ADVERTISEMENT

ಸೆಸ್ಕ್‌: ಸರ್ಕಾರಿ ಇಲಾಖೆ, ಗ್ರಾಹಕರಿಂದ ₹1,105 ಕೋಟಿ ವಿದ್ಯುತ್‌ ಬಿಲ್‌ ಬಾಕಿ!

ಸಿದ್ದು ಆರ್.ಜಿ.ಹಳ್ಳಿ
Published 8 ಜುಲೈ 2025, 3:13 IST
Last Updated 8 ಜುಲೈ 2025, 3:13 IST
   

ಮಂಡ್ಯ: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ (ಸೆಸ್ಕ್‌) ವಿವಿಧ ಸರ್ಕಾರಿ ಇಲಾಖೆಗಳಿಂದ ಬರೋಬ್ಬರಿ ₹874 ಕೋಟಿ ಹಾಗೂ ಖಾಸಗಿ ಗ್ರಾಹಕರಿಂದ ₹231 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಬರಬೇಕಿದೆ. ಒಟ್ಟಾರೆ 1,105 ಕೋಟಿ ವಿದ್ಯುತ್‌ ಬಾಕಿ ವಸೂಲಾತಿ ಮಾಡುವುದು ಇಲಾಖೆಗೆ ದೊಡ್ಡ ಸವಾಲಾಗಿದೆ.  

ಹಾಸನ ಜಿಲ್ಲೆಯಲ್ಲಿ ₹ 268 ಕೋಟಿ, ಮೈಸೂರು ₹265 ಕೋಟಿ, ಮಂಡ್ಯ ₹ 209 ಕೋಟಿ, ಚಾಮರಾಜನಗರ ₹ 125 ಕೋಟಿ ಹಾಗೂ ಕೊಡಗು ಜಿಲ್ಲೆಯಲ್ಲಿ ₹6.30 ಕೋಟಿ ಬಾಕಿ ಇದೆ ಎಂದು ಸೆಸ್ಕ್‌ ತಿಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ₹431 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡು ಅಗ್ರಸ್ಥಾನದಲ್ಲಿದೆ. ಕುಡಿಯುವ ನೀರು ಮತ್ತು ಬೀದಿದೀಪಕ್ಕೆ ಸಂಬಂಧಿಸಿದಂತೆ ₹417 ಕೋಟಿ ಮತ್ತು ಬಹುಗ್ರಾಮ ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್‌ ಶುಲ್ಕದ ಬಾಕಿ ₹₹14.86 ಕೋಟಿಯಿದೆ. 

ADVERTISEMENT

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅತಿ ಹೆಚ್ಚು ವಿದ್ಯುತ್‌ ಬಾಕಿ ಉಳಿಸಿಕೊಂಡಿರುವುದು ಗ್ರಾಮ ಪಂಚಾಯಿತಿಗಳು. ಮೈಸೂರು ಜಿಲ್ಲೆಯಲ್ಲಿ ₹166 ಕೋಟಿ, ಮಂಡ್ಯ ಜಿಲ್ಲೆಯಲ್ಲಿ ₹100 ಕೋಟಿ, ಚಾಮರಾಜನಗರ ಜಿಲ್ಲೆಯಲ್ಲಿ ₹75 ಕೋಟಿ, ಹಾಸನ ಜಿಲ್ಲೆಯಲ್ಲಿ ₹70 ಕೋಟಿ ಹಾಗೂ ಕೊಡಗು ಜಿಲ್ಲೆಯಲ್ಲಿ ₹3.48 ಕೋಟಿ ವಿದ್ಯುತ್‌ ಬಿಲ್‌ ಬಾಕಿಯನ್ನು ಗ್ರಾಮ ಪಂಚಾಯಿತಿಗಳು ಉಳಿಸಿಕೊಂಡಿವೆ.

ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆಗಳು 2 ಹಾಗೂ 3ನೇ ಸ್ಥಾನದಲ್ಲಿವೆ. ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಾವೇರಿ ನೀರಾವರಿ ನಿಗಮ ₹209 ಕೋಟಿ ಮತ್ತು ವಿಶ್ವೇಶ್ವರಯ್ಯ ಜಲ ನಿಗಮ ₹104 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ. 

ಸೆಸ್ಕ್‌ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ ಹಾಸನ ಜಿಲ್ಲೆಯೊಂದೇ ₹268 ವಿದ್ಯುತ್‌ ಬಾಕಿ ಉಳಿಸಿಕೊಂಡಿದ್ದು ಅಗ್ರಸ್ಥಾನದಲ್ಲಿದೆ. ಸಕಾಲದಲ್ಲಿ ವಿದ್ಯುತ್‌ ಬಾಕಿ ಪಾವತಿ ಮಾಡುವಲ್ಲಿ ಮೊದಲಿನಿಂದಲೂ ಶಿಸ್ತು ಕಾಯ್ದುಕೊಂಡಿರುವ ಕೊಡಗು ಜಿಲ್ಲೆ ಕೇವಲ ₹6.30 ಕೋಟಿ ಬಾಕಿ ಉಳಿಸಿಕೊಂಡಿದೆ.

‘ಐದು ಜಿಲ್ಲೆಗಳ ಜನರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಪೂರೈಸುವುದು ಸೆಸ್ಕ್‌ ಹೊಣೆಯಾಗಿದೆ. ಆದರೆ, ಗೃಹ ಬಳಕೆ ಗ್ರಾಹಕರು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡ ಪರಿಣಾಮ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಖರೀದಿಸುವುದು ಸೆಸ್ಕ್‌ಗೆ ದೊಡ್ಡ ಸವಾಲಾಗಿದೆ. ವಿದ್ಯುತ್‌ ಪರಿವರ್ತಕಗಳ (ಟಿ.ಸಿ) ಪೂರೈಕೆ, ಕೊಳವೆಬಾವಿಗಳಿಗೆ ಹೊಸ ವಿದ್ಯುತ್‌ ಸಂಪರ್ಕ, ವಿದ್ಯುತ್‌ ತಂತಿ ದುರಸ್ತಿ ಮುಂತಾದ ಇಲಾಖೆ ಕಾರ್ಯಗಳಿಗೆ ಹಣಕಾಸಿನ ಸಮಸ್ಯೆ ತಲೆದೋರುತ್ತದೆ’ ಎಂದು ಸೆಸ್ಕ್‌ ಎಂಜಿನಿಯರ್‌ಗಳು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.