ADVERTISEMENT

ಪೌರಾಣಿಕ ನಾಟಕ ಪ್ರೋತ್ಸಾಹಿಸಿ: ಶಾಸಕ ಕೆ.ಅನ್ನದಾನಿ ಸಲಹೆ

ತಳಗವಾದಿ ಗ್ರಾಮದೇವತೆ ಪಟ್ಟಲದಮ್ಮನ ಸಿಡಿಹಬ್ಬದಲ್ಲಿ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 5:42 IST
Last Updated 1 ಮಾರ್ಚ್ 2021, 5:42 IST
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಪಟ್ಟಲದಮ್ಮನ ಕೊಂಡೊತ್ಸವ ಸಂಭ್ರಮದಿಂದ ನಡೆಯಿತು
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಪಟ್ಟಲದಮ್ಮನ ಕೊಂಡೊತ್ಸವ ಸಂಭ್ರಮದಿಂದ ನಡೆಯಿತು   

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮದೇವತೆ ಪಟ್ಟಲದಮ್ಮನ ಸಿಡಿಹಬ್ಬ ಸಂಭ್ರಮದಿಂದ ನೆರವೇರಿತು.

ಗ್ರಾಮದ ರಂಗದ ಆವರಣದಲ್ಲಿ ಇರುವ ಮಾರಮ್ಮ ಹಾಗೂ ಹೊರವಲಯದಲ್ಲಿನ ಪಟ್ಟಲದಮ್ಮನ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ನೂರಾರು ಭಕ್ತರು ದೇವಸ್ಥಾನಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಮೆರವಣಿಗೆಯಲ್ಲಿ ಬಂದು ಮಾರಮ್ಮ ಹಾಗೂ ಪಟ್ಟಲದಮ್ಮನಿಗೆ ಪೂಜೆ ಸಲ್ಲಿಸಿದರು.

ADVERTISEMENT

ಶುಕ್ರವಾರ ಸಂಜೆ ಗ್ರಾಮದ ಜನರು ತಮ್ಮ ರಾಸುಗಳಿಗೆ ಅಲಂಕಾರ ಮಾಡಿ ಎತ್ತಿನ ಗಾಡಿ ಹಾಗೂ ಜೋಡಿ ಎತ್ತುಗಳಿಗೆ ಸೌದೆಗಳನ್ನು ಕಟ್ಟಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ದೇವಸ್ಥಾನದ ಬಳಿ ತೆಗೆದಿರುವ ಕೊಂಡಕ್ಕೆ ಸೌದೆಗಳನ್ನು ಹಾಕಿ ಪೂಜೆ ಸಲ್ಲಿಸಿದರು.

ಹಬ್ಬದ ಅಂಗವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶುಕ್ರವಾರ ರಾತ್ರಿ ಆರಂಭವಾದ ದೇವರ ಮೆರವಣಿಗೆಯು ಶನಿವಾರ ಬೆಳಿಗ್ಗೆ ವರೆಗೆ ನಡೆಯಿತು. ಕೊಂಡವನ್ನು ನಾಗರಾಜು ಹಾಗೂ ಮತ್ತೊಬ್ಬರು ಹಾಯುವ ಮೂಲಕ ಸಿಡಿಹಬ್ಬಕ್ಕೆ ತೆರೆಬಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಶಿವಕುಮಾರ್ ಹಾಗೂ ಉಪಾಧ್ಯಕ್ಷೆ ಜಯಲಕ್ಷ್ಮಿ, ನಾಡಗೌಡ ಚಿಕ್ಕಹನುಮಯ್ಯ ಭಾಗವಹಿಸಿದ್ದರು.

ಮನ ಸೆಳೆದ ನಾಟಕ: ಗ್ರಾಮದ ರಂಗದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಉಮಾ ಮಹೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಅಹಿರಾವಣ ಮಹಿರಾವಣ ಅಥವಾ ಮಾರುತಿಯ ಮಹಿಮೆ ಎಂಬ ಪೌರಾಣಿಕ ನಾಟಕ ನೋಡಲು ಅಕ್ಕ-ಪಕ್ಕದ ಹಲವು ಗ್ರಾಮಗಳ ಜನರು ಬಂದಿದ್ದರು. ಆರು ತಿಂಗಳಿಂದ ತರಬೇತಿ ಪಡೆದಿದ್ದ ಪಾತ್ರಧಾರಿಗಳ ಪ್ರದರ್ಶನ ನೋಡುಗರ ಮನ ಸೆಳೆಯಿತು.

ಹನುಮಂತ ಪಾತ್ರಧಾರಿ ಸಿಪಿಎಂ ಮುಖಂಡ ಟಿ.ಎಚ್‌.ಆನಂದ ಹಾಗೂ ಅಹಿರಾವಣ ಪಾತ್ರಧಾರಿ ಜೆಲ್ಲಿ ಚನ್ನಪ್ಪ ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೂರೆಗೊಂಡರು.

ನಾಟಕಕ್ಕೆ ಚಾಲನೆ ನೀಡಿದ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಚರಿತ್ರೆ, ಇತಿಹಾಸವನ್ನು ಮಾತ್ರವಲ್ಲದೆ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಹಲವು ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತಿರುವ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಬೇಕು. ಈ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.

ಯುವಜನರು, ಮಹಿಳೆಯರನ್ನು ರಂಗಭೂಮಿಯತ್ತ ಸೆಳೆದು ಕನ್ನಡ ಸಾಂಸ್ಕೃತಿಕ ಕ್ಷೇತ್ರವನ್ನು ಗಟ್ಟಿಗೊಳಿಸುವ ಕೆಲಸ ನಡೆಯಬೇಕಿದೆ. ರಂಗಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಭವಿಷ್ಯದ ಕಲಾವಿದರ ಬೌದ್ಧಿಕ ಮಟ್ಟ ಸುಧಾರಿಸಿ, ಕಲೆಗೆ ಜೀವ ತುಂಬಬೇಕು. ಇದಕ್ಕಾಗಿ ಕಲಾವಿದರಿಗೆ ಸರ್ಕಾರದ ವತಿಯಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.