ADVERTISEMENT

ಡಾ.ರಾಜ್‌, ವಿಷ್ಣು ಹೆಸರಿನಲ್ಲಿ ದ್ವಾರಕೀಶ್‌ರಿಂದ ಪಿಂಡ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 12:21 IST
Last Updated 17 ಸೆಪ್ಟೆಂಬರ್ 2020, 12:21 IST
ಶ್ರೀರಂಗಪಟ್ಟಣ ಸಮೀಪದ ಕಾವೇರಿ ಕನ್ಯಾ ಗುರುಕುಲ ಬಳಿ, ಕಾವೇರಿ ನದಿ ದಡದಲ್ಲಿ ನಟ ಹಾಗೂ ನಿರ್ದೇಶಕ ದ್ವಾರಕೀಶ್‌ ಮಹಾಲಯ ಅಮಾವಾಸ್ಯೆ ನಿಮಿತ್ತ ಗುರುವಾರ ಪಿಂಡ ಪ್ರದಾನಾದಿ ಕೈಂಕರ್ಯಗಳನ್ನು ನೆರವೇರಿಸಿದರು
ಶ್ರೀರಂಗಪಟ್ಟಣ ಸಮೀಪದ ಕಾವೇರಿ ಕನ್ಯಾ ಗುರುಕುಲ ಬಳಿ, ಕಾವೇರಿ ನದಿ ದಡದಲ್ಲಿ ನಟ ಹಾಗೂ ನಿರ್ದೇಶಕ ದ್ವಾರಕೀಶ್‌ ಮಹಾಲಯ ಅಮಾವಾಸ್ಯೆ ನಿಮಿತ್ತ ಗುರುವಾರ ಪಿಂಡ ಪ್ರದಾನಾದಿ ಕೈಂಕರ್ಯಗಳನ್ನು ನೆರವೇರಿಸಿದರು   

ಶ್ರೀರಂಗಪಟ್ಟಣ: ನಟ ಹಾಗೂ ನಿರ್ದೇಶಕ ದ್ವಾರಕೀಶ್‌ ಗುರುವಾರ, ಮಹಾಲಯ ಅಮಾವಾಸ್ಯೆ ನಿಮಿತ್ತ ಇಲ್ಲಿಗೆ ಸಮೀಪದ ಕಾವೇರಿ ಕನ್ಯಾಗುರುಕುಲ ಬಳಿ ಪಿಂಡ ಪ್ರದಾನ ಇತರ ವಿಧಿ, ವಿಧಾನಗಳನ್ನು ನೆರವೇರಿಸಿದರು.

ವರನಟ ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌, ಶಂಕರನಾಗ್, ಹುಣಸೂರು ಕೃಷ್ಣಮೂರ್ತಿ ಸೇರಿದಂತೆ ಚಿತ್ರರಂಗದ ಪ್ರಮುಖರ ಹೆಸರಿನಲ್ಲಿ ಅವರು ತಿಲ ತರ್ಪಣೆ ನೀಡಿದರು. ತಮ್ಮ ಪಿತೃಗಳ ಹೆಸರಿನಲ್ಲಿ ಕೂಡ ಪೂಜೆ ಮಾಡಿಸಿದರು.

ನದಿ ಮಧ್ಯೆ ಬಂಡೆಯ ಮೇಲೆ ಕುಳಿತು ಪಾರ್ವಾಣ ಪೂಜೆ, ಸಂಕಲ್ಪ ಸ್ನಾನ ಪೂರೈಸಿದರು. ಕಾವೇರಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ 12.30ರಿಂದ 1.30ರ ವರೆಗೆ ವೈದಿಕರಾದ ಕೆ.ಎಸ್‌ ಲಕ್ಷ್ಮೀಶ್‌ ಅವರ ಮಾರ್ಗದರ್ಶನದಲ್ಲಿ ವಿಧಿ, ವಿಧಾನಗಳು ನಡೆದವು. ದ್ವಾರಕೀಶ್‌ ಅವರ ಪುತ್ರ ಗಿರಿ ಜತೆಗಿದ್ದರು.

ADVERTISEMENT

ಜನಜಾತ್ರೆ: ಮಹಾಲಯ ಅಮಾವಾಸ್ಯೆ ನಿಮಿತ್ತ ಪಟ್ಟಣದ ಆಸುಪಾಸಿನ ನದಿ ತೀರಗಳಲ್ಲಿ ಗುರುವಾರ ಜನ ಜಾತ್ರೆಯೇ ಕಂಡು ಬಂತು. ರಾಜ ಸೋಪಾನಕಟ್ಟೆ, ಜೀಬಿ ಗೇಟ್‌, ಪಶ್ಚಿಮವಾಹಿನಿ, ಗೋಸಾಯಿಘಾಟ್‌, ಕಾವೇರಿ ಸಂಗಮ ಬಳಿ ಜನರು ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದರು. ತಿಲ ತರ್ಪಣ ಇತರ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು.

ಮುಂಜಾನೆ 6 ಗಂಟೆಯಿಂದಲೇ ರಾಜ್ಯ, ಹೊರ ರಾಜ್ಯಗಳಿಂದ ಜನರು ಇಲ್ಲಿಗೆ ಬರಲಾರಂಭಿಸಿದರು. ಗಂಜಾಂ ರಸ್ತೆಯಲ್ಲಿ ವಾಹನದಟ್ಟಣೆ ಉಂಟಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜನ ಜಂಗುಳಿ ತಡೆಯಲು ಪೊಲೀಸರು ಟೋಕನ್‌ ವ್ಯವಸ್ಥೆ ಮಾಡಿದ್ದರು.

ನಿಯಮ ಉಲ್ಲಂಘನೆ: ತಾಲ್ಲೂಕಿನ ಪ್ರಸಿದ್ಧ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯಕ್ಕೆ ಮಹಾಲಯ ಅಮಾವಾಸ್ಯೆಯಂದು, ಕೋವಿಡ್‌ ಕಾರಣಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ತಾಲ್ಲೂಕು ಆಡಳಿತ ಆದೇಶ ಹೊರಡಿಸಿತ್ತು. ಆದರೂ ಜನರು ಅದನ್ನು ಉಲ್ಲಂಘಿಸಿ ದೇವಿಯ ದರ್ಶನ ಪಡೆದರು. ವಾಡಿಕೆಯಂತೆ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು. ಸಂಜೆ ವರೆಗೂ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.