
ಮಂಡ್ಯ: ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 2021–2025ರ ನಡುವೆ ರಚಿಸಲಾದ 1281 ಇ–ಖಾತಾ ಕಡತಗಳು ನಾಪತ್ತೆಯಾಗಿವೆ. ಕಡತಗಳ ಪತ್ತೆಗಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಗಲು–ರಾತ್ರಿ ಕಚೇರಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ರಚಿಸಲಾದ 1929 ಇ–ಖಾತಾ ಕಡತಗಳಲ್ಲಿ ಕೇವಲ 648 ಫೈಲ್‌ಗಳನ್ನು ಮಾತ್ರ ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 617 ಕಡತಗಳು ಕಾನೂನಿಗೆ ಅನುಗುಣವಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಉಪಲೋಕಾಯುಕ್ತರು ನಿರ್ದೇಶಿಸಿದ್ದಾರೆ. ನ.17ರ ವಿಚಾರಣೆ ವೇಳೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಏನಿದು ಪ್ರಕರಣ:
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೇ 26ರಂದು ಇಂಡುವಾಳು ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ಕೊಟ್ಟು, ದಾಖಲೆಗಳನ್ನು ಪರಿಶೀಲಿಸಿದ್ದರು.
ಕಿರಗಂದೂರು ಗ್ರಾಮದ ಸರ್ವೆ ನಂ.26ರ 17 ಗುಂಟೆ ಗೋಮಾಳ ಜಮೀನಿನಲ್ಲಿ ಯಾವುದೇ ಮಂಜೂರಾತಿ ಇಲ್ಲದೇ ಅನ್ಯಕ್ರಾಂತವಾಗದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆಯಾಗದೇ ಇರುವ ಸರ್ಕಾರಿ ಜಮೀನನ್ನು ಒಟ್ಟು 12 ನಿವೇಶನಗಳನ್ನು ವಿಜಯ್‌ಕುಮಾರ್ ಬಿನ್ ಚೆನ್ನಪ್ಪ ಅವರ ಹೆಸರಿನಲ್ಲಿ ಖಾತೆ ಮಾಡಿ, ನಿಯಮಬಾಹಿರವಾಗಿ ನಮೂನೆ 9 ಮತ್ತು 11ಎ ನಮೂನೆಗಳನ್ನು ವಿತರಿಸಿದ್ದಾರೆ ಮತ್ತು ಒಂದೇ ತಿಂಗಳಲ್ಲಿ ಖಾತೆ ವರ್ಗಾವಣೆ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು.
ವರದಿಗೆ ಸೂಚನೆ:
ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆಗಳ ಎಲ್ಲ ಕಡತಗಳನ್ನು ಪರಿಶೀಲನೆ ಮಾಡಿ, ಅವುಗಳ ನೈಜತೆ ಬಗ್ಗೆ ವರದಿ ಮಾಡಲು ಉಪಲೋಕಾಯುಕ್ತರು ಸೂಚಿಸಿದ್ದರು. ಇದರ ಬೆನ್ನಲ್ಲೇ ಜೂನ್ 11ರಂದು ಸ್ವಯಂಪ್ರೇರಿತ ದೂರು ದಾಖಲಾಗಿತ್ತು. ನಂತರ, ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿ ವರದಿ ಸಲ್ಲಿಸಿದ್ದು, ಕಡತಗಳ ನಾಪತ್ತೆ ಬಗ್ಗೆ ಮಾಹಿತಿ ನೀಡಿದ್ದರು.
ನ.17ರೊಳಗೆ ಕಡತಗಳನ್ನು ಪತ್ತೆ ಹಚ್ಚದಿದ್ದರೆ, ಪ್ರಾಧಿಕಾರವು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12(3)ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ದುರಾಡಳಿತ, ಪಕ್ಷಪಾತ, ಸಮಗ್ರತೆಯ ಕೊರತೆ ಮತ್ತು ಕರ್ತವ್ಯ ಲೋಪವನ್ನು ರಾಜ್ಯ ಸರ್ಕಾರಕ್ಕೆ ವರದಿ ಮಾಡುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.
Quote - ನಾಪತ್ತೆಯಾದ ಕಡತಗಳನ್ನು ಪತ್ತೆ ಹಚ್ಚಲು ಪಿಡಿಒ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಡತ ಪತ್ತೆಯಾಗದಿದ್ದರೆ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ಮಾಡಿಸಲಾಗುವುದು – ಕೆ.ಆರ್.ನಂದಿನಿ ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ
ಪಿಡಿಒಗಳ ಅಮಾನತು
ಕಡತ ನಾಪತ್ತೆ ಮತ್ತು ಅವ್ಯವಹಾರ ಪ್ರಕರಣದಲ್ಲಿ ಇಂಡುವಾಳು ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದ ಎಚ್.ಬಿ. ವಿಶಾಲ್ ಮೂರ್ತಿ ಮತ್ತು ಹಾಲಿ ಪಿಡಿಒ ಕೆ.ಸಿ. ಯೋಗೇಶ್ ಇಬ್ಬರನ್ನೂ ಮೇ ತಿಂಗಳಲ್ಲೇ ಅಮಾನತುಗೊಳಿಸಲಾಗಿದೆ. ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗೇಶ್ ಮತ್ತು ಇತರೆ ಪಿಡಿಒಗಳಾದ ಸ್ವಾಮಿ ವಿಶಾಲ್ ಮೂರ್ತಿ ಸಿದ್ದರಾಜು ಅವರು ಎಲ್ಲ ಕಡತಗಳನ್ನು ಒದಗಿಸಿರುವುದಿಲ್ಲ. 1281 ಇ–ಖಾತಾ ಕಡತಗಳನ್ನು ಪತ್ತೆ ಹಚ್ಚದಿರುವುದು ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗುವ ಬೇಜವಾಬ್ದಾರಿ ಕೃತ್ಯವೆಂದು ಪರಿಗಣಿಸಲಾಗಿದೆ. ಈ ಸಮಸ್ಯೆಯನ್ನು 15 ದಿನದೊಳಗೆ (ನ.17ರೊಳಗೆ) ಬಗೆಹರಿಸಲು ಕಾಲಾವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.