
ಶ್ರೀರಂಗಪಟ್ಟಣ: ಎಳ್ಳಮಾವಾಸ್ಯೆ ನಿಮಿತ್ತ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿಯ ಮಹಾಕಾಳಿ ದೇವಾಲಯಕ್ಕೆ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ, ವಿಧಾನಗಳು ಆರಂಭವಾದವು. ಬಗೆ ಬಗೆಯ ಹೂವು ಮತ್ತು ಹಣ್ಣುಗಳಿಂದ ಮಹಾಕಲಾಳು ದೇವಿಯ ಮೂರ್ತಿಯನ್ನು ಅಲಂಕರಿಸಿ ಪೂಜಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಮೋಹನ ಗುರೂಜಿ ಅವರ ನೇತೃತ್ವದಲ್ಲಿ ದೇವಿಗೆ ಅಭಿಷೇಕ, ಅರ್ಚನೆಗಳು ಜರುಗಿದವು. ಬೆಳಿಗ್ಗೆ 10ರ ವೇಳೆಗೆ ದೇವಾಲಯದ ಆವರಣದಲ್ಲಿ ಭಕ್ತರ ದಂಡೇ ನೆರೆದಿತ್ತು.
ದೇವಾಲಯದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗೀರ ಹೋಮ ನಡೆಯಿತು. ಭಕ್ತರು ದೇವಿಗೆ ಅಕ್ಕಿ, ಬೆಲ್ಲ ಮತ್ತು ತೆಂಗಿನ ಕಾಯಿ ಸಮರ್ಪಿಸಿದರು. ಮಹಿಳಾ ಭಕ್ತರು ನಿಂಬೆ ಹಣ್ಣಿನ ದೀಪ ಬೆಳಗಿದರು. ಹರಕೆ ಹೊತ್ತವರು ‘ತಡೆ’ ಒಡೆಯುವ ಆಚರಣೆಯಲ್ಲಿ ಪಾಲ್ಗೊಂಡರು. ಸ್ಥಳೀಯರು ಮಾತ್ರವಲ್ಲದೆ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ ಇತರ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಪ್ರಸಾದ ವಿತರಣೆ ನಡೆಯಿತು.
ಪಟ್ಟಣದ ಚಾಮುಂಡೇಶ್ವರಿ ದೇವಾಲಯ, ಕ್ಷಣಾಂಬಿಕಾ ದೇವಾಲಯ, ಗಂಜಾಂ ನಿಮಿಷಾಂಬ ದೇವಾಲಯಗಳಲ್ಲಿ ಕೂಡ ಎಳ್ಳಮಾವಾಸ್ಯೆ ನಿಮಿತ್ತ ಶುಕ್ರವಾರ ವಿಶೇಷ ಪೂಜೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.