ADVERTISEMENT

ಮಂಡ್ಯ: ಇ–ಸ್ಕೂಟರ್‌ ಖರೀದಿಗೆ ಹೆಚ್ಚಿದ ಒಲವು

ಜಿಲ್ಲೆಯಾದ್ಯಂತ ಭಾರಿ ಬೇಡಿಕೆ, 16 ಶೋರೂಂ ಸ್ಥಾಪನೆ: ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಮಾರಾಟ

ಎಂ.ಎನ್.ಯೋಗೇಶ್‌
Published 13 ಫೆಬ್ರುವರಿ 2023, 6:03 IST
Last Updated 13 ಫೆಬ್ರುವರಿ 2023, 6:03 IST
ಮಂಡ್ಯದ ಮಾರಾಟ ಮಳಿಗೆಯೊಂದರಲ್ಲಿ ಇ–ಸ್ಕೂಟರ್‌ಗಳ ಪ್ರದರ್ಶನ, ಮಾರಾಟ
ಮಂಡ್ಯದ ಮಾರಾಟ ಮಳಿಗೆಯೊಂದರಲ್ಲಿ ಇ–ಸ್ಕೂಟರ್‌ಗಳ ಪ್ರದರ್ಶನ, ಮಾರಾಟ   

ಮಂಡ್ಯ: ಅಲ್ಪ ವೆಚ್ಚ ಹಾಗೂ ಸರಳ ನಿರ್ವಹಣೆಯ ವಿದ್ಯುತ್‌ ವಾಹನಗಳಿಗೆ (ಇ–ವೆಹಿಕಲ್‌) ಜಿಲ್ಲೆಯಾದ್ಯಂತ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇ– ಸ್ಕೂಟರ್‌ ಖರೀದಿಗೆ ಜನರು ಒಲವು ತೋರುತ್ತಿದ್ದು ಜಿಲ್ಲೆಯಲ್ಲಿ ಇದುವರೆಗೆ 12 ಸಾವಿರಕ್ಕೂ ಹೆಚ್ಚು ವಾಹನ ಮಾರಾಟವಾಗಿದೆ.

ಇಂಧನ ಉಳಿತಾಯ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಿದ್ಯುತ್‌ ಚಾಲಿತ ವಾಹನಗಳಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಪ್ರೋತ್ಸಾಹ ದೊರೆಯುತ್ತಿದೆ. ಕಡಿಮೆ ಖರ್ಚು ಹಾಗೂ ಸರಳವಾಗಿ ನಿರ್ವಹಣೆ ಕಾರಣ
ದಿಂದಾಗಿ ಜನರನ್ನು ಆಕರ್ಷಿಸುತ್ತಿವೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಹೆಚ್ಚು ಸ್ಕೂಟರ್‌ಗಳು ಮಾರಾಟವಾಗುತ್ತಿವೆ.

ಮಹಾನಗರಗಳನ್ನು ಹೊರತು
ಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಇ–ಸ್ಕೂಟರ್‌ಗಳು ಮಂಡ್ಯ ಜಿಲ್ಲೆಯಲ್ಲಿ ಮಾರಾಟವಾಗಿರುವ ವರದಿ ಇದೆ. 2022ನೇ ಸಾಲಿನಲ್ಲಿ ಸರಾಸರಿ ಶೇ 12ರಷ್ಟು ಜನರು ಜಿಲ್ಲೆಯಲ್ಲಿ ಇ–ಸ್ಕೂಟರ್‌ ಖರೀದಿ ಮಾಡಿದ್ದಾರೆ.

ADVERTISEMENT

ಸರ್ಕಾರದ ‘ವಾಹನ್‌’ ಪೋರ್ಟಲ್‌ನಲ್ಲಿ ದಾಖಲಾದ ಅಂಶಗಳ ಪ್ರಕಾರ ಒಂದೇ ವರ್ಷದಲ್ಲಿ 2 ಸಾವಿರ ವಾಹನ ಮಾರಾಟವಾಗಿವೆ. ಇ–ವಾಹನಗಳ ತಂತ್ರಜ್ಞಾನ ನಾಗಾಲೋಟದಲ್ಲಿದ್ದು, ಇನ್ನೂ ಹೆಚ್ಚಿನ ಜನರು ಇ–ವಾಹನಗಳತ್ತ ಬರಲಿದ್ದಾರೆ. 2023ನೇ ಸಾಲಿನಲ್ಲಿ ಸರಾಸರಿ ಶೇ 25ರಷ್ಟು ಜನರು ಜಿಲ್ಲೆಯಲ್ಲಿ ಇ– ಸ್ಕೂಟರ್‌ ಖರೀದಿ ಮಾಡಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ನಗರದಲ್ಲಿ ಎಲ್ಲಿ ನೋಡಿದರೂ ಇ– ಸ್ಕೂಟರ್‌ಗಳೇ ಕಾಣುತ್ತಿದ್ದು ಎಲ್ಲಾ ವರ್ಗಗಳ ಜನರೂ ಇವುಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಕೂಡ ಇ–ಸ್ಕೂಟರ್‌ ಖರೀದಿ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ನಗರದಲ್ಲಿ 16 ಕಂಪನಿಗಳ ಶೋರೂಂಗಳು ತಲೆ ಎತ್ತಿವೆ.

ದೇಶದಲ್ಲಿರುವ ಬಹುತೇಕ ಕಂಪನಿಗಳು ಜಿಲ್ಲೆಯಲ್ಲಿ ಮಾರಾಟ ಮಳಿಗೆ ತೆರೆದಿರುವುದು ವಿಶೇಷ. ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಶೋರೂಂ ಸ್ಥಾಪನೆಯಾಗುತ್ತಿದ್ದು ಹೆಚ್ಚಿನ ಸಂಖ್ಯೆಯ ಜನರು ಪೆಟ್ರೋಲ್‌ ಗಾಡಿಗಳನ್ನು ತ್ಯಜಿಸಿ ಇ–ಸ್ಕೂಟರ್‌ಗಳತ್ತ ಬರುತ್ತಿದ್ದಾರೆ.

2018ರಲ್ಲಿ ಒಕಿನೊವಾ ಕಂಪನಿ ನಗರದ ಕಲ್ಲಹಳ್ಳಿಯಲ್ಲಿ ಮೊಟ್ಟಮೊದಲ ಬಾರಿಗೆ ಮಾರಾಟ ಮಳಿಗೆ ತೆರೆಯಿತು. ಆರಂಭದಲ್ಲಿ ಒಕಿನೊವಾ ಕಂಪನಿಯ ಇ–ಸ್ಕೂಟರ್‌ಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾದವು. ವಹಿವಾಟು ವಿಸ್ತರಣೆ ಮಾಡಿಕೊಂಡ ಕಂಪನಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಶೋಂ ತೆರೆದಿದೆ. ಜಿಲ್ಲೆಯಾದ್ಯಂತ 7 ಶೋರೂಂಗಳಿದ್ದು ಇಲ್ಲಿಯವರೆಗೆ 8 ಸಾವಿರ ಒಕಿನೊವಾ ಇ–ಸ್ಕೂಟರ್‌ ಮಾರಾಟವಾಗಿವೆ.

2020ರಲ್ಲಿ ಹೀರೊ ಎಲೆಕ್ಟ್ರಿಕ್‌ ಕಂಪನಿಯ ಶೋಂರೂಂ ನಗರದ ಆಸ್ಪತ್ರೆ ರಸ್ತೆಯಲ್ಲಿ ಆರಂಭವಾಯಿತು. ಬ್ಯಾಟರಿ, ಮೋಟಾರ್‌, ಕಂಟ್ರೋಲರ್‌, ಚಾರ್ಜರ್‌ ಮುಂತಾದ ಉಪಕರಣಗಳಿಗೆ 3 ವರ್ಷಗಳ ಅನಿಯಮಿತ ಕಿ.ಮೀ ವಾರಂಟಿ ನೀಡಲಾಗುತ್ತಿದ್ದು ಜನರು ಹೀರೊ ಎಲೆಕ್ಟ್ರಿಕ್‌ ಸ್ಕೂಟರ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಇದರ ಜೊತೆಗೆ ಓಲಾ, ಪ‍್ಯೂರ್‌ ಇವಿ, ಟಿವಿಎಸ್‌, ಆಮ್‌ಫಿಯರ್‌, ಏಥರ್‌ ಸೇರಿದಂತೆ ಹಲವು ಕಂಪನಿಗಳು ನಗರದಲ್ಲಿ ಮಾರಾಟ ವಿಸ್ತರಣೆ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ. ಏಕ ಕಂಪನಿ ಸ್ಕೂಟರ್‌ಗಳು ಮಾತ್ರವಲ್ಲದೇ ಹಲವು ಬ್ರಾಂಡ್‌ಗಳ ಇ–ಸ್ಕೂಟರ್ ಮಾರಾಟ ಮಳಿಗೆಗಳು ಸ್ಥಾಪನೆಯಾಗುತ್ತಿವೆ.

ಕೇಂದ್ರ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಿರುವ ಇ–ವಾಹನ ಕಂಪನಿ, ವಾಹನ ನೋಂದಣಿಯಲ್ಲಿ ಶುಲ್ಕ ವಿನಾಯಿತಿ ಹೊಂದಿರುವ ಕಂಪನಿಗಳು ಕೂಡ ನಗರಕ್ಕೆ ಬಂದಿವೆ. ಜೊತೆಗೆ ಸಬ್ಸಿಡಿ ಇಲ್ಲದಿರುವ, ನೋಂದಣಿಯಲ್ಲಿ ವಿನಾಯಿತಿ ಇಲ್ಲದ ಬಹುಬ್ರ್ಯಾಂಡ್‌ ಇ–ವಾಹನಗಳ ಕಂಪನಿಗಳೂ ನಗರದಲ್ಲಿ ಮಾರಾಟ ಮಳಿಗೆ ತೆರೆದಿವೆ.

ನಿರ್ವಹಣೆಯಲ್ಲಿ ಗೊಂದಲ: ಹೆಚ್ಚಿನ ಸಂಖ್ಯೆಯ ಜನರು ಜಿಲ್ಲೆಯಾದ್ಯಂತ ಇ–ಸ್ಕೂಟರ್‌ ಖರೀದಿ ಮಾಡುತ್ತಿದ್ದಾರೆ. ಆದರೆ ಅವುಗಳ ಸಮರ್ಪಕ ನಿರ್ವಹಣೆಯಲ್ಲಿ ವಿಫಲವಾಗುತ್ತಿರುವ ಸಾರ್ವಜನಿಕರು ತಾಂತ್ರಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ.

ಖರೀದಿ ಮಾಡಿರುವ ಬಹುತೇಕ ಸ್ಕೂಟರ್‌ಗಳ ಬ್ಯಾಟರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಸೂಚನೆಗಳನ್ನು ಸರಿಯಾಗಿ ಪಾಲಿಸದಿರುವುದೇ ಇದಕ್ಕೆ ಕಾರಣ ಎಂದು ಕಂಪನಿಗಳ ಸಿಬ್ಬಂದಿ ಹೇಳುತ್ತಾರೆ.

ಇ–ಸ್ಕೂಟರ್‌ ಚಾರ್ಚಿಂಗ್‌ ವಿಚಾರದಲ್ಲಿ ಜನರು ಸೂಚನೆಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ದೂರು ಮೊದಲಿನಿಂದಲೂ ಇದೆ. ಗಾಡಿಯ ಚಾರ್ಚಿಂಗ್‌ ಮುಗಿಯುತ್ತಾ ಬಂದಾಗ ಮಾತ್ರ ಮತ್ತೆ ಚಾರ್ಚಿಂಗ್‌ಗೆ ಇಡಬೇಕು. ಆದರೆ ಚಾರ್ಜಿಂಗ್‌ ಪೂರ್ತಿ ಇದ್ದಾಗಲೂ ಮತ್ತೆ ಮತ್ತೆ ಚಾರ್ಜ್‌ ಮಾಡುತ್ತಿರುವ ಕಾರಣ ಬ್ಯಾಟರಿಗಳು ಹಾಳಾಗುತ್ತಿವೆ ಎಂಬ ಆರೋಪವಿದೆ.

‘ಇ–ಸ್ಕೂಟರ್‌ ಖರೀದಿ ಮಾಡಿದವರು ಕಡ್ಡಾಯವಾಗಿ ಸೂಚನೆ ಪಾಲಿಸಬೇಕು. ದಿನಕ್ಕೆ ಹಲವು ಬಾರಿ ಚಾರ್ಜ್‌ ಮಾಡಲೇಬಾರದು. ಕೆಲವರು ಪೆಟ್ರೋಲ್‌ ಗಾಡಿ ಬಳಸಿದಂತೆ ಬಳಸುತ್ತಿದ್ದಾರೆ. ಹೀಗಾಗಿ ಬ್ಯಾಟರಿ ಹಾಗೂ ಇತರ ಉಪಕರಣಗಳು ಹಾಳಾಗುತ್ತಿವೆ. ಇ–ವಾಹನ ಬಳಕೆ ಸಂಬಂಧ ಮಂಡ್ಯ ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ’ ಎಂದು ಆಟೊಮೊಬೈಲ್‌ ತಜ್ಞ ಪ್ರಸನ್ನಕುಮಾರ್‌ ಹೇಳಿದರು.

ಸ್ಥಾಪನೆಯಾಗದ ಚಾರ್ಚಿಂಗ್‌ ಕೇಂದ್ರ

ಜಿಲ್ಲೆಯಲ್ಲಿ ಇ–ಸ್ಕೂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ ರಾಜ್ಯದ ಗಮನ ಸೆಳೆದಿದ್ದರೂ ಸಾರ್ವಜನಿಕವಾಗಿ ಇಲ್ಲಿಯವರೆಗೆ ಒಂದೂ ಚಾರ್ಜಿಂಗ್‌ ಕೇಂದ್ರಗಳು ತೆರೆದಿಲ್ಲ. ಮೈಸೂರು ಜಿಲ್ಲೆಗಿಂತಲೂ ಹೆಚ್ಚು ಇ–ಸ್ಕೂಟರ್‌ ಮಂಡ್ಯ ಜಿಲ್ಲೆಯಲ್ಲಿ ಮಾರಾಟವಾಗಿವೆ. ಆದರೆ ಮೈಸೂರಿನಲ್ಲಿ ಇರುವ ಸೌಲಭ್ಯ ಮಂಡ್ಯದಲ್ಲಿ ಇಲ್ಲವಾಗಿದೆ.

ಶೋರೂಂಗಳಲ್ಲಿ ಮಾತ್ರ ಚಾರ್ಜಿಂಗ್‌ ಕೇಂದ್ರಗಳಿವೆ. ಮಾರ್ಗ ಮಧ್ಯೆ ವಾಹನದ ಚಾರ್ಜ್‌ ಮುಗಿದರೆ ಬೇರೆಲ್ಲೂ ಚಾರ್ಜ್‌ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸೆಸ್ಕ್‌ಗೆ ಪ್ರಸ್ತಾವ ಸಲ್ಲಿಕೆ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್‌)ದಿಂದ ಸರ್ಕಾರಿ ಹಾಗೂ ಖಾಸಗಿ ಸಹಯೋಗದಲ್ಲಿ ಇ–ವಾಹನ ಚಾರ್ಜಿಂಗ್‌ ಕೇಂದ್ರ ತೆರೆಯಲು ಯೋಜನೆ ರೂಪಿಸಲಾಗಿದೆ. ಹೆಚ್ಚಿನ ಕೇಂದ್ರ ಸ್ಥಾಪನೆಗೆ ಮನವಿ ಬಂದರೆ ಪುರಸ್ಕರಿಸಲಾಗುವುದು. ವಿದ್ಯುತ್‌ ಸರಬರಾಜು ಮಾಡಲಾಗುವುದು ಎಂದು ಸೆಸ್ಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸೆಸ್ಕ್‌ ಕೇಂದ್ರಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ. ಯೋಜನೆ ಪ್ರಕಾರ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 39 ಕಡೆಗಳಲ್ಲಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಮಂಡ್ಯಕ್ಕೆ ಬಾರದ ಇ–ಬಸ್‌

ಮೈಸೂರು – ಬೆಂಗಳೂರು ನಡುವೆ ಪ್ರಾಯೋಗಿಕವಾಗಿ ವಿದ್ಯುತ್‌ ಚಾಲಿತ ಬಸ್‌ ಓಡಾಡುತ್ತಿದೆ. ಪ್ರತಿದಿನ ಬಸ್‌ ಮೈಸೂರಿಗೆ ಬಂದು ವಾಪಸ್‌ ಬೆಂಗಳೂರಿಗೆ ತೆರಳುತ್ತಿದೆ. ಆದರೆ, ಅದು ಬೈಪಾಸ್‌ನಲ್ಲಿ ಸಂಚಾರ ಮಾಡುತ್ತಿರುವ ಕಾರಣ ನೂತನ ಇ–ಬಸ್‌ ನೋಡುವ ಭಾಗ್ಯ ಮಂಡ್ಯ ಜನರಿಗೆ ಇಲ್ಲದಾಗಿದೆ.

ಕೆಂಪು ಬಸ್‌ ಮಾದರಿಯಲ್ಲಿ ಇ–ಬಸ್‌ ಕೂಡ ಮಂಡ್ಯಕ್ಕೆ ಬಂದು ಹೋಗಬೇಕು. ಮಂಡ್ಯ ಜಿಲ್ಲೆಯ ಜನರೂ ಅದರಲ್ಲಿ ಪ್ರಯಾಣ ಮಾಡುವ ಅವಕಾಶ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.