ADVERTISEMENT

ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಲ್‌ಗೆ ಬಿದ್ದ ಕಾಡಾನೆ

ಫಲ ಕೊಡದ ಅರಣ್ಯ ಇಲಾಖೆ ಕಾರ್ಯಾಚರಣೆ: ಕೆಆರ್‌ಎಸ್‌ ಡ್ಯಾಂನಿಂದ ನೀರಿನ ಹರಿವು ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:01 IST
Last Updated 18 ನವೆಂಬರ್ 2025, 6:01 IST
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಕಾಡಾನೆ ಬಿದ್ದಿದ್ದು ರಕ್ಷಣಾ ಕಾರ್ಯ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಕಾಡಾನೆ ಬಿದ್ದಿದ್ದು ರಕ್ಷಣಾ ಕಾರ್ಯ ನಡೆದಿದೆ.   

ಮಳವಳ್ಳಿ (ಮಂಡ್ಯ): ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯೋನಿಯರ್‌ ಜಂಕೋ ಲಿಮಿಟೆಡ್‌ ವಿದ್ಯುತ್ ಉತ್ಪಾದನಾ ಕೇಂದ್ರ’ದ ಕಾಲುವೆಗೆ ಕಾಡಾನೆ ಬಿದ್ದಿದ್ದು, ಮೂರು ದಿನಗಳಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿದೆ. 

ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಸುವ ಸುಮಾರು 20 ಅಡಿ ಅಳದ ಕೆನಲ್‌ ಗೇಟ್ ಮೂಲಕ ಶನಿವಾರ ರಾತ್ರಿ ಕಾಡಾನೆಯು ನೀರು ಕುಡಿಯಲು ಇಳಿದಿದೆ. ಆದರೆ, ನೀರಿನ ಹರಿವಿನ ರಭಸಕ್ಕೆ ಕಾಲುವೆಯಿಂದ ಮೇಲೆ ಬರಲು ಸಾಧ್ಯವಾಗದೆ ಅಲ್ಲಿಯೇ ಓಡಾಡುತ್ತಿದೆ. 

ಭಾನುವಾರ ಬೆಳಿಗ್ಗೆ ಆನೆಯ ಓಡಾಟವನ್ನು ಗಮನಿಸಿದ ಕೇಂದ್ರದ ಸಿಬ್ಬಂದಿ, ಆನೆ ವಾಪಸ್ ಹೋಗಬಹುದೆಂದು ಕಾದರು. ಆದರೆ, ಸಂಜೆವರೆಗೂ ಅದು ಮೇಲೆ ಬರಲಿಲ್ಲ. ಆಗ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

ADVERTISEMENT

ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಕಾಡಾನೆಯು ಕಾಲುವೆಯಿಂದ ಮೇಲೆ ಬರುವಂತೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಸಂಜೆಯಾದರೂ ಆನೆಯು ಗೇಟ್‌ನಿಂದ ಹೊರಕ್ಕೆ ಬಾರದಿರುವುದರಿಂದ, ಕೆಆರ್‌ಎಸ್‌ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲು ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

‘ಆನೆಯು ಆಹಾರವಿಲ್ಲದೇ ಆತಂಕದಲ್ಲಿರುವುದನ್ನು ಗಮನಿಸಿದ ಅಧಿಕಾರಿಗಳು ಕಬ್ಬು ತರಿಸಿ ಕಾಲುವೆಗೆ ಹಾಕಿದ್ದಾರೆ. ಆನೆಯ ಪ್ರಜ್ಞೆ ತಪ್ಪಿಸಿ ಕ್ರೇನ್ ಮೂಲಕ ಮೇಲೆತ್ತುವ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಎರಡು ಕ್ರೇನ್‌ಗಳನ್ನು ತರಲಾಗಿದೆ’ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

‘ನಿನ್ನೆಯಿಂದ ಕಾರ್ಯಾಚರಣೆ ಸ್ಥಳದಲ್ಲೇ ಇದ್ದೇನೆ. ರಕ್ಷಣಾ ಕಾರ್ಯ ನಿರಂತರವಾಗಿ ನಡೆದಿದೆ’ ಎಂದು ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ತಿಳಿಸಿದರು. 

ಕಾಡಾನೆ ಕಾರ್ಯಾಚರಣೆಗೆ ತೆರಳಿದ ಕ್ರೇನ್‌ 
ಕಾಡಾನೆಯ ರಕ್ಷಣೆ ಕಾರ್ಯಾಚರಣೆ ನಡೆದ ಸ್ಥಳದಿಂದ ಮೂರು ಕಿಲೋ ಮೀಟರ್ ದೂರದಲ್ಲಿಯೇ ಗೇಟ್ ಹಾಕಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ರಹಸ್ಯ ಕಾರ್ಯಾಚರಣೆ: ಆರೋಪ ‘ಕಾಡಾನೆ ಕಾಲುವೆಗೆ ಬಿದ್ದು ಮೂರು ದಿನವಾದರೂ ರಕ್ಷಿಸದ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದ ಬಳಿಕ ಕಾರ್ಯಾಚರಣೆ ಆರಂಭವಾಗಿದೆ. ಮಾಹಿತಿಯನ್ನು ಗೋಪ್ಯವಾಗಿಡಲೆಂದೇ ವಿದ್ಯುತ್ ಉತ್ಪಾದನಾ ಕೇಂದ್ರದ ಸ್ಥಳೀಯ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ’ ಎಂಬ ಆರೋಪ ಕೇಳಿಬಂದಿದೆ.  ‘ಕಾರ್ಯಾಚರಣೆ ಸ್ಥಳಕ್ಕೆ ತೆರಳಲು ಮುಂದಾದ ಸ್ಥಳೀಯರು ಹಾಗೂ ಮಾಧ್ಯಮದವರನ್ನು ತಡೆಯಲಾಗುತ್ತಿದೆ. ಯಾವ ವೈಫಲ್ಯಗಳನ್ನು ಮುಚ್ಚಿಡಲು ಇಂಥ ರಹಸ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಮಲ್ಲಿಕ್ಯಾತನಹಳ್ಳಿಯ ರವಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.