಈ ವರ್ಷವೂ ನಡೆಯುತ್ತಿಲ್ಲ. ಹೀಗಾಗಿ ಜಾತ್ರೆ, ಉತ್ಸವಗಳನ್ನೇ ನಂಬಿ ಬದುಕುತ್ತಿದ್ದ ಸಣ್ಣ ಪುಟ್ಟ ವ್ಯಾಪಾರಿಗಳು ವಹಿವಾಟು ಇಲ್ಲದೆ ಕಂಗಾಲಾಗಿದ್ದಾರೆ.

ಕಳೆದ ವರ್ಷವೂ ಇದೇ ವೇಳೆ ಯಲ್ಲಿ ರಾಜ್ಯದ ಜನರು ಕೋವಿಡ್ ಹಾವಳಿಯಿಂದ ಕಂಗಾಲಾಗಿದ್ದರು. ಸಂಕ್ರಾಂತಿ ಮುಗಿಯುತ್ತಿದ್ದಂತೆ ಜಿಲ್ಲೆಯಲ್ಲಿ ಜಾತ್ರೆಗಳ ಮಾಸ ಆರಂಭವಾಗುತ್ತದೆ. ಪ್ರಮುಖ ದೇವಾಲಯಗಳ ಜಾತ್ರೆ, ರಥೋತ್ಸವ ಆರಂಭಗೊಳ್ಳುತ್ತವೆ. ಬೇಸಿಗೆ ಅವಧಿಯಲ್ಲಿ ಹೆಚ್ಚು ಉತ್ಸವಗಳು ಜರುಗುತ್ತವೆ. ಆದರೆ, ಆ ಎಲ್ಲಾ ಜಾತ್ರೆಗಳ ಮೇಲೆ ಈಗ ಕೋವಿಡ್ ಕರಿ ನೆರಳು ಕಾಡುತ್ತಿದೆ.

ಹಲವು ವ್ಯಾಪಾರಿ ಕುಟುಂಬಗಳು ತಲೆಮಾರುಗಳಿಂದ ಜಾತ್ರೆ ಹಾಗೂ ಉತ್ಸವಗಳಲ್ಲಿ ವ್ಯಾಪಾರ ನಡೆಸುತ್ತಾರೆ. ಮಿಠಾಯಿ, ಜಿಲೇಬಿ ಸೇರಿ ಸಿಹಿ ತಿಂಡಿ ಯನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡುತ್ತಾರೆ.‌ ಜೊತೆಗೆ ಹಲವು ಕುಟುಂಬಗಳು ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡುತ್ತಾರೆ. ನಾಗಮಂಗಲ, ಮಳವಳ್ಳಿ ತಾಲ್ಲೂಕಿನಲ್ಲಿ ಆಟಿಕೆ ಮಾರಾಟ ಮಾಡುವ ಹಲವು ಕುಟುಂಬಗಳಿವೆ. ಆದರೆ ಈ ಬಾರಿ ಕೋವಿಡ್ ಕಾಟದಿಂದ ಅವರ ವಹಿವಾಟು ನೆಲಕಚ್ಚಿದ್ದು ನಷ್ಟದಿಂದ ಕಂಗಾಲಾಗಿದ್ದಾರೆ. ಅವರಲ್ಲಿ ಬಹುತೇಕರು ಅಲೆಮಾರಿಗಳಾಗಿದ್ದು, ಸರ್ಕಾರಿ ಸೌಲಭ್ಯವೂ ಇಲ್ಲವಾಗಿದೆ.

ADVERTISEMENT

‘‌ನಾವು ಮಹಾರಾಷ್ಟ್ರ ಕೊಲ್ಹಾಪುರ ಭಾಗದಿಂದ ಮರದ ಆಟಿಕೆ ತಂದು ಜಾತ್ರೆಗಳಲ್ಲಿ ಮಾರಾಟ ಮಾಡುತ್ತಿದ್ದೆವು. ಕೋವಿಡ್ ಹಾವಳಿಯಿಂದ ಮಹಾ ರಾಷ್ಟ್ರಕ್ಕೆ ಹೋಗಿ ಆಟಕೆ ತರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಜಾತ್ರೆಗಳೂ ನಡೆಯದ ಕಾರಣ ಕಳೆದೆರಡು ವರ್ಷ ದಿಂದ ಕಷ್ಟದ ಜೀವನ ನಡೆಸುತ್ತಿದ್ದೇವೆ. ನಮ್ಮ ಕಡೆ ಯಾರೂ ನೋಡುತ್ತಿಲ್ಲ’ ಎಂದು ಆಟಿಕೆ ಮಾರಾಟ ಮಾಡುವ ಮಳವಳ್ಳಿ ತಾಲ್ಲೂಕು ಹಲಗೂರಿನ ಷಣ್ಮುಗಂ ಹೇಳಿದರು.

ಉಪ್ಪರಿಕೆ ಜಾತ್ರೆ ಇಲ್ಲ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಜ.15ರಿಂದ ನಡೆಯಬೇಕಿದ್ದ ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರೆಯನ್ನು ಕೊರೊನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

ಜ.15ರಿಂದ 10 ದಿನ ಈ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿ ದನಗಳ ಜಾತ್ರೆಗೆ ಎಲ್ಲ ಅಗತ್ಯ ಸಿದ್ಧತೆ ಗಳನ್ನೂ ನಡೆಸಿತ್ತು.

ಈ ಜಾತ್ರೆಗೆ 10 ಸಾವಿರ ರಾಸುಗಳು ಬರುವ ನಿರೀಕ್ಷೆ ಇತ್ತು. ಆದರೆ, ಕೊರೊನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ಸೂಚನೆಯಂತೆ ದನಗಳ ಜಾತ್ರೆಯನ್ನು ರದ್ದುಪಡಿಸಿದ್ದೇವೆ ಎಂದು ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಎಂ.ಬಿ.ಕುಮಾರ್‌ ತಿಳಿಸಿದರು.

1983ರಿಂದ ನಡೆಯುತ್ತಿರುವ ಈ ದನಗಳ ಜಾತ್ರೆ ರಾಸುಗಳಿಗೆ ಕಾಲುಬಾಯಿ ಜ್ವರದ ಕಾರಣಕ್ಕೆ ಎರಡು ಬಾರಿ ಮತ್ತು ಕೋವಿಡ್‌—19 ಕಾರಣದಿಂದಲೂ ಎರಡು ಬಾರಿ ರದ್ದುಗೊಂಡಂತಾಗಿದೆ.

ಕೆರಗೋಡು ಸಮೀಪದ ಆಲಕೆರೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿ ಕೊಂಡ ಬಂಡಿ ಜಾತ್ರಾ ಮಹೋತ್ಸವ ಕಳೆದ ವರ್ಷ ನಡೆದಿರಲಿಲ್ಲ. ಸಂಪ್ರದಾಯದಂತೆ ಆಲಕೆರೆ ಮತ್ತು ಕೀಲಾರ ಗ್ರಾಮಸ್ಥರು ಕಳೆದ ವರ್ಷ ಮೇ ನಲ್ಲಿ ನಡೆಸಲು ನಿರ್ಧರಿಸಿದ್ದರು. 1967, 1982, 2001ರಲ್ಲಿ ಉತ್ಸವ ನಡೆದಿತ್ತು.

ಕರ್ನಾಟಕದಲ್ಲೇ ಹೆಸರುವಾಸಿ ಹಾಗೂ ಹೆಚ್ಚು ಸೌದೆ ಬಳಸಿ ಉದ್ದದ ಕೊಂಡ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಆಲಕೆರೆ ಎಲ್ಲೆಯ ಆಲಕೆರೆ, ಕೀಲಾರ, ಮುದ್ದುಂಗೆರೆ ಗ್ರಾಮಗಳ ಗ್ರಾಮಸ್ಥರ ಜಮೀನಿನಲ್ಲಿ ಫಲ ಬಿಡುವ ಮರಗಳನ್ನು ಹೊರತುಪಡಿಸಿ ಒಂದು ಮರಕ್ಕೆ ಒಂದು ಕೊಂಬೆ ಸೌದೆ ಕಡಿದು ಸಂಗ್ರಹಿಸಲಾಗಿತ್ತು. ಈ ವರ್ಷವೂ ನಡೆಸಲು ಯೋಜಿಸಿದ್ದರು. ಇದೀಗ ಕೋವಿಡ್ ನಿಂದಾಗಿ ಮುಂದೂಡಲಾಗಿದೆ.

ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರೆ ಶಿವರಾತ್ರಿಗೆ (ಮಾ.3) ನಡೆಯಬೇಕು. ಚಿಕ್ಕಾಡೆ ಗ್ರಾಮದ ದೇವಿರಮ್ಮನ ಜಾತ್ರೆ ಫೆಬ್ರುವರಿ ಮೊದಲ ವಾರ ನಡೆಯಬೇಕು. ಆದರೆ, ಈ ಜಾರಿ ಜಾತ್ರೆಗಳು ನಡೆಯುವ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ಜ.16ರಂದು ನಡೆಯಲಿರುವ ಗವಿರಂಗನಾಥಸ್ವಾಮಿ ರಥೋತ್ಸವವನ್ನು ರದ್ದು ಗೊಳಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಉತ್ಸವಗಳು ಕೇವಲ ದೇವಾಲಯದ ಆವರಣಕ್ಕೆ ಸೀಮಿತವಾಗಿರಲಿವೆ.

ಮದ್ದೂರು ತಾಲ್ಲೂಕಿನ ಕೆಸ್ತೂರು ಬಳಿಯ ಚಿಕ್ಕಂಕನಹಳ್ಳಿಯ ಶ್ರೀನಂದಿ ಬಸವೇಶ್ವರಸ್ವಾಮಿ ದೇವಸ್ಥಾನದ ದನಗಳ ಜಾತ್ರೆಯನ್ನು ಜಿಲ್ಲಾಧಿಕಾರಿ ಆದೇಶದನ್ವಯ ರದ್ದುಪಡಿಸಲಾಗಿದೆ. ಭಾರತೀನಗರ ಆತ್ಮಲಿಂಗೇಶ್ವರ ಜಾತ್ರೆಯ ಮೇಲೂ ಕೋವಿಡ್‌ ಕರಿನೆರಳಿದೆ. ಹಲಗೂರು ಸಮೀಪದ ಗುಂಡಾಪುರ ಬೆಟ್ಟದ ಅರಸಮ್ಮ ಜಾತ್ರಾ ಮಹೋತ್ಸವ, ಯತ್ತಂಬಾಡಿ ಕಾಳೇಶ್ವರ ಜಾತ್ರೋತ್ಸವ, ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಮಹಾ ಶಿವರಾತ್ರಿ ಜಾತ್ರೆ ನಡೆಯುವುದು ಅನುಮಾನವಾಗಿದೆ.

ನಿಷೇಧದ ನಡುವೆ ಸಂತೆ: ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಉತ್ಸವ ಆಚರಣೆ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅದರ ನಡುವೆ ಕೆಲವು ಸಂತೆ, ಜಾತ್ರೆಗಳು ಈಗಾಗಲೇ ನಡೆದಿವೆ. ಪಾಂಡವಪುರದಲ್ಲಿ ಗುರುವಾರದ ಸಂತೆ ಎಂದಿನಂತೆ ನಡೆಯುತ್ತಿದೆ. ಜನಜಂಗುಳಿ ನಡುವೆ ಜನರು ಸುರಕ್ಷತಾ ನಿಯಮ ಪಾಲಿಸದೆ ಪಾಲ್ಗೊಳ್ಳುತ್ತಿದ್ದಾರೆ. ಅದರ ವಿರುದ್ಧ ಪೊಲೀಸರು ಕ್ರಮ ಜರುಗಿಸಿಲ್ಲ.

ಡಿಸೆಂಬರ್‌ನಲ್ಲಿ ನಾಗಮಂಗಲದ ಗಿಡದ ಜಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ.

ಮೇಲುಕೋಟೆ: ಉತ್ಸವ ದೇವಾಲಕ್ಕೆ ಸೀಮಿತ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜ.16ರಂದು ನಡೆಯಬೇಕಿದ್ದ ಅಂಗಮಣಿ ಉತ್ಸವ ಕೇವಲ ದೇವಾಲಯದ ಆವರಣಕ್ಕೆ ಮಾತ್ರ ಸೀಮಿತವಾಗಿದೆ. ದೇವಾಲಯದ ಹೊರಗಿನ ಮಂಟಪದಲ್ಲಿ ಮುಕ್ತವಾಗಿ ನಡೆಯುತ್ತಿದ್ದ ಮಡಿಲು ತುಂಬುವ ಸೇವೆ, ಕಲ್ಯಾಣಿಯಲ್ಲಿ ನಡೆಯುತ್ತಿದ್ದ ಗಂಗಾಪೂಜೆಯನ್ನು ರದ್ದು ಮಾಡಲಾಗಿದೆ.

ಕೋವಿಡ್‌ ಹೆಚ್ಚುತ್ತಿರುವ ಕಾರಣ ಮೇಲುಕೋಟೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ದೇವಾಲಯದ ಸುತ್ತಮುತ್ತ ವ್ಯಾಪಾರ ನಡೆಸುವ ಸಣ್ಣಪುಟ್ಟ ವ್ಯಾಪಾರಿಗಳು ವಹಿವಾಟು ನಡೆಯದೆ ಕಂಗಾಲಾಗಿದ್ದಾರೆ.

‘ಕಳೆದ 1 ವರ್ಷದಿಂದ ಅಂಗಡಿ ಬಂದ್‌ ಮಾಡಿದ್ದೇವೆ. ಈಗ ವಹಿವಾಟು ಆರಂಭವಾಗುತ್ತಿರುವ ಸಂದರ್ಭದಲ್ಲಿ ಮತ್ತೆ ವಾರಾಂತ್ಯದಲ್ಲಿ ಬಂದ್ ಆಗುತ್ತಿರುವುದರಿಂದ ನಮಗೆ ಅಪಾರ ನಷ್ಟವಾಗುತ್ತಿದೆ’ ಎಂದು ವ್ಯಾಪಾರಿ ಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.