ADVERTISEMENT

ಮಂಡ್ಯ | ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ ಇ–ಖಾತಾ ಕಡತ ನಾಪತ್ತೆ: ತನಿಖೆಗೆ ತಂಡ

ಇಂಡುವಾಳು ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳಿಗೆ ನೋಟಿಸ್‌: ನ.20ರೊಳಗೆ ತನಿಖಾ ವರದಿ ಸಲ್ಲಿಸಲು ಸೂಚನೆ

ಸಿದ್ದು ಆರ್.ಜಿ.ಹಳ್ಳಿ
Published 16 ನವೆಂಬರ್ 2025, 5:36 IST
Last Updated 16 ನವೆಂಬರ್ 2025, 5:36 IST
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ಕಚೇರಿಯ ಹೊರನೋಟ 
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ಕಚೇರಿಯ ಹೊರನೋಟ    

ಮಂಡ್ಯ: ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1281 ಇ–ಖಾತಾ (ಇ–ಸ್ವತ್ತು) ಕಡತಗಳು ನಾಪತ್ತೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಅವರು ತನಿಖಾ ತಂಡವನ್ನು ರಚಿಸಿದ್ದಾರೆ. 

ಉಪಲೋಕಾಯುಕ್ತರ ಆದೇಶದಂತೆ, 1–4–2021ರಿಂದ 25–5–2025ರವರೆಗೆ ವಿತರಿಸಿರುವ ಒಟ್ಟು 1928 ಇ–ಸ್ವತ್ತು ಕಡತಗಳನ್ನು ಪರಿಶೀಲಿಸಿ, ವರದಿ ನೀಡಲು ಮಂಡ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್‌ ಮೂರ್ತಿ ನೇತೃತ್ವದಲ್ಲಿ ಏಳು ಮಂದಿಯನ್ನು ಒಳಗೊಂಡ ತಂಡ ರಚಿಸಲಾಗಿದೆ. 

ತಂಡದಲ್ಲಿ ಮಂಡ್ಯ ಮತ್ತು ಮದ್ದೂರು ತಾಲ್ಲೂಕು ಪಂಚಾಯಿತಿಯ ಮೂವರು ಸಹಾಯಕ ನಿರ್ದೇಶಕರು, ಇ–ಸ್ವತ್ತು ಮಾಸ್ಟರ್‌ ಟ್ರೈನರ್‌ಗಳಾದ ಕೆನ್ನಾಳು ಮತ್ತು ಬೇವುಕಲ್ಲು ಪಿಡಿಒಗಳು ಹಾಗೂ ತಂಡದ ನೆರವಿಗೆ ಒಬ್ಬ ಕಂಪ್ಯೂಟರ್‌ ಆಪರೇಟರ್‌ ಅನ್ನು ನಿಯೋಜಿಸಲಾಗಿದೆ.

ADVERTISEMENT

ನ.20ರ ಗಡುವು:

ತನಿಖಾ ತಂಡವು ಇಂಡುವಾಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಿ ನೈಜ ವರದಿಯನ್ನು ನ.20ರೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸಿಇಒ ಸೂಚಿಸಿದ್ದಾರೆ. 

ಇ–ಸ್ವತ್ತನ್ನು ಯಾವ ದಾಖಲಾತಿಯ ಆಧಾರದ ಮೇಲೆ ಸೃಜಿಸಲಾಗಿದೆ ಎಂಬ ಬಗ್ಗೆ ಪರಿಶೀಲಿಸಿ, ಕ್ರಮದ್ಧವಾಗಿರುವುದನ್ನು ಖಚಿತಪಡಿಸಿಕೊಂಡು ಮುಂದುವರಿಸುವ ಬಗ್ಗೆ ಕಡತವಾರು ಸ್ಪಷ್ಟ ಅಭಿಪ್ರಾಯ ಸಲ್ಲಿಸಬೇಕು. ಕ್ರಮಬದ್ಧವಲ್ಲದ್ದನ್ನು ಯಾವ ಆದೇಶ ಅಥವಾ ನಿರ್ದೇಶನದ ಅನ್ವಯ ಸೃಜಿಸಲಾಗಿದೆ ಎಂಬ ಬಗ್ಗೆ ಪರಿಶೀಲಿಸಬೇಕು. ಕಾನೂನುಬಾಹಿರವಾಗಿದ್ದಲ್ಲಿ ರದ್ದುಪಡಿಸುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. 

ಸ್ವಯಂಪ್ರೇರಿತ ದೂರು:

ಇಂಡುವಾಳು ಗ್ರಾಮ ಪಂಚಾಯಿತಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೇ ತಿಂಗಳಲ್ಲಿ ಭೇಟಿ ನೀಡಿ, ದಾಖಲೆ ಪರಿಶೀಲಿಸಿದಾಗ ಕಡತಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. 

ಮಂಡ್ಯ ತಹಶೀಲ್ದಾರ್‌ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿಯಾಗಿ ತನಿಖೆ ಮಾಡಿದ ವರದಿಯನ್ನು ನ.3ರಂದು ಉಪಲೋಕಾಯುಕ್ತರ ವಿಚಾರಣೆ ಸಂದರ್ಭ ಸಲ್ಲಿಸಿದ್ದರು. ಈ ವರದಿಯಲ್ಲಿ 1928 ಇ–ಸ್ವತ್ತುಗಳ ಪೈಕಿ 643 ಕಡತಗಳು ಮಾತ್ರ ತನಿಖೆಗೆ ಹಾಜರುಪಡಿಸಿ, ಉಳಿದ 1285 ಕಡತಗಳನ್ನು ಹಾಜರುಪಡಿಸದೇ ಇರುವ ಬಗ್ಗೆ ಮಾಹಿತಿ ನೀಡಲಾಗಿತ್ತು.  

ಎಫ್‌ಐಆರ್‌ ದಾಖಲಿಸಿ:

‘ಎಲ್ಲ ಕಡತಗಳನ್ನು 15 ದಿನದೊಳಗೆ (ನ.17ರಂದು) ತನಿಖೆಗೆ ಹಾಜರುಪಡಿಸಲು, ಸದರಿ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪಿಡಿಒಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಜವಾಬ್ದಾರಿ ನಿಗದಿಪಡಿಸಿ. ತಪ್ಪಿದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಂಡು, ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ’ ಎಂದು ಉಪಲೋಕಾಯುಕ್ತರು ಆದೇಶಿಸಿದ್ದರು. 

5 ವರ್ಷ ಜೈಲು ₹10 ಸಾವಿರ ದಂಡ!

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010ರ ಅನ್ವಯ ಸರ್ಕಾರದ ಎಲ್ಲ ದಾಖಲೆಗಳ ನಿರ್ವಹಣೆ ಹಾಗೂ ಸಂರಕ್ಷಣೆ ಮಾಡಬೇಕಾಗಿರುವುದು ಸರ್ಕಾರಿ ನೌಕರರ ಜವಾಬ್ದಾರಿಯಾಗಿದೆ. ನಿಯಮ ಉಲ್ಲಂಘಿಸಿದರೆ 5 ವರ್ಷಗಳ ಅವಧಿಯವರೆಗೆ ಜೈಲುಶಿಕ್ಷೆ ಅಥವಾ ₹10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದು ಎನ್ನಲಾಗಿದೆ.  2021ರಿಂದ 2025ರ ಅವಧಿಯಲ್ಲಿ ಪಿಡಿಒಗಳಾದ ದಯಾನಂದ ಎ.ಎಸ್‌.ಸಿದ್ದರಾಜು ಎಚ್‌.ಬಿ.ವಿಶಾಲಮೂರ್ತಿ ಕೆ.ಸಿ.ಯೋಗೀಶ್‌ ಕಾರ್ಯದರ್ಶಿಗಳಾದ ದಯಾನಂದ ಬಿ.ವಿ.ಸೋಮು ಮರಿಲಿಂಗಯ್ಯ ಎಸ್‌. ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ರಾಣಿ ಎಚ್‌.ಆರ್‌. ಕರ್ತವ್ಯ ನಿರ್ವಹಿಸಿದ್ದರು. ಇವರ ಅವಧಿಯಲ್ಲಿ 786 ಕಡತಗಳು ನಾಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. 

‘ಇ–ಸ್ವತ್ತುಗಳ ಕ್ರಮಬದ್ಧತೆ ಪರಿಶೀಲನೆ’

‘ನಾಪತ್ತೆಯಾಗಿರುವ ಇ–ಸ್ವತ್ತುಗಳನ್ನು ಹುಡುಕಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ 2021ರಿಂದ 2025ರ ಅವಧಿಯಲ್ಲಿ ಸೃಜನೆಯಾದ ಇ–ಸ್ವತ್ತುಗಳು ಕ್ರಮಬದ್ಧವಾಗಿವೆಯೇ ಅಥವಾ ನಿಯಮಬಾಹಿರವಾಗಿವೆಯೇ ಎಂಬುದನ್ನು ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದೆ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ ತಿಳಿಸಿದರು.  ‘ನ.17ರಂದು ಉಪಲೋಕಾಯುಕ್ತರಿಗೆ ಮಧ್ಯಂತರ ವರದಿ ಸಲ್ಲಿಸಿ ಕಡತಗಳ ಪತ್ತೆಗೆ ಹೆಚ್ಚುವರಿ ಸಮಯವನ್ನು ಕೇಳಲಿದ್ದೇವೆ. ಅಲಭ್ಯ ಕಡತಗಳನ್ನು ನಿಗದಿತ ಅವಧಿಯೊಳಗೆ ಒದಗಿಸಲು ವಿಫಲರಾದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ವರದಿ ಸಲ್ಲಿಸಲು ಮಂಡ್ಯ ತಾಲ್ಲೂಕು ಪಂಚಾಯಿತಿ ಇಒಗೆ ಸೂಚನೆ ನೀಡಿದ್ದೇನೆ’ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.