ADVERTISEMENT

ಮಂಡ್ಯ | ಅರಣ್ಯದೊಳಗಿನ ರಸ್ತೆ ಅಭಿವೃದ್ಧಿಗೆ ಅಡ್ಡಿ ಇಲ್ಲ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:06 IST
Last Updated 25 ಜುಲೈ 2025, 2:06 IST
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಮಂಡ್ಯ ಜಿಲ್ಲೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅರಣ್ಯ ತೀರುವಳಿ ಪ್ರಕರಣಗಳ ಕುರಿತ ಸಭೆಯು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ ಪಾಲ್ಗೊಂಡಿದ್ದರು 
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಮಂಡ್ಯ ಜಿಲ್ಲೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅರಣ್ಯ ತೀರುವಳಿ ಪ್ರಕರಣಗಳ ಕುರಿತ ಸಭೆಯು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ ಪಾಲ್ಗೊಂಡಿದ್ದರು    

ಮಂಡ್ಯ: ಅರಣ್ಯದೊಳಗೆ ಹಾಲಿ ಇರುವ ಅಧಿಕೃತ ನಕಾಶೆ ರಸ್ತೆಯ ಅಭಿವೃದ್ಧಿಗೆ ಯಾವುದೇ ಅಡ್ಡಿ ಇಲ್ಲ, ಆದರೆ ವಿಸ್ತರಣೆಗೆ ನಿಯಮಾನುಸಾರ ಅನುಮತಿ ಪಡೆಯಬೇಕಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಗುರುವಾರ ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಮಂಡ್ಯ ಜಿಲ್ಲೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅರಣ್ಯ ತೀರುವಳಿ ಪ್ರಕರಣಗಳ ಕುರಿತ ಸಭೆಯ ಸಹ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿರತೆ ಊರಿಗೆ ಬಂದಾಗ, ಕೂಡಲೇ ಬೋನು ಇಟ್ಟು ಸೆರೆ ಹಿಡಿಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆ.ಆರ್.ಪೇಟೆ ತಾಲ್ಲೂಕು ಬೆಳ್ಳಿ ಬೆಟ್ಟ ಕಾವಲು ಸರ್ವೆ ನಂ. 1ರಲ್ಲಿ ಜಂಟಿ ಸರ್ವೆ ನಡೆಸಲು ಅರಣ್ಯ ಇಲಾಖೆ ಸಿದ್ಧವಿದೆ. ಇದಕ್ಕೆ ಜಿಲ್ಲಾಡಳಿತ ಸಹಕರಿಸಬೇಕು ಎಂದು ತಿಳಿಸಿದ ಈಶ್ವರ ಖಂಡ್ರೆ ತಿಳಿಸಿದರು.

ADVERTISEMENT

ನಕಾಶೆ ಸರಿಪಡಿಸಿ:

ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪರಿಭಾವಿತ ಅರಣ್ಯ ಪ್ರದೇಶಗಳ ನಕಾಶೆ ಸರಿಪಡಿಸಬೇಕಿದೆ ಎಂದು ಅಧಿಕಾರಿಗಳು ಶಾಸಕರು ಅಭಿಪ್ರಾಯಪಟ್ಟಿದ್ದು ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿ ಗೊಂದಲಗಳನ್ನು ಇತ್ಯರ್ಥ ಪಡಿಸುವಂತೆ ಸೂಚಿಸಲಾಯಿತು.

ಅಧಿಕಾರಿಗಳು ನಿಯಮಗಳ ವ್ಯಾಪ್ತಿಯೊಳಗೆ ಇರುವ ಪರಿಹಾರ ಮಾರ್ಗಗಳನ್ನು ಕಂಡಕೊಳ್ಳಬೇಕು. ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಹಾಗೂ ಮಾನವ ವನ್ಯಜೀವಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿ ಎಂದು ಉಭಯ ಸಚಿವರು ನಿರ್ದೇಶನ ನೀಡಿದರು.

ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲೆಯ ವ್ಯಾಪ್ತಿ ಅರಣ್ಯ ಇಲಾಖೆಯಿಂದ ಅನುಮತಿ ಬೇಕಿರುವ ಕಾಮಗಾರಿಗಳ ವಿವರ ಮಂಡಿಸಿದರು.

ಸಭೆಯಲ್ಲಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌, ಕೆ.ಎಂ.ಉದಯ್‌, ದರ್ಶನ್ ಪುಟ್ಟಣ್ಣಯ್ಯ, ಎಚ್‌.ಟಿ.ಮಂಜು, ಮಧು ಮಾದೇಗೌಡ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪ್ರಭಾಷ್‌ ಚಂದ್ರ ರೇ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಮಹೇಶ್ ಶಿರೂರ್, ಮನೋಜ್ ಕುಮಾರ್, ಮಾಲತಿ ಪಾಲ್ಗೊಂಡಿದ್ದರು.

‘ಸಾರ್ವಜನಿಕ ಹಿತಾಸಕ್ತಿ ಅರಣ್ಯ ಸಂರಕ್ಷಣೆ ಎರಡೂ ಮುಖ್ಯ’

‘ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಅರಣ್ಯ ಸಂರಕ್ಷಣೆಗಳೆರೆಡೂ ಮುಖ್ಯ. ಸಮತೋಲನ ಕಾಯ್ದುಕೊಂಡು ಪರಸ್ಪರ ಸಮನ್ವಯದಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಿ’ ಎಂದು ಕೃಷಿ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸೂಚಿಸಿದರು. ಮಂಡ್ಯ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಸಂದರ್ಭಗಳಲ್ಲಿ ಅರಣ್ಯದ ವಿಚಾರವಾಗಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಉಭಯ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸಲಹೆ ಸೂಚನೆ ನಿರ್ದೇಶನಗಳನ್ನು ನೀಡಿದರು. ಅರಣ್ಯ ನಿಯಮಾವಳಿಗಳ ಬಗ್ಗೆ ಸುಪ್ರೀಂ ಕೋರ್ಟ್ ಬಿಗಿ ನಿಲುವು ಹೊಂದಿರುವುದು ಗಮನಾರ್ಹ. ಆದರೆ ಕುಡಿಯುವ ನೀರು ವಿದ್ಯುತ್ ಸಂಪರ್ಕಗಳಂತಹ ಮೂಲಸೌಕರ್ಯಗಳಿಗೆ ಮಾನವೀಯ ದೃಷ್ಟಿ ಅಗತ್ಯ ಎಂದು ಚಲುವರಾಯಸ್ವಾಮಿ ಹೇಳಿದರು.

‘ಮಿಮ್ಸ್‌’ ಮೇಲ್ದರ್ಜೆಗೇರಿಸಲು ಕ್ರಮ: ಸಚಿವ 

‘ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಜೊತೆಗೆ ನವೀಕರಣ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ ತಿಳಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಮಂಡ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಅಭಿವೃದ್ದಿ ಕುರಿತು ವಿಸ್ತೃತ ಚರ್ಚೆ ನಡೆಸಿದ ನಂತರ ಉಭಯ ಸಚಿವರು ಎಲ್ಲಾ ರೀತಿಯ ಅಗತ್ಯ ನೆರವು ನೀಡುವ ಭರವಸೆ ನೀಡಿದರು. ‘ಆಸ್ಪತ್ರೆಯಲ್ಲಿ ಈಗಾಗಲೇ 400 ಹಾಸಿಗೆಗಳಿಗೆ ಅನುಮೋದನೆ ಇದ್ದರೂ ಸಹ 800ಕ್ಕೂ ಅಧಿಕ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಇದನ್ನು 850 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸುವ ಅಗತ್ಯ ಇದೆ’ ಎಂದು ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವರು ಪರಿಸರ ಇಲಾಖೆ ಪರವಾನಗಿ ನವೀಕರಿಸಿ 500 ಹಾಸಿಗೆಗಳ ಮೇಲ್ದರ್ಜೆಗೆರಿಸಲು ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.