ಶ್ರೀರಂಗಪಟ್ಟಣ: ‘ಅರಣ್ಯ ಇಲಾಖೆ ಮತ್ತು ಸಂಘ, ಸಂಸ್ಥೆಗಳು ನೆಡುವ ಗಿಡಗಳಲ್ಲಿ ಬಹುತೇಕ ಒಣಗಿ ಹೋಗುತ್ತಿದ್ದು, ನೆಟ್ಟ ಗಿಡಗಳು ಉಳಿದು ಮರಗಳಾಗಿ ಬೆಳೆಯುವಂತೆ ನಿಗಾ ವಹಿಸಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
‘ಮಳೆಗಾಲ ಶುರುವಾಗಿದ್ದು ಸ್ಥಳಾವಕಾಶ ಇರುವ ಎಲ್ಲ ಕಡೆ ಗಿಡಗಳನ್ನು ನೆಡಬೇಕು. ಪ್ರಾಣಿ, ಪಕ್ಷಿಗಳ ಅನುಕೂಲಕ್ಕಾಗಿ ಹಣ್ಣು ಕೊಡುವ ಗಿಡಗಳನ್ನು ನೆಟ್ಟು ಬೆಳೆಸಬೇಕು. ಮರ ಬೆಳೆಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಕನಿಷ್ಠ ಮನೆಗೆರಡು ಗಿಡಗಳನ್ನು ನೆಟ್ಟು ಬೆಳೆಸಬೇಕು. ಹಾಗಾದರೆ ಹವಾಮಾನ ವೈಪರೀತ್ಯ ತಡೆ ಮತ್ತು ಆಮ್ಲಜನಕದ ಕೊರತೆಯನ್ನು ನೀಗಿಸಲು ಸಾಧ್ಯ’ ಎಂದು ಅವರು ಹೇಳಿದರು.
ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಮಾತನಾಡಿ, ‘ಗಾಳಿ, ನೀರು ಮತ್ತು ಮಣ್ಣಿನ ಆರೋಗ್ಯ ಕೆಡುತ್ತಿದೆ ಎಂದು ತಜ್ಞರ ವರದಿಗಳು ಕಳವಳ ವ್ಯಕ್ತಪಡಿಸಿವೆ. ಪರಸರಕ್ಕೆ ಮಾರಕವಾದ ಕ್ರಿಮಿನಾಶಕ ಬಳಕೆ ಮತ್ತು ಹಾನಿಕಾರಕ ಹೊಗೆ ಉಗುಳುವ ಕೈಗಾರಿಕೆಗಳನ್ನು ನಿಯಂತ್ರಿಸಬೇಕು. ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಬೇಕು’ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ವಲಯ ಅರಣ್ಯಾಧಿಕಾರಿ ವಿನೋದಗೌಡ, ಡಿಆರ್‌ಎಫ್‌ಒ ಬಿ.ಎಂ. ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್, ಶಿಕ್ಷಣ ಸಮನ್ವಯಾಧಿಕಾರಿ ಪ್ರಭಾ ನಂಜಪ್ಪ, ‘ಪರಿಸರ’ ರಮೇಶ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.